ಪೆನ್​ಡ್ರೈವ್​ ಪ್ರಕರಣದ ಕಥಾನಾಯಕ, ಡೈರೆಕ್ಟರ್, ಪ್ರೋಡ್ಯೂಸರ್ ಎಲ್ಲಾ ಕುಮಾರಸ್ವಾಮಿ: ಡಿ.ಕೆ. ಶಿವಕುಮಾರ್ ಆರೋಪ

DK HDK
Published on

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಪೆನ್​ಡ್ರೈವ್​ ಪ್ರಕರಣ ಭಾರೀ ಕೋಲಾಹಲಕ್ಕೆ ಕಾರಣವಾಗಿದ್ದು ಕಾಂಗ್ರೆಸ್​ ಹಾಗೂ ಜೆಡಿಎಸ್​ ನಾಯಕರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಪೆನ್​ಡ್ರೈವ್​ ಪ್ರಕರಣ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್​ ನಡುವೆ ಕಳೆದ ಕೆಲ ದಿನಗಳಿಂದ ವಾಕ್ಸಮರ ನಡೆಯುತ್ತಿದ್ದು ಇದೀಗ ಇವರಿಬ್ಬರ ನಡುವಿನ ಜಗಳ ಮತ್ತೊಂದು ಹಂತ ತಲುಪಿದೆ.

ಇದಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ. ಶಿವಕುಮಾರ್​ ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಅವರು ಹಿಟ್‌ ಅಂಡ್‌ ರನ್‌ ಗಿರಾಕಿ ಅನ್ನೋದು ರಾಜ್ಯದ ಜನತೆಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್​ ಮಾಜಿ ಸಿಎಂ ಎಚ್.ಡಿ. ಕುಮರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕುಮಾರಸ್ವಾಮಿ ಅವರು ಹಿಟ್‌ ಅಂಡ್‌ ರನ್‌ ಗಿರಾಕಿ ಅನ್ನೋದು ರಾಜ್ಯದ ಜನತೆಗೆ ಚೆನ್ನಾಗಿ ಗೊತ್ತಿದೆ. ಅವರು ಈ ಹಿಂದಿನಿಂದಲೂ ಮಾಡಿದ ಆರೋಪಗಳು ಯಾವುದೂ ಸಾಬೀತಾಗಿಲ್ಲ, ಪ್ರಜ್ವಲ್‌ ರೇವಣ್ಣ ಸೆಕ್ಸ್‌ ಗೇಟ್‌ ಪ್ರಕರಣದಲ್ಲಿ ನನ್ನ ಹೆಸರು ಮುನ್ನಲೆಗೆ ತಂದರೆ ಇಡೀ ರಾಜ್ಯದ ಗಮನ ಸೆಳೆಯಬಹುದು ಎನ್ನುವ ಕಾರಣಕ್ಕೆ ಅವರು ಪದೇ ಪದೇ ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ.

ಈ ಕೇಸಿನ ಹಿಂದೆ ಇರುವುದು ಬ್ಲಾಕ್‌ ಮೇಲ್‌ ಕಿಂಗ್‌ ಕುಮಾರಸ್ವಾಮಿ. ರಾಜಕಾರಣಿಗಳು, ಅಧಿಕಾರಿಗಳನ್ನು ಬ್ಲಾಕ್‌ ಮೇಲ್‌ ಮಾಡುವುದೇ ಅವರ ಕೆಲಸ. ಅವರಿಗೆ ದಿನಕ್ಕೊಮ್ಮೆ ನನ್ನ ಹೆಸರು ಎತ್ತದಿದ್ದರೆ ನಿದ್ದೆ ಬರಲ್ಲ. ಈಗಲೂ ನಾನು ಹೇಳುತ್ತಿದ್ದೇನೆ ಈ ಪ್ರಕರಣದ ಕಥಾನಾಯಕ, ಡೈರೆಕ್ಟರ್, ಪ್ರೋಡ್ಯೂಸರ್ ಎಲ್ಲಾ ಕುಮಾರಸ್ವಾಮಿ ಅವರೇ.

ನಮ್ಮದು ರೇವಣ್ಣ ಅವರದು ಬೇರೆ ಕುಟುಂಬ ಅಂತ ಹಿಂದೆ ಅವರೇ ಹೇಳಿದ್ದರು. ಉಪ್ಪು ತಿಂದವನು ನೀರು ಕುಡಿಯಬೇಕು ಅಂತ ಕೂಡ ಹೇಳಿದ್ರು, ಈಗ ಯಾಕೆ ಮತ್ತೆ ಹಿಟ್‌ ಅಂಡ್‌ ರನ್‌ ಮಾಡ್ತಿದ್ದಾರೆ. ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ, ಈಗಲೇ ತೀರ್ಪು ಕೊಡೋಕೆ ಕುಮಾರಸ್ವಾಮಿ ಅವರೇನು ಲಾಯರೋ, ಜಡ್ಜೋ, ಚರ್ಚೆ ಮಾಡಲು ಇನ್ನೂ ಟೈಮ್ ಇದೆ, ವಿಧಾನಸಭೆ ಅಧಿವೇಶನ ಇದೆ, ಎಲ್ಲಾ ತೆಗೆದುಕೊಂಡು ಬರಲಿ ಚರ್ಚೆ ಮಾಡೋಣ ಎಂದು ಸವಾಲೆಸೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net