ಕೋವ್ಯಾಕ್ಸಿನ್​ ಹ್ಯೂಮನ್ ಟ್ರಯಲ್ ಶುರುವಾಯ್ತು: ದೆಹಲಿಯ ಏಮ್ಸ್​ನಲ್ಲಿ ಮೊದಲ ಪ್ರಯೋಗ

Covaxin
Published on

ನವದೆಹಲಿ: ದೆಹಲಿಯ ಆಲ್​ ಇಂಡಿಯಾ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್​ ಸೈನ್ಸಸ್​(ಏಮ್ಸ್​)ನಲ್ಲಿ ಕರೊನಾ ವೈರಸ್ ಸೋಂಕಿತ 30 ವರ್ಷದ ವ್ಯಕ್ತಿಯೊಬ್ಬರಿಗೆ ಕೋವ್ಯಾಕ್ಸಿನ್ ಔಷಧ ಚುಚ್ಚುಮದ್ದು ಮೂಲಕ ಕೊಡುವ ಮೂಲಕ ಅದರ ಹ್ಯೂಮನ್ ಟ್ರಯಲ್ ಶುರುವಾಗಿದೆ. ಈ ಪ್ರಯೋಗಕ್ಕಾಗಿ ಒಟ್ಟು 12 ಸ್ವಯಂಸೇವಕರನ್ನು ಕರೆಯಿಸಿಕೊಂಡಿದ್ದ ಆಸ್ಪತ್ರೆ ಅವರ ರಕ್ತ, ಗಂಟಲು ದ್ರವ ಸೇರಿ ಅಗತ್ಯ ಪೂರ್ವಪರೀಕ್ಷೆಗಳನ್ನು ನಡೆಸಿತ್ತು.

ಈ ವ್ಯಾಕ್ಸಿನ್​ ಅನ್ನು ಆರಂಭದ ಹಂತದಲ್ಲಿ 10 ಆಯ್ದ ವ್ಯಕ್ತಿಗಳ ಮೇಲೆ ಪ್ರಯೋಗಿಸಲಾಗುತ್ತದೆ. ನಂತರ ಫಲಿತಾಂಶ ನೋಡಿಕೊಂಡು ಪ್ರಯೋಗವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ದೆಹಲಿಯ ಏಮ್ಸ್​ನಲ್ಲಿ ಈ ಪ್ರಯೋಗದ ಅವಧಿಯಲ್ಲಿ 100 ಜನರಿಗೆ ಔಷಧ ಪ್ರಯೋಗ ಮಾಡಲಾಗುತ್ತದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಕೋವ್ಯಾಕ್ಸಿನ್ ಔಷಧವನ್ನು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪನಿಯು ಐಸಿಎಂಆರ್ ಮತ್ತು ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿ ಯ ಪಾಲುದಾರಿಕೆಯಲ್ಲಿ ಅಭಿವೃದ್ಧಿಪಡಿಸಿದೆ. ಇದರ ಹ್ಯೂಮನ್ ಟ್ರಯಲ್ ನಡೆಸುವುದಕ್ಕೆ ಇತ್ತೀಚೆಗಷ್ಟೇ ಡ್ರಗ್ಸ್​ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಅನುಮೋದನೆ ನೀಡಿತ್ತು.

ಮೊದಲ ಎರಡು ಹಂತದ ಹ್ಯೂಮನ್ ಟ್ರಯಲ್​ ನಡೆಸುವುದಕ್ಕಾಗಿ ಏಮ್ಸ್​ ದೆಹಲಿ ಸೇರಿ 12 ಸಂಸ್ಥೆಗಳನ್ನು ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್​ (ಐಸಿಎಂಆರ್) ಆಯ್ಕೆ ಮಾಡಿದೆ. ಮೊದಲ ಹಂತದಲ್ಲಿ 18 ಮತ್ತು 55 ವರ್ಷ ಪ್ರಾಯದ ನಡುವಿನ ವ್ಯಕ್ತಿಗಳ ಮೇಲೆ ವ್ಯಾಕ್ಸಿನ್ ಟ್ರಯಲ್ ನಡೆಯಲಿದೆ. ಗರ್ಭಿಣಿಯರಲ್ಲದ ಮಹಿಳೆಯರೂ ಈ ಪ್ರಯೋಗದಲ್ಲಿ ಪಾಲ್ಗೊಳ್ಳಲಿದ್ದಾರೆ. ಎರಡನೇ ಹಂತದಲ್ಲಿ 12ರಿಂದ 65 ರ ವಯೋಮಾನದವರು ಭಾಗವಹಿಸಲಿದ್ದಾರೆ ಎಂದು ಏಮ್ಸ್​ನ ಡೈರೆಕ್ಟರ್ ಡಾ. ರಣದೀಪ್​ ಗುಲೆರಿಯಾ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net