

ವಿಜಯವಾಣಿ ‘ದೀಪಾವಳಿ ಕಥಾ ಸ್ಪರ್ಧೆ ( Story writing Competition ) -2024’ರಲ್ಲಿ ಪ್ರಥಮ ಬಹುಮಾನ ಗಳಿಸಿದ ಕಥೆ.
ಕಾರಿನಿಂದಿಳಿದು ಸೊಂಟ, ಕೈ ಕಾಲು ಎಲ್ಲ ಸರಿ ಮಾಡಿಕೊಂಡು ಹೆಜ್ಜೆ ಎತ್ತಿಡಲು ನಿಮಿಷಗಳೆ ಬೇಕಾಯಿತು ವನಜ ಅವರಿಗೆ. ಗಂಡ ರಾಮನಾಥ್ ಅದಾಗಲೆ ಕಾರಿಳಿದು ಮಾತ್ರೆಗಳ ಬ್ಯಾಗ್ ಎತ್ತಿಕೊಳ್ಳುತ್ತಿದ್ದರು. ಯಾವುದನ್ನು ಬಿಟ್ಟರೂ ಔಷಧಿಗಳನ್ನು ಬಿಡುವಂತಿಲ್ಲವಲ್ಲ. ನಿಮ್ಮ ಕೆಲಸ ಮುಗಿಯುತ್ತಿದ್ದಂತೆ ಕರೆ ಮಾಡಿ. ನಾನು ಪಕ್ಕದೂರಿನ ನೆಂಟರನ್ನು ಭೇಟಿ ಮಾಡಿ ಬರ್ತೇನೆ ಎನ್ನುತ್ತ ಅವರ ಪ್ರತಿಕ್ರಿಯೆಗೂ ಕಾಯದೆ ಹೊರಟೆ ಬಿಟ್ಟ ಡ್ರೆವರ್. ಮಣ್ಣಿನ ಹಾದಿಯಲ್ಲಿ ಎದ್ದ ಧೂಳು ದೊಡ್ಡದೊಂದು ಪರದೆ ಸೃಷ್ಟಿಸಿತು.
ಬಣ್ಣ ಕಾಣದ ತುಕ್ಕು ಹಿಡಿದ ಗೇಟು ತೆರೆಯುತ್ತಿದ್ದಂತೆ ಕಿರ್ರನೆ ಸದ್ದು ಮಾಡಿತು. 'ಸಸ್ಯಕಾಶಿ' ಎಂದು ಬರೆದಿದ್ದ ಬೋರ್ಡಿನ ಬಣ್ಣ ಅಲ್ಲಲ್ಲಿ ಕಿತ್ತು ಹೋಗಿ ಹಳತಾಗಿ ಅಕ್ಷರಗಳು ಕಾಣದಂತಾಗಿದ್ದವು. ಸುತ್ತಲೂ ನೋಡುತ್ತಾ ಒಳಗಡಿಯಿಟ್ಟರು ವನಜ. ತೋಟದ ಮನೆಯ ಬಳಿಗೆ ಹೋಗುವ ಹಾದಿಯ ಎರಡೂ ಬದಿಯಲ್ಲಿ ವಿವಿಧ ಬಗೆಯ ಕಳೆಸಸ್ಯಗಳು, ಪಾರ್ಥೇನಿಯಂ, ಗಿಡಗಂಟೆ ಬೆಳೆದು ಅಂಗೈಯಗಲದ ದಾರಿಯಷ್ಟೆ ಚೆನ್ನಾಗಿತ್ತು.
ವನಜ ಸಂಕಟದಿಂದ ಗಂಡನೆಡೆ ತಿರುಗಿ ಒಮ್ಮೆ ನೋಡಿದರು. ಆ ನೋಟದಲ್ಲಿ ನೂರು ಭಾವಗಳಿದ್ದವು. ನೋವಿನ ಎಳೆಗಳಿದ್ದವು. ರಾಮನಾಥರಿಗೆ ಹೆಂಡತಿ ಮನ ಅರ್ಥವಾಗಿತ್ತು. ತನ್ನ ತುಂಬಿಕೊಂಡ ಕಣ್ಣುಗಳು ಹೆಂಡತಿಗೆ ಕಾಣದಿರಲೆಂದು ಅವಳನ್ನು ದಾಟಿ ಮುಂದೆ ಬಿರುಸಾಗಿ ಹೆಜ್ಜೆಯಿಟ್ಟರು.
ಯಾವಾಗಲಾದರೂ ತೋಟ ನೋಡಲು ಬಂದಾಗ ಉಳಿದುಕೊಳ್ಳಲೆಂದು ಕಟ್ಟಿಸಿದ್ದ ಪುಟ್ಟ ಹೆಂಚಿನ ಮನೆಯಲ್ಲಿ ಈಗ ತೋಟ ನೋಡಿಕೊಳ್ಳುತ್ತಿದ್ದ ಗಿರಿ ಮತ್ತವನ ಕುಟುಂಬವಿತ್ತು. ತಾನು ಹಠ ಮಾಡಿ ಹೆಂಚಿನ ಮನೆಯೆ ಬೇಕೆಂದು ಕಟ್ಟಿಸಿಕೊಂಡ ನೆನಪಿನೊಂದಿಗೆ ವನಜ ಮನೆಯತ್ತ ನೋಡಿದಳು. ಒಣಗಿದ ಎಲೆ ಮನೆಯ ಮೇಲೆಲ್ಲ ಉದುರಿದ್ದವು. ಗೋಡೆಯ ಬಣ್ಣ ಉದುರಿ ಮಾಸಿತ್ತು. ತನ್ನ ಮೂಲ ಅಂದ ಕಳೆದುಕೊಂಡು ಮಂಕಾದಂತೆ ಕಾಣುತ್ತಿದ್ದ ಮನೆ ನೋಡಿ ಮನದೊಳಗೆ ನೋವಿನ ಎಳೆ ಮೀಟಿದಂತಾಯಿತು. ಅದರ ಸ್ವರೂಪ ತನ್ನ ವೃದ್ದಾಪ್ಯವನ್ನು ಸಂಕೇತಿಸುತ್ತಿರುವಂತೆ ಭಾಸವಾಯಿತು. ದಾರಿಯ ಇಕ್ಕೆಲಗಳಲ್ಲೂ ಎತ್ತರಕ್ಕೆ ಬೆಳೆದು ನಿಂತಿದ್ದ ಎಂತದೊ ಕಳೆ ಹುಲ್ಲಿನ ಗಿಡ ಒಣಗಿ ನಡೆಯುವಾಗ ಕೈಗೆ ತಾಗಿ ಚುಚ್ಚಿದಂತಾಗುತ್ತಿತ್ತು. ಇಲ್ಲಿ ಮನೆ ಕಟ್ಟಿದಾಗ ತಿಂಗಳಿಗೆ ಎರಡೊ ಮೂರೊ ಬಾರಿಯೊ ಬರುತ್ತಿದ್ದ ಗಂಡ ಗೇಟಿನಿಂದ ಮನೆಯವರೆಗೂ ಬಗೆಬಗೆಯ ಹೂವಿನ ಗಿಡಗಳನ್ನು ನೆಡಿಸಿದ್ದರು. ಅವೆಲ್ಲವೂ ಹೂವರಳಿಸಿ, ಸುಗಂಧ ಬೀರಿ ಕಣ್ಣಿಗೆ ಮನಸ್ಸಿಗೆ ಮುದ ನೀಡುತ್ತಿದ್ದವು. ಯೋಚಿಸುತ್ತಲೆ ಮನೆಯ ಹತ್ತಿರ ಬಂದ ವನಜಳಿಗೆ, ಮನೆಯ ಬಾಗಿಲಿನಲ್ಲಿ ಶಾಲಾಬ್ಯಾಗ್ ಹೆಗಲಿಗೇರಿಸಿ ನಿಂತ ಗಿರಿಯ ಪುಟ್ಟ ಮಗಳು ಕಾಣಿಸಿದಳು. ಜೊತೆಗೆ ಅವರ ಕಣ್ಣು ಕ್ಷಣಮಾತ್ರದಲ್ಲಿ ಅಲ್ಲಿನ ಎಲ್ಲವನ್ನು ಗಮನಿಸಿತ್ತು. ಮನೆಯ ಮುಂದೆ ಕುಳಿತುಕೊಳ್ಳಲೆಂದು ಕಟ್ಟಿಸಿದ್ದ ಜಗುಲಿಯ ಮೇಲೆ ಹಳೆಯ ಚೀಲ, ಪೇಪರ್, ನೀರಿನ ಬಾಟಲ್, ಕಿತ್ತುಹೋದ ಮೊರ, ಬುಟ್ಟಿ...