

ಭೋಪಾಲ್: ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಮತ್ತು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಅವರು ದನಿಗೂಡಿಸಿ, ಸ್ನೇಹದ ಬಗೆಗಿನ ಶೋಲೇ ಚಿತ್ರದ ಹಿಟ್ ಗೀತೆಯನ್ನು ಹಾಡಿದ ಪ್ರಸಂಗ ನಿನ್ನೆ ನಡೆದಿದೆ. ಭೋಪಾಲ್ನ ವಿಧಾನಸಭಾ ಕಟ್ಟಡದಲ್ಲಿ ನಡೆದ 'ಭುಟ್ಟಾ ಪಾರ್ಟಿ'ಯಲ್ಲಿ, "ಯೇ ದೋಸ್ತಿ ಹಂ ನಹೀ ಛೋಡೇಂಗೆ..." ಹಾಡನ್ನು ಪರಸ್ಪರ ಕೈಹಿಡಿದು ಹಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ವಿಡಿಯೋ ತುಣುಕನ್ನು ಸಿಎಂ ಚೌಹಾನ್ ಟ್ವಿಟರ್ನಲ್ಲಿ ಶೇರ್ ಮಾಡಿದ್ದು, ಈ ಬಾಲಿವುಡ್ ಗೀತೆಯ ಅಸಲಿ ಜೋಡಿ ಕಲಾವಿದರಾದ ಅಮಿತಾಭ್ ಬಚ್ಚನ್ ಮತ್ತು ಧರ್ಮೇಂದ್ರ ಅವರನ್ನು ತಮ್ಮ ಟ್ವೀಟ್ಗೆ ಟ್ಯಾಗ್ ಮಾಡಿದ್ದಾರೆ. ವಿಜಯವರ್ಗೀಯ ಅವರೂ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ತಾವು ಬಿಜೆಪಿ ಯುವ ಮೋರ್ಚಾದಲ್ಲಿದ್ದ ದಿನಗಳಲ್ಲಿ ಈ ಹಾಡನ್ನು ಜೊತೆಯಾಗಿ ಹಾಡುತ್ತಿದ್ದ ನೆನಪುಗಳು ಮರುಕಳಿಸಿದವು ಎಂದು ಬರೆದಿದ್ದಾರೆ.
ರಾಜ್ಯದ ವಿವಿಧ ಸಚಿವರು, ವಿರೋಧಪಕ್ಷದ ನಾಯಕ ಕಮಲ್ನಾಥ್, ಆಡಳಿತ ಪಕ್ಷದ ಮತ್ತು ವಿರೋಧ ಪಕ್ಷದ ಶಾಸಕರು, ಪತ್ರಕರ್ತರು ಈ ಭುಟ್ಟಾ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ. (ಏಜೆನ್ಸೀಸ್)