

ಯಾವತ್ಮಲ್ : ಮಹಾರಾಷ್ಟ್ರದ 24 ವರ್ಷ ವಯಸ್ಸಿನ ಯುವಕನೊಬ್ಬ ಖುದ್ದಾಗಿ ಪುಟ್ಟ ಹೆಲಿಕಾಪ್ಟರ್ ಒಂದನ್ನು ನಿರ್ಮಿಸಿ ಬರುವ ಸ್ವಾತಂತ್ರ್ಯೋತ್ಸವದಂದು ಊರಿನವರ ಮುಂದೆ ಅನಾವರಣ ಮಾಡಬೇಕೆಂಬ ಕನಸು ಹೊಂದಿದ್ದ. ಆದರೆ ವಿಧಿಯ ಆಟ ನೋಡಿ - ಅವನು ನಿರ್ಮಿಸಿದ ಹೆಲಿಕಾಪ್ಟರ್ನ ಪರೀಕ್ಷೆ ನಡೆಸುವ ಸಂದರ್ಭದಲ್ಲಿ ಅದರ ರೋಟಾರ್ ಬ್ಲೇಡ್ ಮುರಿದು ಆತನ ಕತ್ತು ಕೊಯ್ದಿತು, ಅವನ ಜೀವಕ್ಕೆ ಅಂತ್ಯ ಹಾಡಿತು.
ಮಹಾರಾಷ್ಟ್ರದ ಯಾವತ್ಮಲ್ ಜಿಲ್ಲೆಯ ಮಹಾಗಾವ್ ತಹಸೀಲ್ನಲ್ಲಿರುವ ಫುಲಸಾವಂಗಿ ಗ್ರಾಮದ ನಿವಾಸಿಯಾಗಿದ್ದ ಶೇಖ್ ಇಸ್ಮಾಯಿಲ್ ಶೇಖ್ ಇಬ್ರಾಹಿಂ 8ನೇ ತರಗತಿ ವ್ಯಾಸಂಗ ನಿಲ್ಲಿಸಿ ತನ್ನ ಅಣ್ಣನ ಗ್ಯಾಸ್ ವೆಲ್ಡಿಂಗ್ ವರ್ಕ್ಶಾಪ್ ಸೇರಿದ್ದ. ಅಲ್ಲಿ ಅಲ್ಮಿರಾ, ಕೂಲರ್ಗಳು ಮತ್ತು ಇತರ ಗೃಹಬಳಕೆ ವಸ್ತುಗಳ ನಿರ್ಮಾಣ ಕಲಿತಿದ್ದ ಆತ ಎರಡು ವರ್ಷದಿಂದ ಹೆಲಿಕಾಪ್ಟರ್ ನಿರ್ಮಿಸುವ ಪ್ರಯೋಗದಲ್ಲಿ ತೊಡಗಿದ್ದ.
ಆಮೀರ್ ಖಾನ್ರ 3 ಇಡಿಯಟ್ಸ್ ಚಿತ್ರದಿಂದ ಪ್ರೇರಿತನಾಗಿದ್ದ ಇಸ್ಮಾಯಿಲ್, ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಅದರ ಡಿಸೈನ್ ಮತ್ತಿತರ ಅಂಶಗಳನ್ನು ಕಲಿತ. ಸ್ಟೀಲ್ ಪೈಪ್ಗಳನ್ನು ಬಳಸಿ ಸಿಂಗಲ್ ಸೀಟರ್ ಪ್ರೋಟೋಟೈಪನ್ನು ತಯಾರಿಸಿ, ಅದಕ್ಕೆ ಮಾರುತಿ 800 ಇಂಜಿನ್ ಅಳವಡಿಸಿ 5 ಅಡಿ ಎತ್ತರದಷ್ಟು ಹಾರಾಟ ಆಗುವಂತೆ ಪ್ರಯೋಗ ಕೂಡ ಮಾಡಿದ್ದ ಎನ್ನಲಾಗಿದೆ.
'ಮುನ್ನ ಹೆಲಿಕಾಪ್ಟರ್' ಎಂದು ತನ್ನ ಅಡ್ಡಹೆಸರನ್ನೇ ಅವನು ನಿರ್ಮಿಸಿದ ಹೆಲಿಕಾಪ್ಟರ್ಗೆ ಇಟ್ಟಿದ್ದ ಇಸ್ಮಾಯಿಲ್, ಮಂಗಳವಾರ ರಾತ್ರಿ ವರ್ಕ್ಶಾಪ್ನ ಬಳಿ ಅದರ ಅಂತಿಮ ಪರೀಕ್ಷೆ ಮಾಡುತ್ತಿದ್ದ. ಇಂಜಿನ್ ಆರಂಭವಾದಾಗ ಸ್ನೇಹಿತರು ನೋಡುತ್ತಿರುವಂತೆಯೇ, ಹೆಲಿಕಾಪ್ಟರ್ನ ಒಂದು ರೋಟಾರ್ ಬ್ಲೇಡ್ ಮುರಿದು ಅವನ ಗಂಟಲನ್ನು ಸೀಳಿತು. ನೆಲಕ್ಕುರುಳಿ, ವಿಪರೀತ ರಕ್ತ ಹರಿಯುತ್ತಿದ್ದ ಇಸ್ಮಾಯಿಲ್ಅನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಯಾವುದೇ ಚಿಕಿತ್ಸೆ ನೀಡುವ ಮುಂಚೆ ಆತ ಸಾವಪ್ಪಿದ ಎನ್ನಲಾಗಿದೆ. (ಏಜೆನ್ಸೀಸ್)