ಹೀಗೆ ಬೇಡದ ವಸ್ತುಗಳನ್ನು ಪೇರಿಸಿಡಲಾಗಿತ್ತು. ಮನೆಯ ಮುಂದೆ ತಾನೆ ನೆಟ್ಟ ಮಲ್ಲಿಗೆ ಬಳ್ಳಿ ಎತ್ತೆತ್ತಲೊ ಹರಡಿಕೊಂಡು ಅಸ್ತವ್ಯಸ್ತವಾಗಿ ಹರಡಿಕೊಂಡು ಯಜಮಾನನಿಲ್ಲದ ಮನೆಯಂತಿತ್ತು. ಮೈತುಂಬಾ ಹೂವರಳಿಸಿಕೊಂಡಿರುತ್ತಿದ್ದ ಬಳ್ಳಿ ಖಾಯಿಲೆ ಬಿದ್ದ ರೋಗಿಯಂತಾಗಿತ್ತು. ಮನೆಯ ಮುಂದಿನ ತೊಲೆಯಲ್ಲಿ ಗಿಳಿಯೊಂದರ ಪಂಜರ ನೇತಾಡುತ್ತಿತ್ತು. ಬಣ್ಣದ ಕಾಗದ, ಉಲ್ಲನ್ನಿಂದ ಮಾಡಿದ ಪುಟ್ಟ ಗೊಂಡೆ, ಬಣ್ಣದ ಮಿಂಚಿನ ದಾರಗಳಿಂದ ನೀಲಮಣಿಗಳಿಂದ ಅಲಂಕರಿಸಿದ್ದ ಪಂಜರ ಪುಟ್ಟ ಜಾತ್ರೆ ನೋಡಿದಂತಿತ್ತು. ಇದು ಬಹುಶ@ ಆ ಮಗುವಿನ ಕೆಲಸವಿರಬಹುದು. ಪಂಜರದ ಮುಂದೆ ನಿಂತ ಆ ಮಗು, ಸೀತಾ, ನಾನು ಶಾಲೆಗೆ ಹೋಗಿಬರ್ತೇನೆ. ನೀನು ಕಾಳು ತಿಂದು ನಿದ್ದೆ ಮಾಡು ನಾನು ಬರ್ತೀನಿ ಆಯ್ತಾ...ಎನ್ನುತ್ತ ಕತ್ತು ಕೊಂಕಿಸಿ ಗಿಳಿಯನ್ನೆ ನೋಡುತ್ತಾ ಪಂಜರವನ್ನೊಮ್ಮೆ ಮೆಲ್ಲಗೆ ತಿರುಗಿಸಿತು. ಪಂಜರಕ್ಕೆ ಕಟ್ಟಿದ ಗೆಜ್ಜೆ ಗಿಲಕ್ಕನೆ ಸದ್ದು ಮಾಡಿತು. ನೀಲಮಣಿಗಳು ಲಾಸ್ಯದಿ ತೂಗಾಡಿದವು. ದಾರ, ಬಣ್ಣದ ಕಾಗದಗಳು ಮೇಲೆ ಹಾರಾಡಿದವು. ಆ ಳಿಗೆಗೆ ಗಿಳಿ ವೇದಿಕೆಯಲ್ಲಿ ಅಲಂಕರಿಸಿಕೊಂಡ ನರ್ತಕಿಯಂತೆ ಕಾಣಿಸಿತು. ಆದರೆ ಅಲ್ಲಿದ್ದ ಆ ಯಾವ ಸೌಂದರ್ಯವನ್ನು ಆಸ್ವಾದಿಸಲಾಗದ, ಅರ್ಥೈಸಿಕೊಳ್ಳಲಾಗದ ಆ ಮೂಕ ಪಯ ದೈನ್ಯದ ದೃಷ್ಟಿ ಮಾತ್ರ ನೀಲಿ ಆಗಸದತ್ತಲೆ ಇತ್ತು. ಅದರ ಕಣ್ಣುಗಳಲ್ಲಿ ರೆಕ್ಕೆ ಬಿಚ್ಚಿ ಸ್ವತಂತ್ರವಾಗಿ ಹಾರಾಡುವ ಕನಸಿತ್ತಾ? ಒಮ್ಮೊಮ್ಮೆ ನಮ್ಮ ಪ್ರೀತಿ ಕೂಡ ಹೀಗೆಯೆ ಅಲ್ಲವೆ? ಎದುರಿನವರ ರೆಕ್ಕೆ ಕತ್ತರಿಸಿ, ಹಾರಲಾಗದೆ, ದಾಣ್ಯಕ್ಕೆ ಸಿಲುಕಿ ತೆವಳುವಂತೆ ಮಾಡುತ್ತದೆ...ವನಜ ಅವರ ಯೋಚನಾಲಹರಿಯನ್ನು ತುಂಡರಿಸುವಂತೆ ಬೈಕ್ನ ಕೀ ಹಿಡಿದು ಹೊರಬಂದ ಗಿರಿ, ಓ ಅಮ್ಮಾ ಬಂದ್ರಾ, ನೀವು ಬರೋದು ಇನ್ನೂ ತಡ ಆಗ್ಬಹುದು ಅನ್ಕೊಂಡಿದ್ದೆ. ನಮ್ಮವಳು ಊರಿಗೆ ಹೋಗಿದಾಳೆ. ನಾನು ನಿಮಗೆ ಹೋಟೆಲಿಂದ ತಿಂಡಿ ಕಟ್ಟಿಸಿ ತರ್ತೀನಿ. ಸಾರ್ ಎಲ್ಲಿ ಹೋದ್ರು...? ಒಂದೇ ಸಮನೆ ಮಾತಾಡುತ್ತಾ ಉತ್ತರಕ್ಕೂ ಕಾಯದೆ ಬೈಕ್ ಸ್ಟಾರ್ಟ್ ಮಾಡಿ ಹಿಂದೆ ಕೂತ ಮಗಳನ್ನೊಮ್ಮೆ ಎಡಕೈಯಲ್ಲಿ ಮುಟ್ಟಿ ನೋಡಿ, ಭರ್ರನೆ ಹೊರಟೆ ಬಿಟ್ಟ.
ಗಿರಿ ಇಲ್ಲಿಗೆ ಬಂದು ಹತ್ತಕ್ಕೂ ಹೆಚ್ಚು ವರ್ಷಗಳೆ ಕಳೆದಿವೆ. ಮೊದಲೆಲ್ಲ ನಾವು ಬಂದರೆ ಅಕ್ಕರೆಯಿಂದ ಗೌರವದಿಂದ ಉಪಚರಿಸುತ್ತಿದ್ದ. ತನ್ನ ಪತ್ನಿಗೆ ಹೇಳಿ ಬಗೆಬಗೆಯ ಅಡುಗೆ ಮಾಡಿಸುತ್ತಿದ್ದ. ಪಾಕಪ್ರವಿಣೆಯಾದ ಅವಳು ರುಚಿಕಟ್ಟಾಗಿ ಅಡುಗೆ ಮಾಡುತ್ತಿದ್ದಳು. ಈಗೀಗ ಹೀಗೆ ಬದಲಾಗಿದ್ದಾನೆ. ನಾವು ಬರುವ ವಿಷಯ ಮುಂಚೇನೆ ಗೊತ್ತಿದ್ದರೂ ಪತ್ನಿಯನ್ನು ಊರಿಗೆ ಕಳಿಸಿದ್ದಾನೆ. ಇಷ್ಟು ದೊಡ್ಡ ತೋಟದ ಮಾಲೀಕ ತಾನೆ ಎಂಬಂತೆ ವರ್ತಿಸುತ್ತಾನೆ. ಇವರು ವಯಸ್ಸಾದವರು ಹೇಗೆ ನಡೆಸಿಕೊಂಡರೂ ಅಡ್ಡಿಯಿಲ್ಲ ಎಂಬ ಉಡಾಫೆ ಅವನ ಪ್ರತಿ ಮಾತು ವರ್ತನೆಯಲ್ಲಿ ಎದ್ದು ಕಾಣುತ್ತಿತ್ತು. ಇಲ್ಲೇನು ಲಾಭ ಇಲ್ಲ, ಸುಮ್ಮನೆ ದುಡಿದದ್ದೆ ಬಂತು ಅಷ್ಟೆ.
