'ಸಖತ್'​ ಸಿನಿಮಾ ವಿರುದ್ಧ ಎದ್ದಿತೊಂದು ದನಿ, ಅಂಧರ ಕ್ಷಮೆ ಕೋರಲು ಮುಂದಾದ್ರು ಚಿತ್ರ ನಿರ್ದೇಶಕ ಸುನಿ..

Suni
Published on

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಸಿನಿಮಾ ಚಟುವಟಿಕೆಗಳು ವಿವಾದಕ್ಕೆ ಈಡಾಗುತ್ತಿರುವ ಪ್ರಕರಣ ಮೇಲಿಂದ ಮೇಲೆ ಕಂಡುಬರುತ್ತಿದ್ದು, ಇದೀಗ 'ಸಖತ್' ಸಿನಿಮಾ ಕೂಡ ಅಂಥದ್ದೊಂದು ಪರಿಸ್ಥಿತಿ ಎದುರಿಸುವಂತಾಗಿದೆ.

ಒಂದಷ್ಟು ತಿಂಗಳುಗಳ ಹಿಂದೆ ಬ್ರಾಹ್ಮಣರನ್ನು ಅವಮಾನಿಸುವ ದೃಶ್ಯಗಳಿವೆ ಎಂದು 'ಪೊಗರು' ಸಿನಿಮಾ ವಿರುದ್ಧ ಭಾರಿ ವಿರೋಧ ವ್ಯಕ್ತವಾಗಿತ್ತು. ಬಳಿಕ ನಿರ್ದೇಶಕ ನಂದಕಿಶೋರ್, ನಾಯಕ ಧ್ರುವ ಸರ್ಜಾ ಆ ಬಗ್ಗೆ ಕ್ಷಮೆ ಕೋರಿದ್ದರು.

ಇತ್ತೀಚೆಗೆ ಸಾಂಗ್ ರಿಲೀಸ್ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರಿಗೆ ಅವಮಾನ ಆಗುವಂತೆ ನಡೆದುಕೊಳ್ಳಲಾಗಿದೆ ಎಂದು ಏಕ್ ಲವ್ ಯಾ ಚಿತ್ರತಂಡ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ನಿರ್ದೇಶಕ ಪ್ರೇಮ್​, ನಿರ್ಮಾಪಕಿ ರಕ್ಷಿತಾ, ನಟಿ ರಚಿತಾ ರಾಮ್ ಕೂಡ ಕ್ಷಮೆ ಕೋರಿದ್ದರು.

ಕಳೆದ ವಾರವಷ್ಟೇ ಬಿಡುಗಡೆ ಆಗಿದ್ದ ಗರುಡಗಮನ ವೃಷಭವಾಹನ ಸಿನಿಮಾದಲ್ಲೂ ಒಂದಷ್ಟು ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂಥ ದೃಶ್ಯಗಳಿವೆ ಎಂಬ ಆರೋಪ ಕೆಲವರಿಂದ ವ್ಯಕ್ತವಾಗಿತ್ತು. ಇದೀಗ ಇಂದು ಬಿಡುಗಡೆ ಆಗಿರುವ ಸಖತ್ ಸಿನಿಮಾ ವಿರುದ್ಧ ಕೂಡ ದನಿಯೊಂದು ಎದ್ದಿದ್ದು, ಆ ಸಂಬಂಧ ನಿರ್ದೇಶಕ ಸಿಂಪಲ್ ಸುನಿ ಕ್ಷಮೆ ಯಾಚಿಸುವುದಾಗಿ ಹೇಳಿದ್ದಾರೆ.

ಸಿನಿಮಾದಲ್ಲಿ ಅಂಧರನ್ನು ಅಪಮಾನಿಸಲಾಗಿದೆ ಎಂದು ಅಂಧರ ಅಸೋಸಿಯೇಷನ್​ನವರು ಚಿತ್ರ ಪ್ರದರ್ಶನಕ್ಕೆ ಸ್ಟೇ ತರಲು ಮುಂದಾದ ಹಿನ್ನೆಲೆಯಲ್ಲಿ ಅವರು ಈ ಕುರಿತು ಸ್ಪಷ್ಟನೆಯನ್ನು ನೀಡಿದ್ದಾರೆ. ಈ ಸಿನಿಮಾದಲ್ಲಿ ಅಂಧನೇ ಕಥಾನಾಯಕ. ಗೋಲ್ಡನ್ ಸ್ಟಾರ್ ಗಣೇಶ್ ಈ ಪಾತ್ರದಲ್ಲಿ ಅಭಿನಯಿಸಿದ್ದಾರೆ.

'ಸಖತ್' ಸಿನಿಮಾ ಅಂಧರ ವಿಷಯವಾಗಿದ್ದು, ಅದರಲ್ಲಿ ಅಂಧರ ಮನ ನೋಯಿಸುವಂಥ ಅಂಶಗಳಿದ್ದರೆ ಶುಕ್ರವಾರ ನಿಮಗೆ ಸಿನಿಮಾ ತೋರಿಸಿ, ನೀವು ಹೇಳುವ ತಿದ್ದುಪಡಿಗಳನ್ನು ಮಾಡಿಕೊಳ್ಳಲು ಒಪ್ಪಿರುತ್ತೇನೆ ಎಂದು ನಿರ್ದೇಶಕ ಸುನಿ ಹೇಳಿದ್ದಾರೆ. ತಿಳಿದೋ ತಿಳಿಯದೆಯೋ ತಪ್ಪಾಗಿದ್ದರೆ ನಾನು ಮತ್ತು ನನ್ನ ತಂಡ ನಿಮ್ಮಲ್ಲಿ ಕ್ಷಮೆ ಯಾಚಿಸುವುದಾಗಿ ಹೇಳಿರುವ ಅವರು, ಇಂದು ರಾತ್ರಿ ಈ ವಿಷಯ ಸಂಬಂಧ ಸುದ್ದಿಗೋಷ್ಠಿಯನ್ನು ಕರೆದಿದ್ದು, ಮತ್ತಷ್ಟು ಮಾಹಿತಿ ಹಾಗೂ ಸ್ಪಷ್ಟನೆ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net