

ಆಂಧ್ರಪ್ರದೇಶ: ತಾನು ಆಂಧ್ರಪ್ರದೇಶದ ಮಾಜಿ ರಣಜಿ ಆಟಗಾರ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ವ್ಯಕ್ತಿಯನ್ನು ಇದೀಗ ಶ್ರೀಕಾಕುಳಂ ಜಿಲ್ಲೆಯ ಪೊಲೀಸರು ಬಂಧಿಸಿದ್ದು, ಆತನಿಂದ 23 ಕೆಜಿಯಷ್ಟು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ಬುಡುಮೂರು ನಾಗರಾಜು ಎಂದು ಗುರುತಿಸಲಾಗಿದ್ದು, ಈತ ಗಾಂಜಾ ಸಂಗ್ರಹಿಸಿ ಅದನ್ನು ಮುಂಬೈಗೆ ಸಾಗಿಸಿ, ಮಾರಾಟ ಮಾಡಲು ಯೋಜಿಸುತ್ತಿದ್ದಾಗ ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿದುಬಂದಿದೆ. ಕೂಡಲೇ ನಾಗರಾಜನನ್ನು ಬಂಧಿಸಲು ಬಲೆ ಬೀಸಿದ ಪೊಲೀಸರ ತಂಡ, ಸೀಪಣ್ಣಾಯ್ಡು ಪೇಟೆ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಉದ್ಯಾನವನದಲ್ಲಿ ಆತನನ್ನು ಸೆರೆ ಹಿಡಿದು, 23 ಕೆಜಿ ಗಾಂಜಾ ಒಳಗೊಂಡ ಮೂರು ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ನಾಗರಾಜು ಇದೇ ಮೊದಲ ಬಾರಿಗೆ ಅಪರಾಧ ಮಾಡಿಲ್ಲ. ಈತನ ವಿರುದ್ಧ ಈ ಹಿಂದೆಯೂ ವಂಚನೆ ಹಾಗೂ ಗಾಂಜಾ ಸಾಗಾಟದ ಹಲವು ಪ್ರಕರಣಗಳು ದಾಖಲಾಗಿವೆ ಎಂದು ವರದಿ ಹೇಳಿದೆ,(ಏಜೆನ್ಸೀಸ್).