ನನಗಂತೂ ಸಾಕಾಗಿ ಹೋಗಿದೆ. ಯಾರಾದರೂ ಬೇರೆಯವರು ಸಿಕ್ಕರೆ ನೋಡಿ ಕೆಲಸಕ್ಕಿಟ್ಟುಕೊಂಡುಬಿಡಿ ಸರ್ ಎಂದು ಆಗಾಗ ಬೆದರಿಕೆಯ ಬಾಣ ಬಿಡುತ್ತಿದ್ದ. ಈ ವಯಸ್ಸಿನಲ್ಲಿ ಇವರು ಮತ್ತಾರನ್ನು ಹುಡುಕಲಾದೀತು ಎಂಬ ನಂಬಿಕೆ ಅವನದು. ಉಟ್ಟ ಬಟ್ಟೆಯಲ್ಲಿ ಹೆಂಡತಿ ಮಕ್ಕಳೊಡನೆ ಬಂದು ನೀವು ಹೇಳಿದ್ದು ಮಾಡ್ಕೊಂಡು ಇರ್ತೀವಿ ನಮಗೆ ಕೆಲಸ ಕೊಡಿ ಎಂದು ನಡು ಬಗ್ಗಿಸಿ ಕೈ ಕಟ್ಟಿ ನಿಂತ ಗಿರಿ ನೆನೆಪಾದ. ನಾಲ್ಕು ತೆಂಗಿನ ಸೋಗೆ ಗರಿ ಹಾಕಿ ಗುಡಿಸಲು ಮಾಡಿಕೊಂಡಿದ್ದ. ಅವನ ಹೆಂಡತಿ ನಮಗೆ ಅಡುಗೆ ಜೊತೆ ಮನೆಕೆಲಸವನ್ನೆಲ್ಲ ಮಾಡಿಕೊಡುತ್ತಿದ್ದಳು. ವಯೋಸಹಜ ಖಾಯಿಲೆಗಳು ದೇಹವನ್ನು ಹಣ್ಣು ಮಾಡಿ, ನಾವು ಇತ್ತ ಬರುವುದು ಕಡಿಮೆಯಾಗಿ ವರ್ಷಕ್ಕೆ ಒಂದೋ ಎರಡೋ ಬಾರಿ ಬರುವಂತಾದಾಗ, ಗುಡಿಸಲು ಬಿಟ್ಟು ಇದೆ ಮನೆಯಲ್ಲಿ ಅವರಿರುವಂತೆ ಹೇಳಿದಾಗ ಗಿರಿ ಕೃತತೆಯಿಂದ ಕಣ್ತುಂಬಿ ಕೈ ಮುಗಿದಿದ್ದ. ಕೆಲ ತಿಂಗಳಲ್ಲೆ ಅವನ ವರ್ತನೆ ಬದಲಾಗಿಬಿಟ್ಟಿತ್ತು. ಮನುಷ್ಯ ಅದೆಂತಹ ಅವಕಾಶವಾದಿ? ನಮ್ಮ ಕಾಲಬಳಿಯೆ ಜಾಗ ಕೇಳಿ ಕುಳಿತವನು ನಾವು ದುರ್ಬಲರು ಎಂದಾದಾಗ ಕೃತತೆಯ ಲವಲೇಶವೂ ಇಲ್ಲದೆ ತಲೆಯ ಮೇಲತ್ತಿ ಸವಾರಿ ಮಾಡುತ್ತಾನಲ್ಲ ಎನಿಸಿತು.
ಅಲ್ಲೆ ಅತ್ತಿಂದಿತ್ತ ಕಾಲಾಡಿಸುತ್ತ ಕಣ್ಣಿಗೆ ಕಾಣಿಸುವಷ್ಟು ದೂರದವರೆಗೂ ದೃಷ್ಟಿ ಹಾಯಿಸಿದ ವನಜಳಿಗೆ ಯಾಕೋ ಅಲ್ಲಿನ ತೆಂಗು ಕಂಗು ಇತ್ಯಾದಿ ಎಲ್ಲವೂ ಸೊರಗಿದಂತೆ ಕಂಡವು. ಅಥವಾ ತನ್ನ ಹತಾಶ ಮನಸ್ಸಿಗೆ ಹಾಗೆ ಕಾಣಿಸುತ್ತಿರಬಹುದಾ? ದೃಷ್ಟಿಯಂತೆ ಸೃಷ್ಟಿ ಅಲ್ಲವೆ? ಮನಸ್ಸಿನೊಳಗೆಯೆ ಪ್ರಶ್ನೋತ್ತರಗಳು ತಾಕಲಾಡುತ್ತಿದ್ದವು. ಅಲ್ಲೆ ಇದ್ದ ಪ್ಲಾಸ್ಟಿಕ್ ಕುರ್ಚಿಯೊಂದನ್ನು ಎಳೆದು ಅದರ ಮೇಲೆ ತನ್ನ ಕೈಲಿದ್ದ ಚಿಕ್ಕ ಟವೆಲನ್ನು ಹಾಸಿ ಕುಳಿತು ಮೇಲೆ ದಿಟ್ಟಿಸಿದಳು. ಎಲ್ಲೂ ಕಳಂಕವಿಲ್ಲದ ನೀಲ ನಿರಭ್ರ ಸ್ವಚ್ಛ ಆಕಾಶ.
ವನಜ ರಾಮನಾಥರ ಪತ್ನಿಯಾಗಿ ತುಂಬಿದ ಮನೆಗೆ ಸೊಸೆಯಾಗಿ ಕಾಲಿಟ್ಟಿದ್ದಳು. ದರ್ಪದ ಮಾವ, ಸೊಸೆಯೆಂದರೆ ಸೇವೆ ಮಾಡಲೆಂದೆ ಬಂದವಳೆಂಬ ತಾತ್ಸಾರದ ಭಾವದ ಅತ್ತೆ, ಪ್ರೀತಿಗಿಂತಲೂ ಈರ್ಷೆಯನ್ನೆ ಪ್ರೀತಿಸಿದ ನಾದಿನಿ, ತನ್ನಣ್ಣನ ಸರ್ಕಾರಿ ಸಂಬಳಕ್ಕೆ ಈಕೆ ಹಕ್ಕುದಾರಳಾಗಬಾರದೆನ್ನುವ ಎಡಬಿಡಂಗಿ ಮೈದುನ, ಇದ್ದುದರಲ್ಲಿ ಆಕೆಯ ಬಗೆಗೆ ಚೂರು ಗೌರವ, ಆಗೀಗ ಮಿಣುಕು ಹುಳುವಿನಂತೆ ಫಕ್ಕನೆ ಮಿಂಚಿ ಮಾಯವಾಗುವ ಪುಟ್ಟ ಅಕ್ಕರೆ ಇದ್ದುದು ಮತ್ತೊಬ್ಬ ಮೈದುನ ರಾವನಿಗೆ ಮಾತ್ರ. ಇಡೀ ವಾರ ಗಾಣದೆತ್ತಿನೆಂತೆ ದುಡಿಯುತ್ತಾ, ನಗರದಲ್ಲಿ ವಾಸವಿದ್ದ ಗಂಡ ಬರುವ ವಾರಾಂತ್ಯದ ಆ ಎರಡು ದಿನಕ್ಕಾಗಿ ವನಜ ಚಾತಕದಂತೆ ಕಾಯುತ್ತಿದ್ದಳು. ಗಂಡನಿಗೆ ಅವಳ ಮೇಲೆ ಪ್ರೀತಿಯೇನೊ ಇತ್ತು. ಆದರೆ ಅದು ದಾರ್ಷ್ಯದಿಂದ ಕೂಡಿರುತ್ತಿತ್ತು. ಹೆಂಡತಿ ತಾನು ಹೇಳಿದಂತೆಯೆ ಕೇಳಬೇಕೆಂಬ ಅಹಮಿಕೆ ಅತಿ ಎನಿಸುವಷ್ಟು ಆತನಲ್ಲಿತ್ತು. ವನಜ ಆತನ ಪ್ರೀತಿಯ ಮುಖವನ್ನು ಮಾತ್ರ ನೋಡುವ ಅಭ್ಯಾಸ ಮಾಡಿಕೊಂಡಿದ್ದಳು. ಅವಳ ಬದುಕಿನಲ್ಲಿ ಬಂದ ಇಬ್ಬರು ಮಕ್ಕಳು ಅವಳಿಗೆ ನಿಸ್ವಾರ್ಥ ಖುಷಿಯ ಪರಿಚಯ ಮಾಡಿಸಿದ್ದವು.
