ದೇವರಾಜೇಗೌಡ ಡಿಕೆ ಶಿವಕುಮಾರ್​ ಜತೆ ಮಾತಾಡಿದ್ದು ನಿಜ: ಶಿವರಾಮೇಗೌಡ

ShivarameGowda
Published on

ಬೆಂಗಳೂರು: ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸಂಸದ ಪ್ರಜ್ವಲ್​ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಮತ್ತೊಂದು ಹೇಳಿಕೆ ನೀಡುವ ಮೂಲಕ ಹೊಸ ಟ್ವಿಸ್ಟ್​ ನೀಡಿದ್ದಾರೆ.

ಬೆಂಗಳೂರಿನಲ್ಲಿ ಈ ಕುರಿತು ಸುದ್ದಿಗೋಷ್ಠಿ ಉದ್ಧೇಶಿಸಿ ಮಾತನಾಡಿದ ಶಿವರಾಮೇಗೌಡ,  ನನಗೂ ಪೆನ್​​ಡ್ರೈವ್​ಗೂ ಯಾವುದೇ ಸಂಬಂಧ ಇಲ್ಲ. ಪ್ರಕರಣದಲ್ಲಿ ನನ್ನ ಹೆಸರು ಬಳಸಿರುವುದು ವಿಷಾದನೀಯ ಎಂದು ಹೇಳಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಹೊಳೆನರಸೀಪುರದ ಕೆಲವರು ನನ್ನನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ವೇಳೆ ದೇವರಾಜೇಗೌಡ ನಿಮ್ಮನ್ನು ಭೇಟಿ ಮಾಡಬೇಕು ಅಂತ ನನಗೆ ಹೇಳಿದರು. ಬಳಿಕ ಅವರು ದೇವರಾಜೇಗೌಡಗೆ ಫೋನ್​ ಮಾಡಿಕೊಟ್ಟರು. ಆಗ ನಾನು ಏನಪ್ಪ ಚೆನ್ನಾಗಿದ್ದೀಯಾ, ನಿನ್ನ ಆಸೆ ಈಡೇರಿತು. ವರ್ಷಾನುಗಟ್ಟಲೇ ಹೋರಾಟ ಮಾಡುತ್ತಿದ್ದೆ. ಎಲ್ಲವೂ ಆಚೆಗೆ ಬಂತು ಅಂತ ಫೋನ್​ನಲ್ಲಿ ಇಷ್ಟೇ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.

ಬಳಿಕ ದೇವರಾಜೇಗೌಡ ನನ್ನನ್ನು ಖಾಸಗಿ ಹೋಟೆಲ್​ನಲ್ಲಿ ಭೇಟಿಯಾಗಿ ಡಿ.ಕೆ. ಶಿವಕುಮಾರ್​ರನ್ನು ಭೇಟಿ ಮಾಡಿಸುವಂತೆ ಹಠ ಹಿಡಿದ ಆಗ ನಾನು ಡಿಕೆ ಶಿವಕುಮಾರ್ ಅವರಿಗೆ ಕರೆ ಮಾಡಿ, ಮಾತಾಡಿದೆ. ಆ ಬಳಿಕ ದೇವರಾಜೇಗೌಡ ಡಿ.ಕೆ. ಶಿವಕುಮಾರ್ ಅವರ ಜೊತೆ 1:30 ನಿಮಿಷ ಮಾತಾಡಿದ. ಆಗ ಡಿಕೆ ಶಿವಕುಮಾರ್ ಅವರು ನಿನ್ನ ಹತ್ತಿರ ಏನಿದೆ ಎಸ್​ಐಟಿಗೆ ಕೊಡು ಅಂತ ದೇವರಾಜೇಗೌಡಗೆ ಹೇಳಿದರು, ಇಷ್ಟೇ ನಡೆದ ಸಂಭಾಷಣೆ ಎಂದಿದ್ದಾರೆ.

ನನಗೂ ಹಾಗೂ ಕಾರ್ತಿಕ್​ಗೌಡಗೂ ಪರಿಚಯವೇ ಇಲ್ಲ. ನನಗೆ ಗೊತ್ತಿರುವುದು ವಕೀಲ ದೇವರಾಜೇಗೌಡ ಅಷ್ಟೇ ಇಷ್ಟೆಲ್ಲ ಆದಮೇಲೆ ಅವನ ಸಹವಾಸವೇ ಬೇಡಪ್ಪ. ಅವನನ್ನು ಪಕ್ಷದಿಂದ ಹೊರಹಾಕಬೇಕು. ಪೆನ್​ಡ್ರೈವ್ ರುವಾರಿಗಳು ದೇವರಾಜೇಗೌಡ, ಕಾರ್ತಿಕ್ ಗೌಡ. ಇವರಿಬ್ಬರ ಬಗ್ಗೆ ಎಸ್ಐಟಿ ತನಿಖೆ ನಡೆಸಿ ಕ್ರಮಕೈಗೊಳ್ಳಲಿ ಎಂದು ಮಾಜಿ ಸಂಸದ ಶಿವರಾಮೇಗೌಡ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net