

ಪ್ಯಾರಿಸ್: ಸಾಧಿಸುವ ಛಲ ಮತ್ತು ಧೈರ್ಯವಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈ ಒಂದು ಘಟನೆಯೇ ಸ್ಫೂರ್ತಿಯಾಗಿದೆ. ಫ್ರಾನ್ಸ್ ಮೂಲದ ಯೂಟ್ಯೂಬರ್ ಅಥ್ಲೆಟಿ ಲಿಯೋ ಅರ್ಬನ್ ಪ್ಯಾರಿಸ್ನ ಮಾಂಟ್ಪರ್ನಾಸ್ಸೆ ಗಗನಚುಂಬಿ ಕಟ್ಟಡವನ್ನು ಬರಿಗೈಯಲ್ಲಿ ಏರುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
ಶನಿವಾರ ಈ ಸಾಧನೆ ಮಾಡಿರುವ ಲಿಯೋ, ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಕೇವಲ ಬರಿಗೈಯಲ್ಲಿ ಬರೋಬ್ಬರಿ 690 ಅಡಿ ಆಕಾಶದೆತ್ತರದ ಕಟ್ಟಡವನ್ನು ನಿರಾಯಾಸವಾಗಿ ಏರುವ ಮೂಲಕ ತನ್ನ ಸಾಮರ್ಥ್ಯವನ್ನು ನಿರೂಪಿಸಿದ್ದಾರೆ.
ಕೇವಲ ಒಂದು ಗಂಟೆ ಅವಧಿಯೊಳಗೆ ಲಿಯೋ 58 ಅಂತಸ್ತಿನ ಕಟ್ಟಡವೇರಿದ್ದಾರೆ. ದಾರಿಹೋಕರು ಲಿಯೋ ಸಾಹಸಕ್ಕೆ ಮರುಳಾಗಿ ಕಟ್ಟಡವೇರುವ ದೃಶ್ಯವನ್ನು ಕಣ್ತುಂಬಿಕೊಂಡರು. ಇನ್ನು ಅನೇಕರು ತಮ್ಮ ಮೊಬೈಲ್ ಕ್ಯಾಮರಾ ಕಣ್ಣಲ್ಲಿ ರೋಮಾಂಚನಾಕಾರಿ ದೃಶ್ಯವನ್ನು ಸೆರೆಹಿಡಿದು ಜಾಲತಾಣದಲ್ಲಿ ಹರಿಬಿಟ್ಟು, ಸಾಹಸಿ ಲಿಯೋರ ಧೈರ್ಯಕ್ಕೆ ಸಲಾಂ ಹೇಳಿದ್ದಾರೆ.
ಲಿಯೋ ಕಟ್ಟಡ ಏರುವುದು ಇದೇ ಮೊದಲೇನಲ್ಲ. ಈ ಹಿಂದೆ ವಿಶ್ವಪ್ರಸಿದ್ದ ಗಗನಚುಂಬಿ ಐಫೆಲ್ ಟವರ್ ಅನ್ನು ಏರುವ ಮೂಲಕ ಲಿಯೋ ಎಲ್ಲರನ್ನು ಚಕಿತಗೊಳಿಸಿದ್ದರು. ಅಲ್ಲದೆ, ಎಂಜಿ ಮತ್ತು ಏರಿಯಾನೆ ಗಗನಚುಂಬಿ ಕಟ್ಟಡಗಳನ್ನು ಏರಿದ್ದಾರೆ.
ಇದೀಗ 210 ಮೀಟರ್ (690 ಅಡಿ) ಎತ್ತರ ಕಟ್ಟಡ ಏರಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಲಿಯೋ ಶೇರ್ ಮಾಡಿಕೊಂಡು ಸಂಭ್ರಮಿಸಿದ್ದಾರೆ. ಅಂದಹಾಗೆ ಮಾಂಟ್ಪರ್ನಾಸ್ಸೆ ಕಟ್ಟಡ ಫ್ರೆಂಚ್ ಕ್ಯಾಪಿಟಲ್ನ ಅತ್ಯಂತ ಎತ್ತರದ ಕಟ್ಟಡ ಎಂಬ ಹೆಸರಿಗೆ ಪಾತ್ರವಾಗಿದೆ.
ಮಾಂಟ್ಪರ್ನಾಸ್ಸೆ ಕಟ್ಟಡ ಏರುವುದು ತುಂಬಾ ಕಷ್ಟಕರವಾಗಿತ್ತು. ಹೀಗಾಗಿ ನಾನು ಒಂದು ವಾರಗಳ ಕಾಲ ಸಾಕಷ್ಟು ತಯಾರಿಯನ್ನು ನಡೆಸಿದ್ದಾಗಿ ಲಿಯೋ ಹೇಳಿಕೊಂಡಿದ್ದಾರೆ. ಜಾಲತಾಣಗಳಲ್ಲಿ ಲಿಯೋ ಸಾಹಸಕ್ಕೆ ಸಾಕಷ್ಟು ಮೆಚ್ಚುಗೆ ಮಾತುಗಳು ವ್ಯಕ್ತವಾಗುತ್ತಿವೆ. (ಏಜೆನ್ಸೀಸ್)