ಮಾವ ಸಂಪಾದಿಸಿದ್ದ ಭೂಮಿಯಲ್ಲಿ, ಓದು ತಲೆಗೆ ಹತ್ತದ ಇಬ್ಬರು ಮಕ್ಕಳು ವ್ಯವಸಾಯ ಮಾಡುತ್ತಿದ್ದರು. ಬ್ಯಾಂಕ್ ಉದ್ಯೋಗಿಯಾಗಿದ್ದ ರಾಮನಾಥ ಮನೆಯ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಬೇಕೆಂಬುದು ಮಾವನ ಆಶಯವಾಗಿತ್ತು. ವ್ಯವಸಾಯದಲ್ಲಿ ಏನು ಗಿಟ್ಟುತ್ತೆ, ಸಂಬಳ ತರುವ ನೀನು ಮನೆಯ ಬೇಕು ಬೇಡಗಳನ್ನು ಪೂರೈಸಬೇಕು ಎಂದು ಸಮಯ ಸಿಕ್ಕಾಗಲೆಲ್ಲ ಹೇಳುತ್ತಲೆ ಇದ್ದರು. ತಂಗಿ ತಮ್ಮಂದಿರಿಬ್ಬರ ಮದುವೆ, ಮನೆಯ ಇನ್ನಿತರ ಶುಭ ಸಮಾರಂಭಗಳು, ತಂದೆ ತಾಯಿಯ ಅನಾರೋಗ್ಯ, ವ್ಯವಸಾಯದ ಖರ್ಚು...ಹೀಗೆ ಬಂದ ಸಂಬಳವೆಲ್ಲ ನೀರಿನಂತೆ ಸೋರಿ ಹೋಗುತ್ತಿದ್ದುದು ರಾಮನಾಥನಿಗೆ ಬೇಸರ ತರುತ್ತಿತ್ತು. ತನ್ನದು ಅಂತ ಒಂದು ಬದುಕು, ಮಕ್ಕಳ ಭವಿಷ್ಯ ಕಟ್ಟುವುದು ಯಾವಾಗ ಎಂಬ ಕಳವಳ ಕಾಡುತ್ತಿತ್ತು. ಮಕ್ಕಳು ಶಾಲೆಗೆ ಹೋಗುವಂತಾದಾಗ ತಂದೆಯ ಮುಂದೆ ನಗರದಲ್ಲಿ ತಾನೊಂದು ಮನೆ ಮಾಡುವ ಪ್ರಸ್ತಾಪವಿಟ್ಟಿದ್ದ. ತಂದೆ ಕೆಂಡಾಮಂಡಲವಾಗಿದ್ದರು. ಮಕ್ಕಳು ಇಲ್ಲಿಂದಲೆ ಶಾಲೆಗೆ ಹೋಗಿಬರಲಿ ಎಂದಿದ್ದರು. ಗಂಡನ ತಲೆ ಕೆಡಿಸಿದ್ದಾಳೆ ಎಂದು ಅತ್ತೆ ಮಾವ ಇಬ್ಬರೂ ವನಜಳನ್ನು ದೂರಿದ್ದರು. ತಾನು ಜೀವ ತೇಯ್ದದ್ದು ಇವರಿಗಾಗಿಯೆ? ಎಂದು ವನಜ ಬೇಸರದಿಂದ ನೊಂದುಕೊಂಡಿದ್ದಳು. ನೀನು ಈ ಮನೆಗೆ ಹಿರಿಯ ಮಗ. ಎಲ್ಲ ಜವಾಬ್ದಾರಿ ಹೊರಬೇಕಾದವನು ಹೀಗೆ ನುಣುಚಿಕೊಂಡು ಹೆಂಡತಿ ಮಕ್ಕಳ ಬಾಲ ಹಿಡಿದು ಹೊರಟರೆ ನನ್ನ ಆಸ್ತಿಯಲ್ಲಿ ನಿನಗೇನು ಸಿಗದು ಎಂದು ಮಾವ ಗುಡುಗಿದ್ದರು. ರಾಮನಾಥ ನೋವಿನಿಂದ ಕಣ್ಣೀರು ಹಾಕಿದ್ದ. ನಾನು ದುಡಿದಿದ್ದೆಲ್ಲವನ್ನು ಇಲ್ಲೆ ಸುರಿದಿದ್ದೇನೆ ಇದೆಂತಹ ರಾಕ್ಷಸ ನಿರೀೆ ಇವರದು ಎನಿಸಿತ್ತು. ಪ್ರೀತಿ ಅಕ್ಕರೆ ಇಲ್ಲದ ಕೇವಲ ದುಡಿವ ಯಂತ್ರದಂತೆ ನೋಡುವ ಇವರಾರು ತನಗೆ ಬೇಡವೆ ಬೇಡವೆಂದು ತನ್ನ ಕುಟುಂಬದೊಡನೆ ಪಟ್ಟಣ ಸೇರಿದ್ದ. ಬ್ಯಾಂಕಿನ ಕೆಲಸ ಮುಗಿಸಿ ಬಂದು ಸಂಜೆ ಅಂಗಡಿಯೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದ. ಗಾಣದೆತ್ತಿನಂತೆ ದುಡಿದ. ದುಡಿತವೊಂದೆ ಅವನ ಪರಮ ಉದ್ದೇಶವಾಗಿತ್ತು. ಒಂದರೆಕ್ಷಣವೂ ಎಡೆಬಿಡದ ಅವನ ದುಡಿತಕ್ಕೆ ವನಜ ಅವನ ಸರಿಸಮಕ್ಕೆ ಸಂಸಾರದ ನೊಗ ಹೊತ್ತು ಸಾಗುತ್ತಿದ್ದಳು. ಮಕ್ಕಳಿಬ್ಬರನ್ನು ಚೆನ್ನಾಗಿ ಓದಿಸಿದ್ದಲ್ಲದೆ ಸ್ವಂತ ಮನೆ ಕಟ್ಟಿಸಿದ್ದರು. ಮೂರು ರೂಮುಗಳಿದ್ದ ದೊಡ್ಡ ಮನೆ ಅತ್ಯಾಧುನಿಕವಾಗಿತ್ತು. ರಿಟೈರಾದಾಗ ಬಂದ ಹಣದಿಂದ ಈ ಭೂಮಿ ಕೊಂಡಿದ್ದ. ಅಲ್ಲಿ ಮಾವು, ತೆಂಗು, ಕಂಗು, ಸಪೋಟ, ಸೀಬೆ, ನಿಂಬೆ...ಇವುಗಳಲ್ಲದೆ ಬಗೆಬಗೆಯ ಹೂ ಗಿಡಗಳನ್ನು ಬೆಳೆಸಿದ್ದ. ಇದೆಲ್ಲವನ್ನು ನಿಭಾಯಿಸುವ ಸಲುವಾಗಿ ಲೆಕ್ಕ ಬರೆಯುವ ಕೆಲಸವನ್ನು ಮತ್ತೂ ಮುಂದುವರೆಸಿದ್ದ. ಮಗ ಓದಿ ಕೆಲಸದ ಸಲುವಾಗಿ ವಿದೇಶಕ್ಕೆ ಹೊರಟು ನಿಂತಾಗ ಇಬ್ಬರೂ ಅವನ ನಿರ್ಧಾರವನ್ನು ವಿರೋಧಿಸಿದ್ದರು. ಆದರೆ ಅವನು ತನ್ನ ನಿರ್ಧಾರದಿಂದ ಹಿಂದೆ ಸರಿದಿರಲಿಲ್ಲ.
