'ಗುಂಟೂರು ಕಾರಂ' ಚಿತ್ರತಂಡದ ಮೇಲೆ ಪ್ರಿನ್ಸ್ ಮಹೇಶ್ ಬಾಬು ಫ್ಯಾನ್ಸ್​ 'ಗರಂ'!

Untitled design - 2023-07-31T164758.251
Published on

ಆಂಧ್ರಪ್ರದೇಶ: ಟಾಲಿವುಡ್​ನ ಪ್ರಿನ್ಸ್​ ಮಹೇಶ್​ ಬಾಬು ಅಭಿನಯದ ಬಹುನಿರೀಕ್ಷಿತ 'ಗುಂಟೂರು ಕಾರಂ' ಚಿತ್ರ ಸದ್ಯ ಒಂದಲ್ಲ ಒಂದು ರೀತಿ ಸುದ್ದಿಯಾಗುತ್ತಲೇ ಇದೆ. ಈ ಬಾರಿ ಮಹೇಶ್​ ಅವರ ಅಭಿಮಾನಿಗಳು ಚಿತ್ರತಂಡದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಚಿತ್ರದ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಪ್ರಾರಂಭದಿಂದಲೂ ಚಿತ್ರವು ಸುದ್ದಿಯಲ್ಲಿದ್ದು, ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಈ ಚಿತ್ರಕ್ಕೆ ಆರಂಭದಲ್ಲಿ ಪೂಜಾ ಹೆಗ್ಡೆ ನಾಯಕಿ ಎಂದು ಘೋಷಿಸಲಾಗಿತ್ತು. ಬಳಿಕ ಪೂಜಾ ಚಿತ್ರದಿಂದ ಹೊರನಡೆದು ಅಭಿಮಾನಿಗಳಿಗೆ ಶಾಕ್ ನೀಡಿದರು. ತದನಂತರ ಥಮನ್ ಕೂಡ ಸಿನಿಮಾ ತಂಡದಿಂದ ಹೊರ ಹೋಗಿದ್ದಾರೆ ಎಂದು ಸುದ್ದಿಯಾಯಿತು. ಇದಕ್ಕೆ ಉತ್ತರಿಸಿದ ಚಿತ್ರ ತಯಾರಕರು ಈ ವದಂತಿಗಳನ್ನು ತಳ್ಳಿಹಾಕಿದ್ದು, ಥಮನ್ ಅವರು ಈ ಸಿನಿಮಾದ ಬಹುಮುಖ್ಯ ಭಾಗ ಎಂದು ಹೇಳಿದರು.

ಇದೀಗ ನಿರ್ದೇಶಕ ತ್ರಿವಿಕ್ರಮ್ ಅವರೊಂದಿಗಿನ ಭಿನ್ನಾಭಿಪ್ರಾಯದಿಂದ ಚಿತ್ರದ ಕ್ಯಾಮರಾಮನ್ ಪಿ.ಎಸ್ ವಿನೋದ್ ಹೊರ ನಡೆದಿದ್ದಾರೆ ಎಂದು ಹೇಳಲಾಗಿದ್ದು, ಈ ಕಾರಣದಿಂದ ಚಿತ್ರೀಕರಣ ಸ್ಥಗಿತಗೊಂಡಿದೆ. ಸದ್ಯ ಇದರ ಬೆನ್ನಲ್ಲೇ ಮಹೇಶ್ ಬಾಬು ಅವರು ತಮ್ಮ ಕುಟುಂಬ ಸಮೇತ ರಜೆ ಮೇಲೆ ಪ್ರಯಾಣಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಹಾಗಾಗಿ ಚಿತ್ರೀಕರಣ ಯಾವಾಗ ಶುರುವಾಗಲಿದೆ ಎಂಬುದರ ಬಗ್ಗೆ ಸದ್ಯ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಎಲ್ಲಾ ವದಂತಿಗಳಿಂದ ಅಸಮಾಧಾನಗೊಂಡ ಮಹೇಶ್​ ಬಾಬು ಅಭಿಮಾನಿಗಳು, ಚಿತ್ರದ ಕುರಿತು ಇರುವ ಗೊಂದಲಗಳನ್ನು ನಿವಾರಿಸಲು ತಯಾರಕರು ಕೋರ್ ಟೀಮ್ ಅನ್ನು ಘೋಷಿಸಬೇಕೆಂದು ಆಗ್ರಹಿಸಿದ್ದಾರೆ. ಚಿತ್ರದ ಮೊದಲ ಹಾಡನ್ನು ಇದೇ ಆಗಸ್ಟ್ 9 ರಂದು ಚಿತ್ರ ತಯಾರಕರು ರಿಲೀಸ್​ ಮಾಡಲಿದ್ದಾರೆ. ಈ ಮುಖೇನ ಗೊಂದಲಗಳಿಗೆ ತೆರೆ ಬೀಳಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net