ಟ್ರಕ್​ಗೆ ಡಿಕ್ಕಿ ಹೊಡೆದು ಸೇತುವೆ ಮೇಲಿಂದ 50 ಅಡಿ ಆಳಕ್ಕೆ ಬಿದ್ದ ಬಸ್: 16 ಮಂದಿ ದುರ್ಮರಣ!

Accident 1
Published on

ಬ್ರಾಸಿಲಿಯಾ: ಟ್ರಕ್​ಗೆ ಡಿಕ್ಕಿ ಹೊಡೆದ ಬಸ್​ ಸೇತುವೆ ಮೇಲೆ ನಿಯಂತ್ರಣ ಕಳೆದುಕೊಂಡು ಸುಮಾರು 50 ಅಡಿ ಆಳದ ಕೆಳಗೆ ಬಿದ್ದ ಪರಿಣಾಮ ಬಸ್ಸಿನಲ್ಲಿದ್ದ 16 ಮಂದಿ ದುರಂತ ಸಾವಿಗೀಡಾಗಿ, 27 ಮಂದಿ ಗಂಭೀರ ಗಾಯಗೊಂಡಿರುವ ಭೀಕರ ಅಪಘಾತ ಬ್ರೆಜೆಲ್​ನ ಆಗ್ನೇಯ ರಾಜ್ಯ ಮಿನಾಸ್​ ಗೆರಿಯಾಸ್​ನಲ್ಲಿ ಶುಕ್ರವಾರ ನಡೆದಿದೆ.

ಮಿನಾಸ್​ ಗೆರಿಯಾಸ್​ನ ಜಾವೋ ಮೊನ್ಲೆವಾಡೆ ಪಟ್ಟಣದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಿಆರ್​-381ರಲ್ಲಿ ಶುಕ್ರವಾರ ಮಧ್ಯಾಹ್ನ 1.30ರ ಸುಮಾರಿಗೆ ಅಪಘಾತ ಸಂಭವಿಸಿದೆ. ವೇಗವಾಗಿ ಚಲಿಸುತ್ತಿದ್ದ ಬಸ್​ ಟ್ರಕ್​ಗೆ ಗುದ್ದಿದ ಪರಿಣಾಮ ನಿಯಂತ್ರಣ ಕಳೆದುಕೊಂಡು ಸೇತುವೆ ಮೇಲಿಂದ ಕೆಳಗೆ ಬಿದ್ದಿದೆ.

ಪ್ರತ್ಯಕ್ಷದರ್ಶಿಗಳು ಸ್ಥಳೀಯ ಮಾಧ್ಯಮಕ್ಕೆ ನೀಡಿರುವ ಹೇಳಿಕೆಯ ಪ್ರಕಾರ ಚಾಲಕ ಬಸ್ಸನ್ನು ರಿವರ್ಸ್​ ತೆಗೆದುಕೊಳ್ಳಲು ಸಾಕಷ್ಟು ಪ್ರಯತ್ನಿಸಿದಾದರೂ ಅದು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಬಸ್​ ಸೇತುವೆಯಿಂದ ಕೆಳಗೆ ಬೀಳುವಾಗ ಅದರಲ್ಲಿ ಸುಮಾರು ನಾಲ್ಕು ಮಂದಿ ಇದ್ದರು ಎಂದು ತಿಳಿಸಿದ್ದಾರೆ.

ಗಾಯಗೊಂಡವರಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಏರ್​ಲಿಫ್ಟ್​ ಮೂಲಕ ಬೆಲೊ ಹಾರಿಝೊಂಟೆಯಲ್ಲಿರುವ ತುರ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಂದೇ ವಾರದ ಅಂತರದಲ್ಲಿ ಬ್ರೆಜಿಲ್​ನಲ್ಲಿ ಸಂಭವಿಸಿದ ಎರಡನೇ ಭೀಕರ ಅಪಘಾತ ಇದಾಗಿದೆ. ಕಳೆದ ವಾರ ಸಾವೋಪೋಲಾದ ಟಾಗುವಾ ನಗರದಲ್ಲಿ ಟ್ರಕ್​ ಮತ್ತು ಬಸ್​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 42 ಮಂದಿ ಪ್ರಾಣ ಕಳೆದುಕೊಂಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net