ವನಜ ಮಗನನ್ನು ಪಕ್ಕದಲ್ಲಿ ಕೂರಿಸಿಕೊಂಡು ಬೆನ್ನು ನೇವರಿಸುತ್ತಾ, ನಲ್ಮೆಯಿಂದ ಮಗೂ, ಅಪ್ಪ ದುಡಿದು ಸಂಪಾದಿಸಿಟ್ಟ ಈ ಮನೆ ಆಸ್ತಿ ಎಲ್ಲ ನಿನ್ನದೆ ಅಲ್ಲವೇನೊ? ನೀನೀಗ ನಮ್ಮನ್ನು ಬಿಟ್ಟು ಅಷ್ಟು ದೂರ ಹೋಗಿಬಿಟ್ಟರೆ ಇದನ್ನೆಲ್ಲ ನೋಡೋರು ಯಾರು? ಇದೆಲ್ಲ ಯಾರಿಗಾಗಿ.. ಎಂದು ಅನುನಯಿಸಿದ್ದರು. ತನ್ನ ಮಾತು ಮಗ ಕೇಳುತ್ತಾನೆಂಬ ನಂಬಿಕೆಯಿದ್ದ ವನಜಾ ಅವನ ಉತ್ತರದಿಂದ ಭೂಮಿಗಿಳಿದು ಹೋಗಿದ್ದರು. ಮಗನಿಗೆ ಅಪ್ಪನ ಯಮದುಡಿತ ಅನಾವಶ್ಯಕವಾದದ್ದು ದುರಾಸೆಯದ್ದು ಎನಿಸಿತ್ತು. ಅಪ್ಪ ತನ್ನೊಳಗಿನ ಅಹಂನ್ನು ಸಾಕಲು, ಅದನ್ನು ತೃಪ್ತಿಪಡಿಸಲು ಇಷ್ಟೆಲ್ಲಾ ಮಾಡಿದ್ದಾರೆ ಎಂದದ್ದಲ್ಲದೆ, ಅಪ್ಪನ ಶ್ರಮವನ್ನು ಅನಾದರದಿಂದ ಉಡಾಫೆಯಿಂದ ತುಚ್ಛೀಕರಿಸಿದ್ದ. ತಾನು ದುಡಿದರೆ ಅದು ಕೆರಿಯರ್ ಅಪ್ಪನ ದುಡಿತ ಅಹಂಕಾರದ್ದು ಎಂಬ ಮಗನ ವೈರುಧ್ಯದ ನಡೆ ವನಜಳನ್ನು ನೋಯಿಸಿತ್ತು. ಅವನ ಬಳಿ ಮತ್ತಾವ ಬೇಡಿಕೆಯನ್ನು ಇಡುವುದೂ ಅವಳಿಗೆ ಬೇಡವಾಗಿತ್ತು. ಬದುಕಿನಲ್ಲಿ ಕೊರತೆ ಇದ್ದಾಗಲೆ ಶ್ರಮದ, ಪ್ರೀತಿಯ, ಸಂಬಂಧಗಳ ಬೆಲೆ ತಿಳಿಯೋದು. ಬೇಕೇಂದದ್ದೆಲ್ಲ ಆ ಕ್ಷಣವೆ ಯಾವ ಕಷ್ಟವೂ ಇಲ್ಲದೆ ದೊರೆತರೆ ಅಂತಹವರಿಗೆ ಬದುಕಿನ ಮೌಲ್ಯವೇ ತಿಳಿಯದು. ಯಾಕೊ ವನಜಳಿಗೆ ಆ ಳಿಗೆಯಲ್ಲಿ ಗಂಡನ ಬಗೆಗಿದ್ದ ಹೆಮ್ಮೆ ಮಾಯವಾಗಿ, ಆ ಜಾಗದಲ್ಲಿ ಮರುಕ, ಕನಿಕರ ಮೂಡಿತ್ತು. ತನ್ನ ದೇಶಕ್ಕೆ, ಅಪ್ಪನ ಆಸ್ತಿಗೆ ಅಷ್ಟೆ ಅಲ್ಲದೆ ಅಮ್ಮನ ಪ್ರೀತಿಗೂ ಬೆನ್ನು ಹಾಕಿ ನಡೆದುಬಿಟ್ಟ ಮಗ, ಅಮ್ಮನ ಹೃದಯದೊಳಗೊಂದು ಖಾಲಿತನವನ್ನು ಸೃಷ್ಟಿಸಿದ್ದ. ಆ ನಿರ್ವಾತ ಮತ್ತೆಂದೂ ತುಂಬಲಾರದ್ದಾಗಿತ್ತು.
ಮಗನ ನಡೆಯನ್ನು ಅರಗಿಸಿಕೊಳ್ಳುವ ಮೊದಲೆ ಮಗಳು ತಾನೇನು ಕಡಿಮೆ ಎಂಬಂತೆ ಓದುವಾಗಲೆ ಮೂಡಿದ್ದ ಪ್ರೀತಿಯನ್ನು ಓದು ಮುಗಿಯುತ್ತಿದ್ದಂತೆ ಬಹಿರಂಗ ಪಡಿಸಿದ್ದಳು. ಯಾವಾಗಲೂ ಕೆಲಸದ ನಿಮಿತ್ತ ಹೊರ ರಾಜ್ಯಗಳಿಗೆ ಪ್ರವಾಸದಲ್ಲಿಯೆ ಇರುತ್ತಿದ್ದ, ಒಳ್ಳೆಯ ಹಿನ್ನಲೆ ಇರದ, ಹೆಂಡತಿ ಮನೆಯಿಂದ ಹೊರಗೆ ಹೋಗಲೇಬಾರದೆಂಬ ಮನಸ್ಥಿತಿಯ ಅವನನ್ನು ಮಗಳು ಅದ್ಯಾಕೆ ಮೆಚ್ಚಿಕೊಂಡಳೊ? ವನಜ, ಹೆಣ್ಣುಮಕ್ಕಳು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕೆಂದು ಬಯಸಿದವಳು. ಹೆಣ್ಣುಮಕ್ಕಳಿಗೆ ಆರ್ಥಿಕ ಸ್ವಾವಲಂಬನೆ ಕೊಡುವ ಧೈರ್ಯ, ಆತ್ಮವಿಶ್ವಾಸ, ಧೃಡತೆಯನ್ನು ಮತ್ತಾವುದು ಕೊಡಲು ಸಾಧ್ಯವಿಲ್ಲವೆಂಬುದನ್ನು ವನಜಳ ಬದುಕೆ ನಿರೂಪಿಸಿತ್ತು. ಮಗಳು ಹಾಗಾಗಬಾರದೆಂದು ಬಯಸಿದರೂ, ತಂದೆ ತಾಯಿಯ ಅಸಮ್ಮತಿಯೊಡನೆ ಮಗಳು ರಿಜಿಸ್ಟರ್ ಮದುವೆ ಮಾಡಿಕೊಂಡು ಹಣದೊಡನೆ ಶಾಶ್ವತ ನೋವನ್ನೂ ಉಳಿಸಿಹೋಗಿದ್ದಳು. ದೂರದೇಶದಲ್ಲಿದ್ದ ಮಗ ಅವರೊಳಗೆ ಸೃಷ್ಟಿಸಿದ್ದ ನಿರ್ವಾತದಲ್ಲಿ ಕೈಗೆ ಸಿಗದೆ ದೂರವೆ ಉಳಿದು ಬೆಂಕಿ ಉರಿಸಿದ್ದಳು ಮಗಳು! ಮೌನ ಹೊದ್ದು ಮಲಗಿದ ಆ ದೆವ್ವದಂಥಾ ದೊಡ್ಡ ಮನೆ ಆ ದಂಪತಿಗಳ ಬದುಕಿನ ಶೇಷವನ್ನು ಸಂಕೇತಿಸುವಂತಿತ್ತು.
