

ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ನಿವಾಸ ಕೃಷ್ಣಾ ಬಳಿ ಕಾಂಗ್ರೆಸ್ ಕಾರ್ಯಕರ್ತೆಯರ ಹೈಡ್ರಾಮಕ್ಕೆ ಪೊಲೀಸರೇ ಸುಸ್ತಾದ ಘಟನೆ ಇಂದು(ಗುರವಾರ) ಮಧ್ಯಾಹ್ನ 1.30ರಲ್ಲಿ ಸಂಭವಿಸಿದೆ.
ರಮೇಶ್ ಜಾರಕಿಹೊಳಿ ಪ್ರಕರಣ ರಾಜ್ಯ ರಾಜಕೀಯದಲ್ಲಿ ಎಬ್ಬಿಸಿದ್ದ ಕೋಲಾಹಲ ಇನ್ನೂ ತಣ್ಣಗಾಗಿಲ್ಲ. ಈ ನಡುವೆ 'ಏಕಪತ್ನಿವ್ರತಸ್ಥ ಸಾಬೀತಿಗೆ ರಾಜ್ಯದ ಎಲ್ಲ ಪಕ್ಷದ ಶಾಸಕರಿಗೂ ಸವಾಲು ಹಾಕುವ ಮೂಲಕ ಸಚಿವ ಡಾ.ಕೆ.ಸುಧಾಕರ್ ವಿವಾದ ಸೃಷ್ಟಿಸಿದ್ದಾರೆ. ಸುಧಾಕರ್ರ ಹೇಳಿಕೆ ಖಂಡಿಸಿ ಕಾಂಗ್ರೆಸ್ ಶಾಸಕಿಯರು ಇಂದು ಬೆಳಗ್ಗೆ ಬೀದಿಗಿಳಿದು ಹೋರಾಟ ನಡೆಸಿದ್ದರು. ಇದಾದ ಬೆನ್ನಲ್ಲೇ ಪಕ್ಷದ ಕಾರ್ಯರ್ತೆಯರು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಇದನ್ನೂ ಓದಿರಿ ‘ಸಿಡಿ ಲೇಡಿ’ಯ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಶಾಸಕಿಯರು!
ಕೆಲಕಾಲ ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿರುವುದನ್ನ ಅರಿತ ಪೊಲೀಸರು, ಪುಷ್ಪಾ ಅಮರನಾಥ್ ಸೇರಿದಂತೆ ಎಲ್ಲ ಕಾರ್ಯಕರ್ತರನ್ನು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕರೆದಯೊಯ್ದರು. ಅನುಮತಿ ಪಡೆಯದೆ ಪ್ರತಿಭಟನೆಗೆ ಮುಂದಾಗಿದ್ದಕ್ಕೆ ಪೊಲೀಸರು ಆಕ್ಷೇಪ ಮಾಡಿದರು. ಏಕಾಏಕಿ ಕೈ ಮಹಿಳಾ ಘಟಕದ ಸದಸ್ಯರು ಪ್ರತಿಭಟನೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಸಿಎಂ ಗೃಹ ಕಚೇರಿ ಕೃಷ್ಣ ಮತ್ತು ಕಾವೇರಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.