

ಚಾಮರಾಜನಗರ: ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಸ್ವಾಮಿ ಸನ್ನಿಧಿಯಲ್ಲಿ ಕಾಣೆಯಾಗಿದ್ದ ಪಾರ್ವತಿ ಉತ್ಸವಮೂರ್ತಿಯ ಚಿನ್ಮದ ಕರಡಿಗೆ ದೇವಸ್ಥಾನ ಮುಂಭಾಗದ ಕಸದಲ್ಲಿ ಪತ್ತೆಯಾಗಿದೆ.
ದೇವಾಲಯದ ಉತ್ಸವ ಮೂರ್ತಿ ಶ್ರೀ ಪಾರ್ವತಿ ಅಮ್ಮನಿಗೆ ಹಾಕಿದ್ದ ಸುಮಾರು 30 ಗ್ರಾಂ ತೂಕದ ಚಿನ್ನದ ಕರಡಿಗೆ ಕಳೆದು ಒಂದು ವಾರ ಆಗಿತ್ತು. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದಂತೆ ಚಿನ್ನದ ಕರಡಿಗೆ ಪತ್ತೆಯಾಗಿದೆ. ಇಂದು ಮಧ್ಯಾಹ್ನ 3.45ರ ಸುಮಾರಿಗೆ ರಾಜಗೋಪುರದ ಮುಂಭಾಗ ಕಸ ಹಾಕುವ ಜಾಗದಲ್ಲಿ ದೇವಾಲಯದ ಹೊರಗುತ್ತಿಗೆ ನೌಕರ ಸುನಿಲ್ ಕುಮಾರ್ ಕಣ್ಣಿಗೆ ಕರಡಿ ಕಂಡಿದೆ. ಬಹುತೇಕ ಬೆಂಕಿಯಲ್ಲಿ ಚಿನ್ನದ ಕರಡಿಗೆ ಸುಟ್ಟುಹೋಗಿದೆ. ಇದನ್ನೂ ಓದಿರಿ ಸಿಎಂ ಮನೆ ಮುಂದೆ ಹೈಡ್ರಾಮ! ಸೀರೆ ಬಿಚ್ಚಿಹೋಗಿದೆ ಬಿಟ್ಬಿಡಿ… ಪೊಲೀಸರು ಕಕ್ಕಾಬಿಕ್ಕಿ
ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಇನ್ಸ್‌ಪೆಕ್ಟರ್ ರಮೇಶ್ ಜಿ.ಎನ್ ಹಾಗೂ ಉಪಕಾರ್ಯದರ್ಶಿ ಬಸವರಾಜು, ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ಪರಿಶೀಲಿಸಿದರು. ದೇವರಿಗೆ ಧರಿಸಿದ್ದ ಚಿನ್ನದ ಕರಡಿಗೆಯು ತ್ಯಾಜ್ಯ ವಸ್ತುವಿನ ಮಧ್ಯೆ ಹೇಗೆ ಸಿಕ್ಕಿತು? ಎಂಬ ಪ್ರಶ್ನೆ ಎದ್ದಿದೆ. ಕರಡಿಗೆಯನ್ನ ವಶಕ್ಕೆ ಪಡೆದ ಪೊಲೀಸರು ಮಹಜರು ಮಾಡುತ್ತಿದ್ದು, ನಂತರ ದೇವಾಲಯಕ್ಕೆ ಹಸ್ತಾಂತರಿಸಲಿದ್ದಾರೆ.
ದೇವಾಲಯದ ಹೊರಗುತ್ತಿಗೆ ಪೌರಕಾರ್ಮಿಕ ನೌಕರ ಸುನಿಲ್ ಕುಮಾರ್‌ಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಚಿನ್ನದ ಕರಡಿಗೆ ಹುಡುಕಾಟದಲ್ಲಿ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಜಯವಿಭವ ಸ್ವಾಮಿ ತಿಳಿಸಿದ್ದಾರೆ. ಪ್ರಕರಣ ಸುಖಾಂತ್ಯ ಕಂಡಿದೆ. ಆದರೆ, ನಿರ್ಲಕ್ಷ್ಯತನ ಹಾಗೂ ಬೇಜವಾಬ್ದಾರಿ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ವಿವರಿಸಿದ್ದಾರೆ.