ಮಕ್ಕಳು ದೂರದಲ್ಲಿದ್ದರೇನಾಯಿತು? ಅವರ ಭವಿಷ್ಯ, ಅವರ ನಿರ್ಧಾರ ಎಂದು ಸಮರ್ಥಿಸಿಕೊಂಡು ಸಮಾಧಾನ ಮಾಡಿಕೊಂಡಾಗಿತ್ತು. ಈಗ ಯಾವ ಒತ್ತಡವಿಲ್ಲ, ಖರ್ಚಿಗೆ ಯೋಚನೆಯಿಲ್ಲ. ವನಜಳ ಆಸೆಯಂತೆ ಒಂದು ಕಾರು ಕೊಂಡಿದ್ದರು. ಹೆಂಡತಿಯ ಒಂಟಿತನ ಭರಿಸಲು ಪುಟ್ಟ ನಾಯಿಮರಿಯನ್ನು ತಂದಿದ್ದರು. ಸಾಕುಪ್ರಾಣಿಗಳೆಂದರೆ ಅತೀವ ಆಸೆಯಿದ್ದ ವನಜ ಅದಕ್ಕೆ 'ಜೋಸ್' ಎಂದು ಹೆಸರಿಟ್ಟು ತನ್ನ ಬೇಸರವನ್ನು ಮರೆಯುವ ಪ್ರಯತ್ನ ಮಾಡುತ್ತಿದ್ದರು. ವಾರದಲ್ಲೊಮ್ಮೆ ಹಳ್ಳಿಯಲ್ಲಿನ ತೋಟಕ್ಕೆ ಹೋಗಿ ಅಲ್ಲಿದ್ದ ತೋಟದ ಮನೆಯಲ್ಲಿ ಒಂದೆರಡು ದಿನವಿದ್ದು ಬರುತ್ತಿದ್ದರು. ಖಾಲಿ ಮನೆಯಲ್ಲಿ ನೆಮ್ಮದಿ ತುಂಬಿಸಿಕೊಳ್ಳುವ ನಿರಂತರ ಯತ್ನದಲ್ಲಿದ್ದರು.
ರಾಮನಾಥರು ಬದುಕಿನುದ್ದಕ್ಕೂ ಅನುಭವಿಸಿದ ಮಾನಸಿಕ ಒತ್ತಡ, ಅವಿಶ್ರಾಂತ ದುಡಿಮೆ, ಆರೋಗ್ಯದ ಕಡೆಗಿನ ನಿರ್ಲಕ್ಷ್ಯ...ಇವೆಲ್ಲದರ ಫಲ ಈಗ ಗೋಚರಿಸಲಾರಂಭಿಸಿತ್ತು. ಸಣ್ಣದಾಗಿ ಶುರುವಾದ ಮಂಡಿನೋವು ನಡೆಯಲಸಾಧ್ಯವೆಂಬಷ್ಟು ಕಿರಿಕಿರಿ ನೀಡಲಾರಂಭಿಸಿತ್ತು. ವೈದ್ಯರು ವಿಶ್ರಾಂತಿಯ ಜೊತೆಗೆ ಡ್ರೆವಿಂಗ್ ಮಾಡಲೇಬಾರದೆಂದು ಸೂಚಿಸಿದ್ದರು. ಈ ವಯಸ್ಸಿನಲ್ಲಿ ನೀವು ಡ್ರೆವಿಂಗ್ ಯಾಕೆ ಮಾಡ್ಬೇಕು? ನಿಮ್ಮ ಜಿಪುಣತನ ನಿಮ್ಮನ್ನು ಈ ಸ್ಥಿತಿಗೆ ತಂದಿದೆ. ಒಬ್ಬ ಡ್ರೆವರ್ನ ನೇಮಿಸಿಕೊಳ್ಳಿ ಸಂಬಳ ನಾನೆ ಕೊಡ್ತೀನಿ..ಎಂದ ಮಗನ ಮಾತಿನಲ್ಲಿ ಅಹಂ ಇತ್ತೇ ವಿನ@ ಅಕ್ಕರೆಯ ಲವಲೇಶವೂ ಇರಲಿಲ್ಲ. ಡ್ರೆವರ್ನೇನೊ ನೇಮಿಸಿಕೊಂಡರು. ಆದರೆ ತಿಂಗಳುಗಳು ಕಳೆದರೂ ಮಗನ ಕಡೆಯಿಂದ ಹಣವಿರಲಿ, ಪ್ರತಿಕ್ರಿಯೆಯೂ ಇರಲಿಲ್ಲ ಎಂಬುದು ಎಷ್ಟು ಸತ್ಯವೊ, ಅವರಿಗೆ ಅದರ ನಿರೀೆಯೂ ಇರಲಿಲ್ಲವೆಂಬುದು ಅಷ್ಟೇ ಸತ್ಯ. ಒಂದಷ್ಟು ತಿಂಗಳುಗಳು ಕಳೆಯುವವರೆಗೂ ಯಾವ ತೊಂದರೆಯೂ ಇಲ್ಲದೆ ಬದುಕು ಸಾಗಿತ್ತು.
ಒಮ್ಮೆ ಡ್ರೆವರ್ ತನ್ನ ಒಂದಿಬ್ಬರು ಗೆಳೆಯರೊಡಗೂಡಿ ಮನೆಗೆ ನುಗ್ಗಿ ವನಜ ದಂಪತಿಗಳನ್ನು ರೂಮೊಂದರಲ್ಲಿ ಕೂಡಿಹಾಕಿ ಕಳ್ಳತನ ಮಾಡಲುದ್ಯುಕ್ತನಾಗಿದ್ದ. ಮಂತ್ರಾಲಯದಿಂದ ಬಂದು ಪ್ರಸಾದ ಕೊಡಲು ವನಜಳನ್ನು ಕೂಗುತ್ತ ಬಂದ ಅವರ ಸ್ನೇಹಿತೆಯಿಂದ ಜೊತೆಗೆ ಜೋಸ್ನ ಕಿರುಚಾಟದಿಂದ ಆಗಬಹುದಾದ ಅವಡ ತಪ್ಪಿ, ಅವರೆಲ್ಲ ಪೋಲಿಸರ ಅತಿಥಿಯಾಗಿದ್ದರು. ಸಹಿ ಮಾಡಲು ಠಾಣೆಗೆ ಹೋದ ವನಜಳಿಗೆ ಕಂಬಿ ಹಿಡಿದು ನಿಂತ ಡ್ರೆವರ್ ನಿಯತ್ತಿಲ್ಲದ ಕ್ರಿಮಿಯಂತೆ ಕಂಡಿದ್ದ. ಊಟ ತಿಂಡಿ ನೀಡಿ ಮಗನಂತೆ ಉಪಚರಿಸಿದ ಅವರಿಗೆ ಅವನ ದುಷ್ಟತನ ಹೇಸಿಗೆ ತರಿಸಿತ್ತು. ಕಂಬಿ ಹಿಡಿದ ಅವನ ಕೈಗಳು, ಕೈ ಬೆರಳಲ್ಲಿದ್ದ ತಾನೆ ಕೊಟ್ಟ ಚಿನ್ನದುಂಗುರ ಅವರನ್ನು ಅಣಕಿಸುತ್ತಿದ್ದವು. ರಾಮನಾಥರು ಪೋಲಿಸರ ಸಲಹೆಯಂತೆ ಮನೆಯ ಸುತ್ತ ಮುಂಬಾಗಿಲಿನಲ್ಲಿ ಕಬ್ಬಿಣದ ಬೇಲಿ ನಿರ್ಮಿಸಿದ್ದರು. ಮನೆಯ ಮುಂದಿನ ಗೋಡೆಯಲ್ಲಿ ಅಲಂಕಾರಿಕವಾಗಿ ಬಿಡಿಸಿದ್ದ ಉದಯಿಸುವ ಸೂರ್ಯ, ಓಡುವ ಕುದುರೆ, ತಪಸ್ಸಿನ ಶಿವ, ಅರಮನೆಯ ಹೆಬ್ಬಾಗಿಲಿನಂತಹ ಆಕರ್ಷಕ ಕಮಾನು, ಗಾಳಿ ಬೀಸಿದಾಗಲೆಲ್ಲ ಇಂಪಾಗಿ ಕಿಣಿಕಿಣಿಸುವ ಚೀನಿ ಸರಪಳಿ...ಎಲ್ಲವನ್ನು ಆ ಸರಳುಗಳು ಮರೆಮಾಡಿದ್ದವು. ಬೇಸರವಾದಾಗಲೆಲ್ಲ ಜೋಸ್ನೊಡನೆ ಮನೆಯ ಮುಂದೆ ಕುಳಿತು, ಜನರನ್ನು ವಾಹನಗಳನ್ನು ನೋಡುತ್ತಿದ್ದ ವನಜಾರ ಇಷ್ಟದ ಕೆಲಸ ಈಗವರಿಗೆ ಬೇಡವಾಗಿತ್ತು. ಆ ಸರಳುಗಳ ಹಿಂದೆ ನಿಂತಾಗಲೆಲ್ಲ ಕಂಬಿ ಹಿಡಿದ ಡ್ರೆವರ್ನ ಕೈಗಳು ಕಣ್ಮುಂದೆ ಬಂದಂತಾಗಿ ಥಟ್ಟನೆ ಒಳಹೋಗಿಬಿಡುತ್ತಿದ್ದರು.
