

Mallikarjun Kharge: ಭಾರತೀಯ ಚುನಾವಣಾ ಆಯೋಗವು ಆಡಳಿತ ಪಕ್ಷದ ಪ್ರತಿನಿಧಿಯಂತೆ ವರ್ತಿಸುತ್ತಿದೆ ಮತ್ತು ಮುಕ್ತ ಹಾಗೂ ನ್ಯಾಯಯುತ ಚುನಾವಣೆಗಳನ್ನು ನಡೆಸುವ ಸಾಂವಿಧಾನಿಕ ಕರ್ತವ್ಯದಲ್ಲಿ ನಿಭಾಯಿಸುವಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, ಒಂದು ಕಾಲದಲ್ಲಿ ಭಾರತದ ಚುನಾವಣಾ ಆಯೋಗವನ್ನು ಪ್ರಪಂಚದಾದ್ಯಂತ ಪ್ರಶಂಸಿಸಲಾಗುತ್ತಿತ್ತು. ನ್ಯಾಯಯುತ ಚುನಾವಣೆಗಳನ್ನು ನಡೆಸಲು ಅನೇಕ ದೇಶಗಳು ನಮ್ಮ ಚುನಾವಣಾ ಆಯೋಗದಿಂದ ತರಬೇತಿ ಪಡೆದವು. ಯಾವುದೇ ರಾಜಕೀಯ ಪಕ್ಷವು ಪ್ರಶ್ನೆಗಳನ್ನು ಎತ್ತಿದಾಗ, ಆಯೋಗವು ಸಾಂವಿಧಾನಿಕ ಮಿತಿಯೊಳಗೆ ಪ್ರತಿಕ್ರಿಯಿಸುತಿತ್ತು ಎಂದು ಹೇಳಿದ್ದಾರೆ.
ಆದರೆ, ಇಂದು ಯಾರಾದರೂ ಚುನಾವಣಾ ಆಯೋಗವನ್ನು ಪ್ರಶ್ನಿಸಿದರೇ ಅದಕ್ಕೆ ಪ್ರತಿಕ್ರಿಯಿಸುವ ಬದಲು, ಅದು ಆಡಳಿತ ಪಕ್ಷದ ಪ್ರತಿನಿಧಿಯಂತೆ ವರ್ತಿಸುತ್ತದೆ. ವಿರೋಧ ಪಕ್ಷಗಳ ಬೇಡಿಕೆಗಳನ್ನು ಪರಿಗಣಿಸದೆ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತದೆ ಮತ್ತು ಆಧಾರರಹಿತ ಹೇಳಿಕೆಗಳನ್ನು ನೀಡುತ್ತದೆ ಎಂದು ಖರ್ಗೆ ಆಯೋಗದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಚುನಾವಣಾ ಅಕ್ರಮಗಳ ಕುರಿತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ಹೇಳಿಕೆಗಳನ್ನು ಉಲ್ಲೇಖಿಸಿರುವ ಖರ್ಗೆ, ಇಂದು, ರಾಹುಲ್ ಗಾಂಧಿ ಅವರು ಸಂಪೂರ್ಣ ತನಿಖೆಯ ನಂತರ, ಕರ್ನಾಟಕದ ಮಹದೇವಪುರ ವಿಧಾನಸಭಾ ವಿಭಾಗದ ಉದಾಹರಣೆಗಳನ್ನು ಉಲ್ಲೇಖಿಸಿದ್ದಾರೆ. ಚುನಾವಣಾ ಆಯೋಗವು ಒಂದೇ ಚುನಾವಣೆಯಲ್ಲಿ ಸಂಪೂರ್ಣ ರಿಗ್ಗಿಂಗ್‌ಗೆ ಅವಕಾಶ ಮಾಡಿಕೊಟ್ಟಿತು. ತನ್ನ ಸಾಂವಿಧಾನಿಕ ಕರ್ತವ್ಯಗಳನ್ನು ಹೇಗೆ ಕಳೆದುಕೊಂಡಿದೆ ಮತ್ತು, 1,00,250 ಮತಗಳನ್ನು ಕಳವು ಮಾಡಿದೆ ಎಂದು ಹೇಳಿದರು.
ಇಂತಹ ಅಕ್ರಮಗಳು ಪ್ರತ್ಯೇಕ ಘಟನೆಗಳಲ್ಲ ಎಂದು ಖರ್ಗೆ ಹೇಳಿದ್ದಾರೆ. ಈ ಮತ ಕಳ್ಳತನ ದೇಶದ ಅನೇಕ ಕ್ಷೇತ್ರಗಳಲ್ಲಿ ನಡೆಯುತ್ತಿದೆ. ಅಲ್ಲದೆ, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ, ದೇಶವನ್ನು ಉಳಿಸುವ ಸಮಯ ಬಂದಿದೆ ಎಂದು ಕಾಂಗ್ರೆಸ್ ಮುಖ್ಯಸ್ಥರು ಬರೆದುಕೊಂಡಿದ್ದಾರೆ.(ಏಜೆನ್ಸೀಸ್)