

ಬಾಗಲಕೋಟೆ: ಪಾರ್ಸೆಲ್ ಮೂಲಕ ತರಿಸಲಾಗಿದ್ದ ಹೇರ್ ಡ್ರೈಯರ್ (Hair Dryer) ಸ್ಫೋಟಗೊಂಡು ಮಹಿಳೆಯ ಎರಡು ಕೈಗಳು ಛಿದ್ರವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೆರೆಡು ಟ್ವಿಸ್ಟ್ಗಳು ಲಭ್ಯವಾಗಿದ್ದು, ಪೊಲೀಸ್ ತನಿಖೆಯಲ್ಲಿ ಅಸಲಿ ಸತ್ಯ ಹೊರಬಿದ್ದಿದೆ.
ಬಾಗಲಕೋಟೆಯಲ್ಲಿ ಸ್ನೇಹಿತೆಯ ಹೆಸರಿಗೆ ಬಂದಿದ್ದ ಪಾರ್ಸಲ್ ಬಾಕ್ಸ್ನಲ್ಲಿದ್ದ ಹೇರ್ ಡ್ರೈಯರ್ (Hair Dryer) ತೆರದು ಆನ್ ಮಾಡಿದ್ದ ಮಹಿಳೆ ಬಸವರಾಜೇಶ್ವರಿ ಯರನಾಳ (35) ಅವರ ಕೈಗಳು ತುಂಡಾಗಿದ್ದವು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಎರಡೆರಡು ಟ್ವಿಸ್ಟ್ ಲಭ್ಯವಾಗಿದ್ದು, ಅನೈತಿಕ ಸಂಬಂಧವೇ ಮುಖ್ಯ ಕಾರಣ ಎಂದು ತಿಳಿದು ಬಂದಿದೆ.
ಮೃತ ಯೋಧ ಪಾಪಣ್ಣ ಅವರ ಪತ್ನಿ ಬಸವರಾಜೇಶ್ವರಿ ಹಾಗೂ ಸಿದ್ದಪ್ಪ ಶೀಲವಂತರ ಮಧ್ಯೆ ಪ್ರೀತಿ ಇತ್ತು. ಇದಕ್ಕೆ ಬಸವರಾಜೇಶ್ವರಿ ಸ್ನೇಹಿತೆ ಶಶಿಕಲಾ ಅಡ್ಡಿಯಾಗಿದ್ದಳು. ಇದು ಸರಿಯಲ್ಲ ಎಂದು ಹೇಳಿದ್ದಳು. ನಂತರ ಬಸವರಾಜೇಶ್ವರಿ ಸಿದ್ದಪ್ಪ ಜೊತೆ ಮಾತಾಡೋದನ್ನು ಬಿಟ್ಟಿದ್ದಳು. ಇದಕ್ಕೆಲ್ಲ ಕಾರಣ ಶಶಿಕಲಾ, ಆಕೆಯನ್ನೇ ಮುಗಿಸೋಣ ಎಂದ ಸಿದ್ದಪ್ಪ ಹೇರ್ ಡ್ರೈಯರ್ನಲ್ಲಿ (Hair Dryer) ಗ್ರಾನೈಟ್ ಡೆಟೊನೇಟರ್ ಇಟ್ಟು ಶಶಿಕಲಾ ಅವರಿಗೆ ಕೊರಿಯರ್ ಮಾಡಿದ್ದ. ಆದರೆ ಅದನ್ನು ರಿಸೀವ್ ಮಾಡಿದ ಬಸವರಾಜೇಶ್ವರಿ ಕೈ ಛಿದ್ರವಾಗಿದೆ.
ಗ್ರ್ಯಾನೈಟ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಿದ್ದಪ್ಪ ಡೆಟೋನೇಟರ್ ಬಗ್ಗೆ ಮಾಹಿತಿ ಪಡೆದಿದ್ದ. ನವೆಂಬರ್ 10 ರಂದು 500 ರೂ. ಕೊಟ್ಟು ಹೇರ್ ಡ್ರೈಯರ್ ಖರೀದಸಿದ್ದ. ಅದರಲ್ಲಿ ಡೆಟೊನೇಟರ್ ಅಳವಡಿಸಿ ನ. 13 ರಂದು ಬಾಗಲಕೋಟೆ ಡಿಟಿಡಿಸಿಯಿಂದ ಇಳಕಲ್ಗೆ ಕೊರಿಯರ್ ಮಾಡಿದ್ದ. ಕೊರಿಯರ್ಗೆ ಶಶಿಕಲಾ ಹಾಗೂ ಆಕೆಯ ನಂಬರ್ ಹಾಕಿ ಕಳಿಸಿದ್ದ. ಕವರ್ ಮೇಲೆ ವಿಶಾಖಪಟ್ಟಣ ಎಂದು ಬರೆದಿದ್ದ. ಆದರೆ, ಸಿದ್ದಪ್ಪನ ಲೆಕ್ಕಾಚಾರವೆಲ್ಲವೂ ಉಲ್ಟಾ ಆಗಿದ್ದು, ಪ್ರೇಯಸಿಯ ಕೈ ಛಿದ್ರವಾಗಿದೆ. ಪ್ರಕರಣದ ಗಂಭೀರತೆ ಅರಿತ ಇಳಕಲ್ ನಗರ ಠಾಣೆ ಪೊಲೀಸರು ಎರಡೇ ದಿನದಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.