ತವರು ಮನೆಯಿಂದ ಹಿಂತಿರುಗಲು ಪತ್ನಿ ನಕಾರ; ನಂತರ ನಡೆದಿದ್ದು ದುರಂತ!

Untitled design - 2023-09-21T172842.741
Published on

ಉತ್ತರಪ್ರದೇಶ: ತವರು ಮನೆಗೆ ಹೋಗಿದ್ದ ಪತ್ನಿಯನ್ನು ಹಿಂತಿರುಗಲು ಎಷ್ಟು ಬಾರಿ ಮನವಿ ಮಾಡಿದರು ಅದಕ್ಕೆ ನಿರಾಕರಿಸಿದಳು ಎಂಬ ಕಾರಣಕ್ಕೆ ಮನನೊಂದ ಪತಿ ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರಪ್ರದೇಶದ ಔರೈಯಾ ಜಿಲ್ಲೆಯಲ್ಲಿ ವರದಿಯಾಗಿದೆ.

ಪತಿಯ ವಿಪರೀತ ಕುಡಿತದ ಚಟಕ್ಕೆ ಬೇಸತ್ತು ಪತ್ನಿ ಆಕೆಯ ಪೋಷಕರ ಮನೆಗೆ ತೆರಳಿದ ಬಳಿಕ ಈ ಘಟನೆ ನಡೆದಿದ್ದು, ದಂಪತಿ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ಪೊಲೀಸರು ವರದಿಯಲ್ಲಿ ತಿಳಿಸಿದ್ದಾರೆ.

ಹೆಂಡತಿ ತವರು ಮನೆಗೆ ಹೋದ ಘಟನೆಯಿಂದ ಬೇಸರಗೊಂಡ ಪತಿ, ಆಕೆಯನ್ನು ತನ್ನ ಮನೆಗೆ ಹಿಂತಿರುಗುವಂತೆ ನಿರಂತರವಾಗಿ ಮನವಿ ಮಾಡಿದ್ದಾನೆ. ಆದ್ರೆ, ಇದಕ್ಕೆ ಸ್ಪಂದಿಸದ ಪತ್ನಿ, ಪತಿಯಿಂದ ದೂರ ಉಳಿಯಲು ದೃಢ ನಿರ್ಧಾರ ಕೈಗೊಂಡ ಬೆನ್ನಲ್ಲೇ ಮನನೊಂದ ರಾಜೇಶ್ (ಮೃತ ವ್ಯಕ್ತಿ) ವಿಪರೀತ ಮದ್ಯ ಸೇವಿಸಿ ತದನಂತರ ಮನೆಯೊಳಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.

ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮರಣೋತ್ತರ ಪರೀಕ್ಷೆಗೆ ಶವವನ್ನು ಕಳುಹಿಸುವ ಮುನ್ನ ಕೂಲಂಕುಷ ತನಿಖೆ ನಡೆಸಿದ್ದಾರೆ. ವಿಚಾರಣೆ ನಂತರ ರಾಜೇಶ್‌ಗೆ ಮದ್ಯದ ಚಟವಿತ್ತು ಎಂದು ಖಚಿತಪಡಿಸಿದ್ದಾರೆ. ಆತನ ಕುಡಿತದ ಚಟಕ್ಕೆ ಪತ್ನಿ ಪದೇ ಪದೇ ಆಕ್ಷೇಪ ವ್ಯಕ್ತಪಡಿಸಿದ್ದಳು ಎಂದು ಹೇಳಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net