

Snake Bite : ಹಾವಿನ ದ್ವೇಷ ಹನ್ನೆರಡು ವರ್ಷ ಎಂಬ ಮಾತಿದೆ. ತನಗೆ ಹಿಂಸೆ ನೀಡಿದವರ ವಿರುದ್ಧ ಹಾವುಗಳು ಸೇಡು ತೀರಿಸಿಕೊಳ್ಳುವುದನ್ನು ಸಿನಿಮಾ ಹಾಗೂ ಕಥೆಗಳಲ್ಲಿ ನಾವು ನೋಡಿರುತ್ತೇವೆ ಮತ್ತು ಕೇಳುತ್ತೇವೆ. ಆದರೆ, ವಾಸ್ತವವಾಗಿ ಇಂತಹ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ.
ಉತ್ತರಪ್ರದೇಶದ ರಾಯ್ಬರೇಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಯುವಕನೊಬ್ಬ ಹೊಲದಲ್ಲಿ ಕೆಲಸ ಮಾಡುವ ವೇಳೆ ಹಾವನ್ನು ನೋಡಿ ಅದನ್ನು ಕೊಂದು ಹಾಕಿದ್ದ. ಅಲ್ಲದೆ, ಹಾವಿನ ಮೇಲೆ ಕಾಲಿಟ್ಟು ತುಳಿದಿ ಹಿಂಸೆ ನೀಡಿದ್ದ. ಇದಾದ ಒಂದು ಗಂಟೆಯ ನಂತರ ಮತ್ತೊಂದು ಹಾವು ಯುವಕನ ಕೈಗೆ ಕಚ್ಚಿದ್ದು, ಆತ ಸಾವಿಗೀಡಾಗಿದ್ದಾನೆ.
ಮೃತ ಯುವಕನನ್ನು ಗೋವಿಂದ್ ಕಶ್ಯಪ್ (32) ಎಂದು ಗುರುತಿಸಲಾಗಿದೆ. ಈತ ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ತಮ್ಮ ಗ್ರಾಮದ ನಿವಾಸಿ ಅತುಲ್ ಸಿಂಗ್ ಎಂಬುವರು ಮಂಗಳವಾರ ಬೆಳಗ್ಗೆ ತಮ್ಮ ಹೊಲದಲ್ಲಿ ಭತ್ತ ಕಟಾವು ಮಾಡಿ ಹುಲ್ಲು ಸಂಗ್ರಹಿಸುವಾಗ ಹಾವೊಂದು ಹೊರಬಂದಿತು. ಈ ವೇಳೆ ಅಲ್ಲಿಯೇ ಇದ್ದ ಗೋವಿಂದ್ ಹಾವನ್ನು ನೋಡಿ ದೊಣ್ಣೆಯಿಂದ ಹೊಡೆಯಲು ಆರಂಭಿಸಿದರು. ಅಲ್ಲದೆ, ಗಾಯಗೊಂಡಿದ್ದ ಹಾವನ್ನು ತುಳಿದು ಕೊಂದರು.
ಇದಾದ ಬಳಿಕ ಗೋವಿಂದ್, ಸತ್ತ ಹಾವನ್ನು ಅಲ್ಲಿಯೇ ಬಿಟ್ಟು ಆಹಾರ ಸೇವಿಸಲು ತೆರಳಿದನು. ಸ್ವಲ್ಪ ಸಮಯದ ನಂತರ ಮತ್ತೊಂದು ಹಾವು ಸತ್ತ ಹಾವಿನ ಬಳಿ ಬಂದಿತು. ಸುಮಾರು ಒಂದು ಗಂಟೆಯ ನಂತರ ಗೋವಿಂದ್ ಮತ್ತೆ ಮೈದಾನಕ್ಕೆ ಕೆಲಸ ಮಾಡಲು ಹಿಂತಿರುಗಿದಾಗ ಹಾವು ಗೋವಿಂದ್ ಕೈಗೆ ಕಚ್ಚಿ ಸೇಡು ತೀರಿಸಿಕೊಂಡಿದೆ.
ಹಾವು ಕಚ್ಚಿದ್ದನ್ನು ನೋಡಿದ ಗೋವಿಂದ್ ಮನೆ ಕಡೆ ಓಡಿದ್ದಾನೆ. ಆದರೆ, ನಿತ್ರಾಣಗೊಂಡು ದಾರಿಯಲ್ಲಿ ಬಿದ್ದಿದ್ದಾನೆ. ಗೋವಿಂದನಿಗೆ ನೀರು ಕೇಳಲು ಕೂಡ ಸಾಧ್ಯವಾಗಲಿಲ್ಲ. ಗೋವಿಂದ್ನನ್ನು ಕಚ್ಚಿದ ಹಾವು ಸಮೀಪದ ಪೊದೆಗಳಿಗೆ ನುಸುಳಿತು. ಹಾವು ಕಚ್ಚಿರುವ ವಿಚಾರ ಕುಟುಂಬಸ್ಥರಿಗೆ ತಿಳಿದು, ಸ್ಥಳಕ್ಕೆ ಬಂದು ಗೋವಿಂದ್ನನ್ನು ಕರೆದುಕೊಂಡು ನೇರವಾಗಿ ವೈದ್ಯರ ಬಳಿ ಹೋದರು. ಆದರೆ, ತಡವಾದ್ದರಿಂದ ಹಾವಿನ ವಿಷ ಗೋವಿಂದ್ನ ದೇಹದಾದ್ಯಂತ ಹರಡಿ, ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದರು.
ಗೋವಿಂದ್ ಸಾವಿನ ನಂತರ ಮನೆಯಲ್ಲಿ ದುಃಖದ ಕಾರ್ಮೋಡ ಕವಿದಿದೆ. ಅಲ್ಲದೆ, ಗೋವಿಂದನಿಗೆ ಕಚ್ಚಿದ ಹಾವಿಗಾಗಿ ಗ್ರಾಮಸ್ಥರು ಹುಡುಕುತ್ತಿದ್ದಾರೆ. (ಏಜೆನ್ಸೀಸ್)