ಮೂಕಿ ಪತ್ನಿಗಾಗಿ ತನ್ನ ನಾಲಿಗೆಯನ್ನೆ ಕತ್ತರಿಸಿ ದೇವರಿಗೆ ಸಮರ್ಪಿಸಿದ ಪತಿ

Tongue
Published on

ದುರ್ಗ್​​: ನಂಬಿಕೆ ಹಾಗೂ ಅಪನಂಬಿಕೆ ಮನುಷ್ಯನೊಂದಿಗೆ ಬೆಳೆದುಕೊಂಡು ಬಂದಿವೆ. ಒಂದು ಕಾಲದ ಕೆಲವೊಂದು ನಂಬಿಕೆಗಳು ಇನ್ನೊಂದು ಕಾಲದಲ್ಲಿ ಸುಳ್ಳೆಂದು ವೈಜ್ಞಾನಿಕವಾಗಿ ಸಾಬೀತಾಗುತ್ತದೆ. ಅದಕ್ಕೆ ಪೂರಕವೆಂಬಂತೆ ಹಲವು ನಿದರ್ಶನಗಳು ನಮ್ಮ ಕಣ್ಣ ಮುಂದಿದೆ. ಇದೀಗ ಅದೇ ರೀತಿಯ ಘಟನೆಯೊಂದು ನಡೆದಿದ್ದು, ಮೂಢನಂಬಿಕೆಗೆ ಮಾರು ಹೋದ ವ್ಯಕ್ತಿ ತನ್ನ ನಾಲಿಗೆಯನ್ನೇ ಕತ್ತರಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಘಟನೆಯು ಛತ್ತೀಸ್​ಗಢದ ದುರ್ಗ್​ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡಿರುವ ವ್ಯಕ್ತಿಯನ್ನು ರಾಜೇಶ್ವರ್ ನಿಶಾದ್​ (33) ಎಂದು ಗುರುತಿಸಲಾಗಿದೆ. ಪ್ರಸ್ತುತ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಂಜೋರಾ ಪೊಲೀಸ್​ ಠಾಣಾಧಿಕಾರಿ, ರಾಜೇಶ್ವರ್​ ತನ್ನ ಕೆಲವೊಂದು ಆಸೆಗಳನ್ನು ಈಡೇರಿಸುವಂತೆ ಶಿವನ ಬಳಿ ಬೇಡಿಕೊಂಡು  ಗ್ರಾಮದ ಕೆರೆಗೆ ತೆರಳಿ ಕೆಲ ಮಂತ್ರಗಳನ್ನು ಪಠಿಸಿ ಬಳಿಕ ಚಾಕುವಿನಿಂದ ನಾಲಿಗೆಯನ್ನು ಕೊಯ್ದು ದಡದಲ್ಲಿರುವ ಕಲ್ಲಿನ ಮೇಲೆ ಇಟ್ಟಿದ್ದಾನೆ. ದೇವಸ್ಥಾನದ ಆವರಣದಲ್ಲಿ ತೀವ್ರ ರಕ್ತಸ್ರಾವದಿಂದ ವ್ಯಕ್ತಿ ಒಬ್ಬರು ಕುಳಿತಿರುವುದನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಗ್ರಾಮಸ್ಥರು ಹೇಳುವ ಪ್ರಕಾರ ರಾಜೇಶ್ವರ್ ಪತ್ನಿ ಮೂಕಿಯಾಗಿದ್ದು, ಹೀಗಾಗಿ ಈ ರೀತಿ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದರೆ ಇದಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಗಾಯಾಳುವಿಗೆ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ ಎಂದು ಅಂಜೋರಾ ಪೊಲೀಸ್​ ಠಾಣಾಧಿಕಾರಿ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net