ಕಂಗನಾ ಜೊತೆ ಕೆಲಸ ಮಾಡಿದ್ದ ಖ್ಯಾತ ಗಾಯಕಿ ನಿಗೂಢ ಸಾವು; ನೇಣು ಬಿಗಿದ ಸ್ಥಿತಿಯಲ್ಲಿ ದೇಹ ಪತ್ತೆ!

singer
Published on

ಮುಂಬೈ: ಖ್ಯಾತ ಗಾಯಕಿ ಮಲ್ಲಿಕಾ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಶವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವರದಿಗಳ ಪ್ರಕಾರ, ಸುಲ್ತಾನ್‌ಪುರದ ಅವರ ಮನೆಯಲ್ಲಿ ಮೃತದೇಹ ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮಂಗಳವಾರ ಬೆಳಗ್ಗೆ ಮಲ್ಲಿಕಾ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸರು ಸ್ಥಳಕ್ಕಾಗಮಿಸಿದಾಗ ಆಕೆಯ ಶವ ತನ್ನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗಾಯಕಿಯ ಅನುಮಾನಾಸ್ಪದ ಸಾವಿನಿಂದ ಎಲ್ಲರೂ ಶಾಕ್ ಆಗಿದ್ದಾರೆ. ಅವರ ನಿಧನಕ್ಕೆ ಅಭಿಮಾನಿಗಳು ಕೂಡ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಮಲ್ಲಿಕಾ ತಾಯಿ, "ಮಗಳು ಕೂಡ ಯೂಟ್ಯೂಬರ್ ಆಗಿದ್ದು, ಮುಂಬೈನಲ್ಲಿ ವಾಸಿಸುತ್ತಿದ್ದರು. ಕಳೆದ ನಾಲ್ಕೈದು ವರ್ಷಗಳ ಹಿಂದೆ ಪ್ರದೀಪ್ ಶಿಂಧೆ ಜನಾರ್ದನ್ ಅವರನ್ನು ಮದುವೆಯಾಗಿ ತಮ್ಮ ಮನೆಯಲ್ಲಿ ನೆಲೆಸಿದ್ದರು'' ಎಂದು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಇದು ದಾಂಪತ್ಯದಲ್ಲಿ ಕಲಹ ಎಂದು ತೋರುತ್ತದೆ. ಪೊಲೀಸರು ಫೋರೆನ್ಸಿಕ್ ತನಿಖೆಯ ನಂತರ ಕೊಠಡಿಯನ್ನು ಸೀಲ್ ಮಾಡಿ, ತಮ್ಮ ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಕುಟುಂಬ ಸದಸ್ಯರೊಂದಿಗೆ ವಾಗ್ವಾದ
ಮೂಲಗಳ ಪ್ರಕಾರ, ನಿನ್ನೆ ರಾತ್ರಿ ಮಲ್ಲಿಕಾ ತನ್ನ ಕುಟುಂಬದೊಂದಿಗೆ ಜಗಳವಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಷಯ ಎಷ್ಟರಮಟ್ಟಿಗೆ ವಿಕೋಪಕ್ಕೆ ಹೋಗಿದೆಯೆಂದರೆ ಪೋಲೀಸರೇ ಬಂದು ಬಗೆಹರಿಸಬೇಕಾಯಿತು. ಇದಾದ ನಂತರ ಏನಾಯ್ತು?, ಮಲ್ಲಿಕಾ ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ? ಇಂತಹ ಎಲ್ಲಾ ಪ್ರಶ್ನೆಗಳನ್ನು ಪೊಲೀಸರು ಈಗ ಪರಿಶೀಲಿಸುತ್ತಿದ್ದಾರೆ. ಆಕೆ ಕುಡಿದಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದರೂ ವರದಿ ಬಂದ ನಂತರವಷ್ಟೇ ಸರಿಯಾದ ಮಾಹಿತಿ ಸಿಗಲಿದೆ.

ಕಂಗನಾ ರಣಾವತ್ ಜೊತೆ ಕೆಲಸ
ಗಾಯಕಿ ಮಲ್ಲಿಕಾ ರಜಪೂತ್ ಅವರು ಬಾಲಿವುಡ್ ನಟಿ ಕಂಗನಾ ರನೌತ್ ಅವರೊಂದಿಗೆ ಕೆಲಸ ಮಾಡಿದ್ದಾರೆ. ಇದಲ್ಲದೇ ತಮ್ಮ ಕಂಠಸಿರಿಯಿಂದ ಜನಮನ ಗೆದ್ದಿದ್ದಾರೆ. ಮಲ್ಲಿಕಾ ತಮ್ಮ ಸಂಗೀತ ಆಲ್ಬಂ ಯಾರಾ ತುಜೆ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಅಷ್ಟೇ ಅಲ್ಲ ಹಲವು ವೆಬ್ ಸಿರೀಸ್, ಧಾರಾವಾಹಿ, ಆಲ್ಬಂಗಳಲ್ಲೂ ಮಲ್ಲಿಕಾ ತಮ್ಮ ಮ್ಯಾಜಿಕ್ ತೋರಿಸಿದ್ದಾರೆ.

ಈ ಹಿಂದೆಯೂ ಸುದ್ದಿಯಲ್ಲಿದ್ದ ಮಲ್ಲಿಕಾ
ಇಂದೋರ್‌ನ ಆಧ್ಯಾತ್ಮಿಕ ಗುರು ಭಯ್ಯೂ ಜಿ ಮಹಾರಾಜ್ ವಿರುದ್ಧ ಮಲ್ಲಿಕಾ ಆರೋಪ ಮಾಡಿದಾಗ, ಅವರು ಜನರ ಗಮನ ಸೆಳೆದಿದ್ದರು ಮತ್ತು ಸಾಕಷ್ಟು ಸುದ್ದಿಯಲ್ಲಿದ್ದರು. ಇಷ್ಟು ಮಾತ್ರವಲ್ಲದೆ ಈ ಘಟನೆಯ ನಂತರ ಭಯ್ಯೂ ಜಿ ಮಹಾರಾಜ್ ಕೂಡ ಆತ್ಮಹತ್ಯೆಗೆ ಶರಣಾಗಿರುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net