

ಸೂರತ್: ತನ್ನ ಸಂಬಂಧಿಕರ ವಜ್ರ ಸಂಸ್ಥೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ, ಅಲ್ಲಿ ಕೆಲಸ ನಿರ್ವಹಿಸಲು ಇಷ್ಟವಿಲ್ಲದೆ, ಅದನ್ನು ಉದ್ಯೋಗ ಕೊಟ್ಟವರ ಬಳಿ ಹೇಳಲೂ ಆಗದೆ, ಮನನೊಂದು ತನ್ನ ಎಡಗೈಯ ನಾಲ್ಕು ಬೆರಳುಗಳನ್ನು (Chops Fingers) ಹರಿತವಾದ ಚಾಕುವಿನಿಂದ ಕತ್ತರಿಸಿಕೊಂಡ ವಿಚಿತ್ರ ಹಾಗೂ ವಿಲಕ್ಷಣ ಘಟನೆ ಗುಜರಾತ್‌ನ ಸೂರತ್ನಲ್ಲಿ ವರದಿಯಾಗಿದೆ.
ಬೆರಳು ಕತ್ತರಿಸಿಕೊಂಡ ವ್ಯಕ್ತಿಯನ್ನು ಮಯೂರ್ ತಾರಾಪರಾ (32) ಎಂದು ಗುರುತಿಸಲಾಗಿದ್ದು, ತನ್ನ ಕೈಬೆರಳುಗಳನ್ನು ಯಾರೋ ಕತ್ತರಿಸಿದ್ದಾರೆ ಎಂದು ಪೊಲೀಸರ ಬಳಿ ಸುಳ್ಳು ಕಥೆ ಹೇಳಿದ್ದ. ನಾನು ಈ ಹಿಂದೆ ರಸ್ತೆಯ ಪಕ್ಕದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದೆ. ಆಗ ನನ್ನ ಬೆರಳುಗಳು ಕಾಣೆಯಾಯಿತು ಎಂದಿದ್ದ, ಇದನ್ನು ಸೂಕ್ಷ್ಮವಾಗಿ ಗಮನಿಸಿದ ಪೊಲೀಸರು, ಆತ ಎಲ್ಲಿ ಬಿದ್ದ ಎಂಬುದರ ಮಾಹಿತಿ ಪಡೆದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಅವರ ಅನುಮಾನ ನಿಜವಾಗಿದೆ. ಕಡೆಗೆ ಆತನನ್ನು ವಿಚಾರಣೆ ನಡೆಸಿದಾಗ ಘಟನೆಯ ಸತ್ಯಾಸತ್ಯತೆ ಹೊರಬಿದ್ದಿದೆ.
ಸೂರತ್ ಕ್ರೈಂ ಬ್ರಾಂಚ್ ಮಾಹಿತಿ ಪ್ರಕಾರ, ತಾರಾಪರಾನಿಗೆ ತಮ್ಮ ಸಂಬಂಧಿಕರ ಸಂಸ್ಥೆಯಲ್ಲಿ ಅಕೌಂಟ್ಸ್ ವಿಭಾಗದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಲು ಕಿಂಚಿತ್ತು ಇಷ್ಟವಿರಲಿಲ್ಲ. ಇದರಿಂದ ಬಳಲುತ್ತಿದ್ದ ಈತ, ಉದ್ಯೋಗ ಕೊಟ್ಟವರಿಗೆ ತನಗೆ ಕಾರ್ಯನಿರ್ವಹಿಸಲು ಆಗುವುದಿಲ್ಲ ಎಂದು ಹೇಳಲು ಧೈರ್ಯ ಸಾಕಾಗಿಲ್ಲ. ಅತ್ತ ಹೇಳಲು ಆಗದೆ, ಇತ್ತ ಕೆಲಸವೂ ಮಾಡಲಾರದೆ ಕಡೆಗೆ ಬೆರಳಿದ್ದರೆ ತಾನೇ ಇಷ್ಟೆಲ್ಲ! ಬೆರಳೇ ಇಲ್ಲ ಎಂದು ಹೇಳಿದರೆ, ಹೇಗೆ ಕೆಲಸ ಮಾಡಲು ಸಾಧ್ಯ ಎಂದು ನಿರ್ಧರಿಸಿ ಹರಿತವಾದ ಚಾಕುವಿನಿಂದ ತನ್ನ ಬೆರಳನ್ನೇ ಕತ್ತರಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).