ಹೊಸ ಮನೆ ಪ್ರವೇಶಿಸಿದ ಕುಟುಂಬಕ್ಕೆ ಮೆಟ್ಟಿಲಡಿಯಲ್ಲಿ ರಹಸ್ಯ ಕೋಣೆ ಪತ್ತೆ: ಒಳಹೊಕ್ಕವರಿಗೆ ಕಾದಿತ್ತು ಶಾಕ್​!

Room
Published on

ನ್ಯೂಯಾರ್ಕ್​: ಹೊಸ ಮನೆ ಖರೀದಿಸುವ ಮುನ್ನ ಮಾಲೀಕರು ಮನೆಯ ವಾತಾವರಣ ಸೇರಿದಂತೆ ಅದರ ಪೂರ್ವಾಪರವನ್ನು ತಿಳಿದುಕೊಂಡ ಬಳಿಕ ಮನೆಯನ್ನು ಕೊಂಡುಕೊಳ್ಳುತ್ತಾರೆ. ಆದರೆ, ಹೊಸ ಮನೆಯನ್ನು ಖರೀದಿಸಿದ ಖುಷಿಯಲ್ಲಿದ್ದ ಕುಟುಂಬಕ್ಕೆ ಮರು ಘಳಿಗೆಯಲ್ಲಿ ಅಚ್ಚರಿಯೊಂದು ಎದುರಾಗಿತ್ತು.

ಬೀಗದ ಕೈ ಹಸ್ತಾಂತರಗೊಂಡು ಹೊಸ ಮನೆ ಪ್ರವೇಶಿಸಿದ ಬಳಿಕ ಖುಷಿಯಲ್ಲಿದ್ದ ಕುಟುಂಬ ಮನೆಯಲ್ಲಿದ್ದ ಹೆಚ್ಚುವರಿ ಜಾಗವನ್ನು ನೋಡಿ ಶಾಕ್​ ಆಗಿದ್ದಾರೆ. ದುರಾದೃಷ್ಟಕರವೆಂದರೆ ಹೆಚ್ಚುವರಿ ಜಾಗವೂ ಇದಕ್ಕೂ ಮುನ್ನ ಮನೆ ಪರಿಶೀಲಿಸುವಾಗ ಕುಟುಂಬದ ಕಣ್ಣಿಗೆ ಬಿದ್ದಿಲ್ಲ.

ಅಂದಹಾಗೆ ಹೊಸ ಮನೆಯಲ್ಲಿ ಮರದ ಮೆಟ್ಟಿಲು ಇದೆ. ಕೇವಲ ಮೆಟ್ಟಿಲು ತಾನೇ ಅಂದುಕೊಂಡವರಿಗೆ ಮೆಟ್ಟಿಲಿನ ಕೊನೆಯಲ್ಲಿ ಅಗಲವಾದ ಜಾಗವೊಂದು ಕಂಡಿದೆ. ಏನಿದು ಎಂಬ ಮತ್ತಷ್ಟು ಕುತೂಹಲದಿಂದ ನೋಡಿದಾಗ ಮೆಟ್ಟಿಲ ಹಿಂದೆ ರಹಸ್ಯ ಕೋಣೆಯೊಂದನ್ನು ನೋಡಿದ ಕುಟುಂಬಕ್ಕೆ ಅಚ್ಚರಿಯೇ ಕಾದಿತ್ತು.

ರಹಸ್ಯ ಕೋಣೆಯ ಒಳಗೆ ಹೋದಾಗ ಅಲ್ಲಿ ಪ್ರಾಚೀನ ವಸ್ತುಗಳು, 1960 ಮತ್ತು 70ರ ದಶಕದ 10 ವೈನ್​ ಬಾಟಲ್​ಗಳು ಮತ್ತು ಹಳೆಯ ಮರದ ತುಂಡುಗಳು ಪತ್ತೆಯಾಗಿವೆ. ಇದರ ಬೆನ್ನಲ್ಲೇ ಕುಟುಂಬದ ಸದಸ್ಯರೊಬ್ಬರು ಫೋಟೋ ತೆಗೆದು ಅದನ್ನು ರೆಡಿಟ್​ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಾವು ಖರೀದಿಸಿ ಹೊಸ ಮನೆಯಲ್ಲಿ ನಮ್ಮ ಪಾಲಕರು ರಹಸ್ಯ ಕೋಣೆಯೊಂದನ್ನು ಪತ್ತೆಹಚ್ಚಿದ್ದಾರೆಂದು ಹೇಳಿಕೊಂಡಿದ್ದಾರೆ.

ಇದರ ಬೆನ್ನಲ್ಲೇ ಅನೇಕ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ರಹಸ್ಯ ಕೋಣೆಯಲ್ಲೇನಾದರೂ ಹ್ಯಾರಿ ಪಾಟರ್​ ಪತ್ತೆಯಾಯಿತಾ? ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದರೆ, ತರಕಾರಿ ತಿನ್ನಲು ತಕರಾರು ತೆಗೆಯುತ್ತಿದ್ದ ಮಕ್ಕಳನ್ನು ಅಲ್ಲಿ ಇರಿಸಿ ಭಯ ಹುಟ್ಟಿಸಲಾಗುತ್ತಿತ್ತು ಎಂದು ನಗೆ ಚಟಾಕಿ ಹಾರಿಸಿದ್ದಾರೆ. ಕೆಲವರು ಭಯಪಡುವಂಥದ್ದು ಏನಿಲ್ಲ ಅಂದರೆ, ವೆನ್​ ನೆಲಮಾಳಿಗೆ ಇರಬೇಕು ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net