VIDEO| ಜನನಿಬಿಡ ರಸ್ತೆಯಲ್ಲಿ ವ್ಯಕ್ತಿಯನ್ನು ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು

Tamilnadu murder
Published on

ಚೆನ್ನೈ: ಜನನಿಬಿಡ ಪ್ರದೇಶದಲ್ಲಿ ವ್ಯಕ್ತಿ ಒಬ್ಬರನ್ನು ಅಟ್ಟಾಡಿಸಿ ಕೊಚ್ಚಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕಾರೈಕುಡಿ ಜಿಲ್ಲೆಯಲ್ಲಿ ನಡೆದಿದೆ.

ಮೃತರನ್ನು ಮದುರೈ ಮೂಲದ ಅರಿವಳಗನ್ ಅಲಿಯಾಸ್ ವಿನಿತ್(29) ಎಂದು ಗುರುತಿಸಲಾಗಿದ್ದು, ಹಳೇ ವೈಷಮ್ಯದ ಹಿನ್ನಲೆಯಲ್ಲಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ.

ಜನನಿಬಿಡ ಪ್ರದೇಶದಲ್ಲಿ ಕೃತ್ಯ

ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ವಿನಿತ್​ಗೆ ಪೊಲೀಸರು ವಾರಕ್ಕೊಮ್ಮೆ ಠಾಣೆಗೆ ಬಂದು ಸಹಿ ಮಾಡಿ ತೆರಳುವಂತೆ ತಿಳಿಸಿದ್ದರು. ಅದರಂತೆ ಭಾನುವಾರ ಸಹಿ ಮಾಡಿ ಠಾಣೆಯಿಂದ ಹೊರ ಬಂದ ವೇಳೆ ಕಾರಿನಲ್ಲಿ ಬಂದ ಐವರು ದುಷ್ಕರ್ಮಿಗಳು ವಿನಿತ್​ರನ್ನು ಸುತ್ತುವರೆದಿದ್ದಾರೆ.

ತನ್ನ ಮೇಲೆ ದಾಳಿ ಮಾಡಲು ಬಂದವರಿಂದ ತಪ್ಪಿಸಿಕೊಂಡ ವಿನಿತ್​ ಓಡಲು ಆರಂಭಿಸಿದ್ಧಾರೆ. ಕೆಲ ದೂರ ತೆರಳಿದ ಬಳಿಕ ಎಡವಿ ಬಿದ್ದಾಗ ಅವರನ್ನು ಸುತ್ತುವರೆದ ಆರೋಪಿಗಳು ಮನಸೋಇಚ್ಛೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಕೊಲೆ ಆರೋಪಿ

ಕೂಡಲೇ ಸ್ಥಳೀಯರೊಬ್ಬರು ವಿನಿತ್​ ರಕ್ಷಣೆಗೆ ಧಾವಿಸಿದ್ದು, ಗಾಯಾಳುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ಧಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ವಿನಿತ್​ ಮೃತಪಟ್ಟಿದ್ದಾರೆ. ಕೊಲೆ ಪ್ರಕರಣ ಒಂದರಲ್ಲಿ ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ, ವಿನಿತ್​ ಕಾರೈಕುಡಿಯ ಲಾಡ್ಜ್​ ಒಂದರಲ್ಲಿ ತನ್ನ ಸ್ನೇಹಿತರ ಜೊತೆ ತಂಗಿದ್ದ ಎಂದು ವರದಿಯಾಗಿದೆ.

ಪ್ರಕರಣ ಸಂಬಂಧ ಪೊಲೀಸರು ವಿನಿತ್​ ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದು, ಆರೋಪಿಗಳ ಪತ್ತೆಗೆ ತಂಡ ಒಂದನ್ನು ರಚಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net