

ಜೈಪುರ: ಸತ್ತಿದ್ದ ವ್ಯಕ್ತಿ ಮತ್ತೆ ಬದುಕಿ ಬಂದರೆ ಆ ಅನುಭವ ಹೇಗಿರುತ್ತೆ? ಸತ್ತವನು ಬದುಕಿ ಬಂದರೆ ಭಯವಾಗುತ್ತದೆಯೋ ಅಥವಾ ಸಂತೋಷವಾಗುತ್ತದೆಯೋ? ಗೊತ್ತಿಲ್ಲ. ಆದರೆ ವಿಚಿತ್ರ ಎನ್ನುವಂತೆ ಅಂತ್ಯಸಂಸ್ಕಾರದ ವೇಳೆ ವ್ಯಕ್ತಿಯೋರ್ವ ಜೀವಂತವಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಘಟನೆಯ ವಿವರ
ರಾಜಸ್ಥಾನದ ಜುಂಜುನುವಿನಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ರೋಹಿತಾಸ್ ಎಂಬ ವ್ಯಕ್ತಿಯು ತೀವ್ರ ಅನಾರೋಗ್ಯದಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ. ರೋಹಿತಾಸ್ನನ್ನು ಪರೀಕ್ಷಿಸಿದ ವೈದ್ಯರು ಈತ ಚಿಕಿತ್ಸೆ ಫಲಿಕಾರಿಯಾಗದೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಬಳಿಕ ಆತನ ಶವವನ್ನು ಶವಾಗಾರದಲ್ಲಿ ಎರಡೂವರೆ ಗಂಟೆಗಳ ಕಾಲ ಇರಿಸಲಾಗಿತ್ತು. ಆ ಬಳಿಕ ಆತನ ಶವವನ್ನು ಮಾ ಸೇವಾ ಸಂಸ್ಥಾನದ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಯಿತು.
ಬಳಿಕ ಪಂಚದೇವ ದೇವಾಲಯದ ಬಳಿ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಮೃತ ವ್ಯಕ್ತಿಯ ಎದೆಯ ಏರಿಳಿತವನ್ನು ಜನರು ಗಮನಿಸಿದ ಜನರು ರೋಹಿತಾಸ್ ಉಸಿರಾಡುತ್ತಿದ್ದಾನೆ ಎಂದು ಖಚಿತಪಡಿಸಿಕೊಂಡಿದ್ದಾರೆ. ಆ ಕೂಡಲೇ ಆತನನ್ನು ಬಿ.ಡಿ.ಕೆ. ಆಸ್ಪತ್ರೆಗೆ ಮಾಡಿದ್ದಾರೆ. ಇದಾದ ಬಳಿಕ ರೋಹಿತಾಸ್ ಪರೀಕ್ಷಿಸಿದ ವೈದ್ಯರು ಇನ್ನೂ ಈತ ಸತ್ತಿಲ್ಲ ಎಂದು ಹೇಳಿದ್ದಾರೆ. ಐಸಿಯುಗೆ ದಾಖಲಿಸಿ ರೋಹಿತಾಸ್ಗೆ ಹೆಚ್ಚಿನ ಚಿಕಿತ್ಸೆ ನೀಡಿದ್ದಾರೆ. ಈ ವಿಷಯ ತಿಳಿದ ಕೂಡಲೇ ಘಟನೆಯ ಬಗ್ಗೆ ಮೂವರು ವೈದ್ಯರನ್ನು ಅಮಾನತು ಮಾಡಲಾಗಿದ್ದು, ಸರ್ಕಾರ ತನಿಖೆಗೆ ಆದೇಶಿಸಿದೆ.
ಜಿಲ್ಲಾಧಿಕಾರಿ ರಾಮಾವತಾರ್ ಮೀನಾ ಮಾತನಾಡಿ, ಇದು ವೈದ್ಯರ ಕರ್ತವ್ಯ ನಿರ್ಲಕ್ಷ್ಯವಾಗಿದ್ದು, ತಪ್ಪಿತಸ್ಥರೆಂದು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕರ್ತವ್ಯಲೋಪ ಎಸಗಿದ ಡಾ.ಯೋಗೀಶ್ ಜಾಖರ್, ಡಾ.ನವನೀತ್ ಮೀಲ್ ಮತ್ತು ಪಿಎಂಒ ಡಾ.ಸಂದೀಪ್ ಪಾಚಾರ್ ಅವರನ್ನು ಅಮಾನತುಗೊಳಿಸಲಾಗಿದ್ದು, ವರದಿ ಆಧರಿಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.