

ತರೀಕೆರೆ: ಅಡಕೆ ಬೆಳೆಗಾರರ ಹಿತದೃಷ್ಟಿಯಿಂದ ಸ್ಥಾಪನೆಯಾದ ಸಹಕಾರ ಸಂಘದಲ್ಲಿ ಆರಂಭದಿಂದಲೂ ಅಧಿಕ ಅಡಕೆ ಅವಕವಾಗುತ್ತಿದೆ. ಪಾರದರ್ಶಕ ವ್ಯವಸ್ಥೆಯಲ್ಲಿ ಚಟುವಟಿಕೆ ನಡೆಸುತ್ತಿರುವ ಸಂಘ ಲಾಭದಲ್ಲೇ ಸಾಗುತ್ತಿದೆ ಎಂದು ಮ್ಯಾಮ್ಕೋಸ್ ಉಪಾಧ್ಯಕ್ಷ ಎಚ್.ಎಸ್.ಮಹೇಶ್ ತಿಳಿಸಿದರು.
ತರೀಕೆರೆ: ಅಡಕೆ ಬೆಳೆಗಾರರ ಹಿತದೃಷ್ಟಿಯಿಂದ ಸ್ಥಾಪನೆಯಾದ ಸಹಕಾರ ಸಂಘದಲ್ಲಿ ಆರಂಭದಿಂದಲೂ ಅಧಿಕ ಅಡಕೆ ಅವಕವಾಗುತ್ತಿದೆ. ಪಾರದರ್ಶಕ ವ್ಯವಸ್ಥೆಯಲ್ಲಿ ಚಟುವಟಿಕೆ ನಡೆಸುತ್ತಿರುವ ಸಂಘ ಲಾಭದಲ್ಲೇ ಸಾಗುತ್ತಿದೆ ಎಂದು ಮ್ಯಾಮ್ಕೋಸ್ ಉಪಾಧ್ಯಕ್ಷ ಎಚ್.ಎಸ್.ಮಹೇಶ್ ತಿಳಿಸಿದರು.
ಪಟ್ಟಣದ ಮ್ಯಾಮ್ಕೋಸ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸಂಘದ ಷೇರುದಾರರ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿ, ಮೂರು ಜಿಲ್ಲೆಗಳಿಗೆ ವಿಸ್ತರಿಸಿಕೊಂಡಿರುವ ಮ್ಯಾಮ್ಕೋಸ್ 12 ಶಾಖಾ ಕಚೇರಿಗಳನ್ನು ಹೊಂದಿದೆ. 2022-23ರಲ್ಲಿ 4.40 ಕೋಟಿ ರೂ. ನಿವ್ವಳ ಲಾಭಗಳಿಸಿದೆ. ಸಾಲ ಮಿತಿಯನ್ನು ಷೇರುದಾರರ ಅಪೇಕ್ಷೆ ಮೇರೆಗೆ 1.25 ಲಕ್ಷ ರೂ.ನಿಂದ 2 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ ಎಂದರು.
ಸಂಘದಡಿ ಕಾರ್ಯನಿರ್ವಹಿಸುತ್ತಿರುವ ತರೀಕೆರೆ ಶಾಖೆ ರೈತರಿಂದ ಅಡಕೆ ಸಂಗ್ರಹಿಸಿ ಅದಕ್ಕೆ ಉತ್ತಮ ಧಾರಣೆ ಒದಗಿಸಿಕೊಡುವ ಉದ್ದೇಶ ಹೊಂದಿದೆ. ಬೆಳೆಗಾರರು ಸಂಸ್ಕರಿಸಿದ ಅಡಕೆಯನ್ನು ಒಂದು ವರ್ಷದವರೆಗೆ ಶುಲ್ಕ ನಿಗದಿಗೊಳಿಸದೆ ದಾಸ್ತಾನು ಮಾಡಲು ಸುಸಜ್ಜಿತ ಉಗ್ರಾಣ ವ್ಯವಸ್ಥೆ ಮಾಡಲಾಗಿದೆ. ಸದಸ್ಯರ ವ್ಯವಹಾರ ಹಾಗೂ ಬಾಗಾಯ್ತು ಆಧಾರದ ಮೇಲೆ ಕಟಾವು ಸಾಲ ನೀಡುತ್ತಿದೆ ಎಂದು ಮಾಹಿತಿ ನೀಡಿದರು.