ಒಣಗಿದ ಎಲೆಗಳ ಮೇಲಿನ ಹೆಜ್ಜೆ ಸದ್ದಿನಿಂದ ವನಜ ತಮ್ಮ ನೆನಪುಗಳಿಂದ ಹೊರಬಂದರು. ಬಿಸಿಲಿನಲ್ಲಿ ತಿರುಗಾಡಿದ್ದಕ್ಕೊ ಏನೊ ಕೆಂಪಗಿದ್ದ ಗಂಡನ ಮುಖ ಮತ್ತೂ ಕೆಂಪಗಾಗಿತ್ತು. ಹಸಿವಗೊ ಆಯಾಸಕ್ಕೊ ಮುಖ ಕಳೆಗುಂದಿತ್ತು. ಸೋಲುತ್ತಿದ್ದ ಅವರ ಹೆಜ್ಜೆಗಳನ್ನು ನೋಡಿ ವನಜಾರಿಗೆ ಸಂಕಟವಾಯಿತು. ಅಲ್ಲೆ ಇದ್ದ ಹಳೆಯ ಕುರ್ಚಿ ಎಳೆದು ಅದರಲ್ಲಿ ಅವರನ್ನು ಕೂರಿಸಿ ಬ್ಯಾಗಿನಿಂದ ನೀರಿನ ಬಾಟಲಿ ಕೊಟ್ಟರು. ಶತಮಾನಗಳ ಬಾಯಾರಿಕೆ ಹಿಂಗಿಸುವರೊ ಎಂಬಂತೆ ಗಟಗಟನೆ ನೀರು ಕುಡಿಯುತ್ತಿದ್ದ ಅವರನ್ನು ನೋಡಿದ ಗಿರಿ, ಈ ಏರು ಬಿಸಿಲಿನಲ್ಲಿ ಯಾತಕ್ಕೆ ಓಡಾಡಿದ್ರಿ? ಕೈಲಾಗಲ್ಲ ಅಂದ್ಮೇಲೆ ಸುಮ್ನೆ ಕೂತ್ಕೋಬಾರ್ದಾ ಸಾರ್.. ಎಂದ ಅವನ ಧ್ವನಿಯಲ್ಲಿನ ಉದಾಸ ಭಾವ ರಾಮನಾಥರನ್ನು ಕೆರಳಿಸಿತ್ತು. ಸಾಕು ಬಾಯ್ಮುಚ್ಚು, ಆರೈಕೆಯಿಲ್ಲದ ತಬ್ಬಲಿ ಮಕ್ಕಳಂತೆ ಕಾಣೊ ಈ ತೋಟ ನೋಡಿದ್ರೆ ಹೊಟ್ಟೇಲಿ ಬೆಂಕಿ ಬಿದ್ದಂಗಾಗುತ್ತೆ ಇದು ನಿಂಗೆ ಅರ್ಥ ಆಗಲ್ಲ..ಕೋಪದಿಂದ ದನಿಯೇರಿಸಿದ್ದರು. ಅವರ ಮಾತಿನಿಂದ ಒಂದರೆಳಿಗೆ ಕುಗ್ಗಿದಂತೆ ಕಂಡ ಅವನು ಭುಜದ ಮೇಲಿದ್ದ ಟವೆಲನ್ನು ಕೋಪದಿಂದ ರಪ್ಪನೆ ಎಳೆದು, ಮತ್ತೆ ಹೆಗಲಮೇಲೆ ಎಸೆದುಕೊಂಡು ಅಲ್ಲಿದ್ದ ಬೆಂಚಿನ ಮೇಲೆ ದಡ್ಡನೆ ಕುಳಿತಿದ್ದ. ಯಾಕ್ಸಾರ್ ಜೋರು ಮಾಡ್ತೀರಾ? ನಾನೇನು ನಿಮ್ಮ ಹತ್ರ ಕಳ್ತನ ಮಾಡಿದೀನಾ? ಬಿಟ್ಟಿ ದುಡ್ಡು ತಗೊಂಡಿದೀನಾ? ನೀವು ಕೊಟ್ಟ ಕಾಸಿಗೆ ನಿಯತ್ತಿಂದ ನಡು ಬಗ್ಗಿಸಿ ಗೆಯ್ಮೆ ಮಾಡಿಲ್ಲವಾ? ಇಷ್ಟ ಇದ್ರೆ ಇಟ್ಕೊಳ್ಳಿ ಇಲ್ಲಾಂದ್ರೆ ಬಿಡಿ. ನಿಮಗಾದ್ರೆ ಆಸ್ತಿ ಮನೆ ಹೊತ್ಕೊಂಡು ಎಲ್ಲೂ ಹೋಗೋಕಾಗಲ್ಲ. ನಮಗೇನು ಇದ್ರೆ ಈ ಊರು ಎದ್ರೆ ಮುಂದಿನೂರು. ನಮ್ಗೇನು ಮನೇನಾ ಹೊಲಾನಾ? ಎರಡು ಬಟ್ಟೆ ಗಂಟು ತಲೆ ಮೇಲಿಟ್ರಾಯ್ತು. ನಮ್ಮ ಜೀವನಕ್ಕೆ ಇರೊ ಭರವಸೆ ನಿಮ್ಮ ತೋಟಾನೂ ಅಲ್ಲ, ನೀವು ಕೊಡೊ ಹಣಾನು ಅಲ್ಲ, ನಮ್ಮ ನಂಬ್ಕೆ ನಮ್ಮ ತೋಳಲ್ಲಿರೊ ಬಲ, ಕಸುವು ಅಷ್ಟೆ. ಹೆಗ್ಗಣ ಎಲ್ಲಿದ್ರೂ ಬಿಲ ತೋಡೋದೆ ಅಲ್ವಾ ಅದರ ಕೆಲ್ಸ. ನಾವೂ ಹಾಗೆ ಎಲ್ಲೋದ್ರು ದುಡಿದೇ ಹೊಟ್ಟೆ ಹೊರೀಬೇಕು. ಏನೋ ವಯಸ್ಸಾದೋರು ಸಹಾಯ ಆಗ್ಲಿ ಅಂತ ಕಷ್ಟಪಟ್ಟು ದುಡೀತೀನಿ ನನ್ನ ಮೇಲೆ ಜೋರು ಮಾಡ್ತೀರಾ...?ಒಂದೇ ಸಮನೆ ಮಳೆ ಹೊಯ್ದಂತೆ ಮಾತನಾಡಿ ತಾನೆ ತಂದಿಟ್ಟಿದ್ದ ಕವರಿನಿಂದ ಒಂದು ತಿಂಡಿಯ ಪೊಟ್ಟಣವನ್ನೆತ್ತಿಕೊಂಡು ವೇಗವಾಗಿ ತೋಟದೊಳಗೆ ನಡೆದುಹೋದ. ಬೆಪ್ಪಾಗಿ ಕುಳಿತ ಗಂಡನ ಬಳಿ ಬಂದ ವನಜ ನಿಮಗೆ ಹೊಟ್ಟೆ ಹಸಿದಿದೆ, ಕೈ ತೊಳೆದು ತಿಂಡಿ ತಿನ್ನಿ ಏಳಿ ಮೇಲೆ ಎಂದು ಕೈ ಹಿಡಿದು ಎಬ್ಬಿಸಿದಳು. ಅಲ್ಲ ವನಾ ಅವನು...ಎನ್ನುತ್ತಿದ್ದಂತೆ ಬೇಡ ಆ ಬಗ್ಗೆ ಮಾತು ಬೇಡ. ಅವನ ಬಿಸಿ ರಕ್ತ ಅವನನ್ನು ಮಾತಾನಾಡಿಸುತ್ತಿದೆ. ಅವನ ಜಾಗದಲ್ಲಿ ನಿಂತು ಯೋಚಿಸಿ. ಆಗ ತಪ್ಪು ಅನಿಸೋಲ್ಲ. ವಯಸ್ಸಿನ ಕಾಲದಲ್ಲೆ ಅಲ್ವ ನೀವು ಹೀಗೆ ಮನೆಯವರಿಗೆ ಸೆಡ್ಡು ಹೊಡೆದು ಮನೆ ಬಿಟ್ಟು ಬಂದು ಬದುಕು ಕಟ್ಟಿಕೊಂಡದ್ದು. ನಮ್ಮ ತೋಟ ಬಿಟ್ಟರೂ ಗಿರಿ ಕೂಡ ಅವನ ಮಿತಿಯಲ್ಲಿ ಅವನ ಬದುಕು ಕಟ್ಟಿಕೊಳ್ಳಬಲ್ಲ. ಅದರ ಬಗೆಗೆ ತುಂಬಾ ಯೋಚಿಸುವುದು ಬೇಡ...