

Kolkata: ಡಾರ್ಜಿಲಿಂಗ್, ಡೂರ್ಸ್ ಮತ್ತು ಟೆರೈಗಳಲ್ಲಿನ ಗೂರ್ಖಾ ಸಮಸ್ಯೆಗಳ ಕುರಿತು ಸರ್ಕಾರಿ ಸಂವಾದಕನನ್ನು ನೇಮಿಸಿರುವ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee), ಕ್ರಮವೂ ಏಕಪಕ್ಷೀಯವಾಗಿದ್ದು, ಈ ವಿಷಯವಾಗಿ ರಾಜ್ಯ ಸರ್ಕಾರದೊಂದಿಗೆ ಯಾವುದೇ ಮಾತುಕತೆ ನಡೆಸದೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಗೂರ್ಖಾ ಸಮುದಾಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮಾಜಿ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ಪಂಕಜ್ ಕುಮಾರ್ ಸಿಂಗ್ ಅವರನ್ನು ಕೇಂದ್ರದ ಪ್ರತಿನಿಧಿಯಾಗಿ ನೇಮಿಸುವ ನಿರ್ಧಾರವು ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಿವಾದವನ್ನು ಹುಟ್ಟುಹಾಕಿದ್ದು, ಇಂತಹ ನಿರ್ಧಾರಗಳು ರಾಜ್ಯದ ಅಧಿಕಾರವನ್ನು ಕಿತ್ತುಕೊಳ್ಳುತ್ತವೆ ಮತ್ತು ಬೆಟ್ಟಗಳಲ್ಲಿನ ಸೂಕ್ಷ್ಮ ಸಾಮಾಜಿಕ-ರಾಜಕೀಯ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಈ ವಿವಾದ ಹುಟ್ಟುಕೊಂಡಿದ್ದು, ಈ ಪತ್ರವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಾರ್ವಜನಿಕವಾಗಿ ಹಂಚಿಕೊಳ್ಳುವ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹೊಸ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದೆ.
ಇದನ್ನೂ ಓದಿ:ಜಿಎಸ್ಟಿಯಿಂದ ಜನರ ಹಣ ಕೊಳ್ಳೆ ಹೊಡೆದ ಬಿಜೆಪಿ
ಈ ವಿಷಯಗಳು ಪಶ್ಚಿಮ ಬಂಗಾಳ ಸರ್ಕಾರದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾದ ಗೂರ್ಖಾಲ್ಯಾಂಡ್ ಪ್ರಾದೇಶಿಕ ಆಡಳಿತ (ಜಿಟಿಎ) ಅಡಿಯಲ್ಲಿ ನೇರವಾಗಿ ಬರುತ್ತವೆ ಎಂದು ಸಿಎಂ ಬ್ಯಾನರ್ಜಿ ಉಲ್ಲೇಖಿಸಿದ್ದು, ಕೇಂದ್ರ ಸರ್ಕಾರ, ಪಶ್ಚಿಮ ಬಂಗಾಳ ಸರ್ಕಾರ ಮತ್ತು ಗೂರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ನಡುವಿನ ತ್ರಿಪಕ್ಷೀಯ ಒಪ್ಪಂದದ ನಂತರ ಜಿಟಿಎ ರಚನೆಯಾಗಿದೆ ಎಂದು ಅವರು ನೆನಪಿಸಿದರು.
ಗೂರ್ಖಾ ಸಮುದಾಯ ಅಥವಾ ಜಿಟಿಎ ಪ್ರದೇಶಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿ ತೆಗೆದುಕೊಳ್ಳಬೇಕು ಎಂದು ತಿಳಿಸಿರುವ ದೀದಿ, ಏಕಪಕ್ಷೀಯ ನಿರ್ಧಾರಗಳು ಸೂಕ್ಷ್ಮ ಪ್ರದೇಶದಲ್ಲಿ ಸಾಮರಸ್ಯವನ್ನು ಹಾಳುಮಾಡಬಹುದು ಎಂದು ಕಳವಳ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಬ್ಯಾನರ್ಜಿ ತಮ್ಮ ಪತ್ರವನ್ನು ವೈಯಕ್ತಿಕ ಟಿಪ್ಪಣಿಯೊಂದಿಗೆ ಮುಗಿಸಿದ್ದು, ಪ್ರಧಾನಮಂತ್ರಿಯವರಿಗೆ ತಮ್ಮದೇ ಕೈಬರಹದಲ್ಲಿ "ದೀಪಾವಳಿಯ ಶುಭಾಶಯಗಳು" ಎಂದು ಹಾರೈಸಿದ್ದು, ಸಂವಾದಕನ ನೇಮಕಾತಿಯನ್ನು ಮರುಪರಿಶೀಲಿಸಿ ರದ್ದುಗೊಳಿಸುವಂತೆ ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ.(ಏಜೆನ್ಸೀಸ್)