ಷೇರುದಾರರ ಹಣಕಾಸಿನ ವ್ಯವಹಾರಕ್ಕೆ ಅನುಕೂಲ ಕಲ್ಪಿಸಲು, ತ್ವರಿತಗತಿಯಲ್ಲಿ ಹಣ ಪಡೆಯಲು ನೆಟ್ ಬ್ಯಾಂಕಿಂಗ್ ಮೂಲಕ ಹಣ ವರ್ಗಾಯಿಸಲು ವ್ಯವಸ್ಥೆ ಮಾಡಲಾಗಿದೆ. ಮರಣೋತ್ತರ ನಿಧಿ ಯೋಜನೆ ಮತ್ತು ಅಂತ್ಯಕ್ರಿಯೆ ಯೋಜನೆಯಡಿ ಆರ್ಥಿಕ ನೆರವು ನೀಡಲಾಗುತ್ತಿದೆ. ಗುಂಪು ವಿಮಾ ಅಭಿರಕ್ಷೆ ಯೋಜನೆಯಲ್ಲಿ ಸದಸ್ಯರ ವಯೋಮಿತಿ ಅನುಸಾರ ಅವರಿಗೂ ಮತ್ತು ಅವರು ಹೆಸರಿಸಿದ ಅವರ ಅವಲಂಬಿತ ಓರ್ವ ಕೂಲಿ ಕಾರ್ಮಿಕ ಹಾಗೂ ಕುಟುಂಬ ಸದಸ್ಯರ ಅನುಕೂಲಕ್ಕಾಗಿ ವಂತಿಕೆ ಸಂಗ್ರಹಿಸಿ ವಿಮೆ ಮಾಡಲಾಗುವುದು. ಜಮೀನಿನಲ್ಲಿ ಕೆಲಸದ ವೇಳೆ ಅನಾಹುತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರಿಗೆ ಚಿಕಿತ್ಸಾ ವೆಚ್ಚ ನೀಡಲಾಗುತ್ತದೆ. ಮೃತಪಟ್ಟರೆ ಯೋಜನೆಯಡಿ ಪರಿಹಾರ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಷೇರುದಾರ ಎ.ಕೆ.ಪ್ರಕಾಶ್ ಎಂಬುವವರಿಗೆ ಗುಂಪು ವಿಮೆ ಯೋಜನೆಯಡಿ ,127,802 ರೂ. ಪರಿಹಾರ ಧನದ ಚೆಕ್ ವಿತರಿಸಲಾಯಿತು.
ಮ್ಯಾಮ್ಕೋಸ್ ನಿರ್ದೇಶಕರಾದ ಆರ್.ದೇವಾನಂದ್, ಬಿ.ಸಿ.ನರೇಂದ್ರ, ಕೀರ್ತಿ, ಕೆ.ಎ.ಕೃಷ್ಣಮೂರ್ತಿ, ತಿಮ್ಮಪ್ಪ, ರತ್ನಾಕರ, ಬಡಿಯಣ್ಣ, ದಿನೇಶ್, ಸುಬ್ರಹ್ಮಣ್ಯ, ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಟಿ.ಎಲ್.ರಮೇಶ್, ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬರುವೆ, ಶಾಖಾ ವ್ಯವಸ್ಥಾಪಕಿ ಎಚ್.ಪಿ.ಪುಷ್ಪಲತಾ ಇತರರಿದ್ದರು.