ಎನ್ನತ್ತ ಗಿರಿ ತಂದಿದ್ದ ತಿಂಡಿ ಪೊಟ್ಟಣವನ್ನು ಬಿಚ್ಚಿದರು. ಯಾಕೊ ಅವನು ತಂದದ್ದನ್ನು ತಿನ್ನಬಾರದೆನಿಸಿದರೂ 'ಹಸಿವು' ಅದಕ್ಕೊಪ್ಪಲಿಲ್ಲ. ಬದುಕಿನಲ್ಲಿ ಯಾವುದೆ ಹಸಿವು ಕೂಡ ಹೀಗೆಯೆ ಅಲ್ಲವೆ? ನಾಚಿಕೆ, ಸ್ವಾಭಿಮಾನ, ಬಂಧುತ್ವ, ಕೃತತೆ, ಪ್ರೀತಿಗಳೆಲ್ಲವನ್ನು ನುಂಗಿ ನೊಣೆದುಬಿಡುತ್ತದೆ. ಮನಸ್ಸಿನ ನೋವು ಹಸಿವಿಗೆ ಅರ್ಥ ಆಗೋದೆ ಇಲ್ಲ. ತನ್ನ ಗಂಡ ರಾಮನಾಥ, ಮಕ್ಕಳು, ಜೈಲಿನಲ್ಲಿರೊ ಡ್ರೆವರ್, ಗಿರಿ, ಅವನ ಪುಟ್ಟ ಮಗಳು, ಆ ಪಂಜರದ ಗಿಳಿ... ಎಲ್ಲರೂ ಒಂದೊಂದು ಬಗೆಯ ಹಸಿವನ್ನು ಹೊಂದಿದವರೆ ಅಲ್ಲವೆ? ತಿರುಗುತ್ತಿದ್ದ ಕಾರಿನ ಚಕ್ರದಂತೆ ಅವಳ ತಲೆಯೊಳಗೂ ಬಗೆಬಗೆಯ ಭಾವಗಳು ಗಿರಕಿ ಹೊಡೆಯುತ್ತಿದ್ದವು. ಕಾರು ಮನೆಯ ಬಳಿ ನಿಂತಾಗಲೆ ಇಹದ ಪರಿವೆ ಬಂದದ್ದು.
ಟಿವಿ ನೋಡುತ್ತಿದ್ದ ಗಂಡನ ಮೌನಕ್ಕೆ ಭಂಗ ತಾರದೆ ವನಜ ಕೂಡ ಮೌನವಾಗಿಯೆ ಅಡುಗೆ ಮುಗಿಸಿದ್ದರು. ಬಿಸಿ ಅನ್ನ ಬಡಿಸಿ ಎಂದಿನಂತೆ ತುಪ್ಪದ ಡಬ್ಬಿಯನ್ನು ಗಂಡನ ಮುಂದಿಟ್ಟಳು. ಅವರು ತಮಗೆ ಬೇಕಾದಷ್ಟು ಬಡಿಸಿಕೊಂಡರು. ಇಬ್ಬರು ಮಾತಾನಾಡುತ್ತಾ ಊಟ ಮುಗಿಸಿದ್ದರು. ಅಂದು ಊಟ ತುಂಬಾ ರುಚಿಯೆನಿಸಿತ್ತು. ಸೋಫಾ ಮೇಲೆ ಕುಳಿತ ಗಂಡನಿಗೆ ಹಾಲಿನ ಲೋಟ ನೀಡಿ ತಾನೊಂದು ಹಿಡಿದು ಕುಳಿತಳು. ಯಾಕೆ ವನಾ ಹಾಲಿಗೆ ತುಪ್ಪ ಹಾಕ್ಕೊಂಡಿಲ್ಲ? ಗಂಡನ ದನಿಯಲ್ಲಿ ಅಕ್ಕರೆಯ ಜೇನು. ಬಿಳಿಹಾಲಿನ ಮೇಲೆ ತೆಳುಹಳದಿ ತುಪ್ಪದ ಪದರವಿದ್ದ ಹಾಲಿನ ಲೋಟವನ್ನು ಅವನಿಗೆ ತೋರಿಸಿ ನಸುನಕ್ಕು ಟಿವಿಯತ್ತ ದೃಷ್ಟಿ ನೆಟ್ಟರು. ಟಿವಿಯಲ್ಲಿ ಅಯೋಧ್ಯೆಯ ಬಾಲರಾಮನ ಪ್ರತಿಷ್ಟಾಪನೆಯ ವರದಿ ಬಿತ್ತರವಾಗುತ್ತಿತ್ತು. ಕಿರೀಟ ಕುಂಡಲಗಳ ಜೊತೆ ಮೈತುಂಬಾ ಒಡವೆಯಿದ್ದರೂ ನಮ್ಮನ್ನು ಸೆಳೆಯುವುದು ಆ ಮುದ್ದು ಮುಖದ ಮೇಲಿನ ಬೆಳದಿಂಗಳಿನಂತಹ ನಗು ಮಾತ್ರ ಅಲ್ವಾ ವನಜಳ ಮಾತಿಗೆ ಸಮ್ಮತಿಯೆಂಬಂತೆ ತಲೆಯಾಡಿಸಿ ನಕ್ಕ ಗಂಡನತ್ತಲೆ ನೋಡುತ್ತ ನಮ್ಮೆಲ್ಲ ಸಮಸ್ಯೆಗಳಿಗೆ ನನ್ನ ಬಳಿ ಒಂದು ಪರಿಹಾರವಿದೆ. ಅದೂ ನೀವು ಒಪೋದಾದ್ರೆ..ಮೆಲ್ಲನೆ ರಾಗವಾಗಿ ನುಡಿದಳು. ಈಗ ನನ್ನ ಬದುಕು ನೀನಷ್ಟೆ ವನಜ, ಬದುಕಿನುದ್ದಕ್ಕೂ ನಿನ್ನನ್ನು ನಾನು ಗೌರವಿಸಲೆ ಇಲ್ಲ. ನನ್ನ ರ್ನಿಲಕ್ಷ$್ಯ, ಅಹಂ ನಿನ್ನ ಪ್ರೀತಿಯನ್ನು ಮರೆಮಾಚಿದವು. ಈಗಲೂ ನಿನ್ನ ಮಾತು ಕೇಳಲಿಲ್ಲವೆಂದರೆ ನನ್ನನ್ನು ರಾಕ್ಷಸನೆನ್ನಬೇಕಾಗುತ್ತದೆ. ಅದೇನೂಂತ ಹೇಳು ಹೆಂಡತಿಯ ಪಕ್ಕ ಸರಿದು, ಅಕ್ಕರೆಯಿಂದ ಅವಳ ತಲೆ ನೇವರಿಸಿದರು. ಗಂಡನಿಗೆ ಮತ್ತಷ್ಟು ಒತ್ತಿ ಕುಳಿತ ವನಜ ಹೇಳಲಾರಂಭಿಸಿದರು. ಹೆಂಡತಿಯ ಮಾತುಗಳು ಗಂಡನ ಮುಖದ ಸುಕ್ಕುಗಳಲ್ಲಿ ನಗು ನೆಮ್ಮದಿಯ ಗೆರೆಗಳನ್ನು ಮೂಡಿಸಲಾರಂಭಿಸಿದವು. ಟವಿಯಲ್ಲಿ ಅಯೋಧ್ಯೆಯ ಬಾಲರಾಮನ ನಗು, ಹಿನ್ನಲೆಯಲ್ಲಿ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ.....ಹಾಡು ಬಿತ್ತರವಾಗುತ್ತಿತ್ತು.
| ಶೀಲಾ ಸತ್ಯೇಂದ್ರಸ್ವಾಮಿ,ಹರವೆ, 571128,ಚಾಮರಾಜನಗರ ತಾಲೂಕು ಮತ್ತು ಜಿಲ್ಲೆ