

ಮಾಲೆ: ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ಭಾರತದ ಪರ ಒಲವು ಹೊಂದಿರುವ ಮಾಲ್ದೀವಿಯನ್ ಡೆಮಾಕ್ರಮಿಕ್ ಪಾರ್ಟಿ ಅಭೂತಪೂರ್ವ ಗೆಲವು ಸಾಧಿಸಿದೆ. ಅಧ್ಯಕ್ಷ ಮೊಹಮ್ಮದ್ ಮುಯಿಜಿ ಅವರ ಪೀಪಲ್ ನ್ಯಾಷನಲ್ ಪಕ್ಷಕ್ಕೆ ಹಿನ್ನಡೆಯಾಗಿದೆ.
ಎಂಡಿಪಿ ಪಕ್ಷದ ಅಭ್ಯರ್ಥಿ ಆಡಮ್ ಅಜೀಮ್ ಅವರು ಮಾಲೆಯ ಹೊಸ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಅವರ ಪ್ರತಿಸ್ಪರ್ಧಿ ಪಿಎನ್ಸಿ ಪಕ್ಷದ ಐಶಾತ್ ಅಜಿಮಾ ಶಕೂರ್ಗೆ ಸೋಲು ಉಂಟಾಗಿದೆ.
ಅಧ್ಯಕ್ಷ ಮೊಹಮ್ಮದ್ ಮುಯಿಜು ನೇತೃತ್ವದ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಐಷಾತ್ ಅಜೀಮಾ ಶಕೂರ್ ಅವರು 3301 ಮತಗಳ ಪಡೆದು ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ. ಮೂರನೇ ಸ್ಥಾನದಲ್ಲಿ ಡೆಮಾಕ್ರಾಟ್ಸ್ ಪಕ್ಷದ ಮೊಹಮ್ಮದ್ ಸೈಫ್ ಫಥಿಹ್ ಅವರಿದ್ದು, 1634 ಮತಗಳನ್ನು ಪಡೆದುಕೊಂಡಿದ್ದಾರೆ.
ಮಾಲೆ ಮೇಯರ್ ಉಪಚುನಾವಣೆಯಲ್ಲಿ ಕಡಿಮೆ ಮತದಾನವಾಗಿದೆ. ಚುನಾವಣಾ ಆಯೋಗದ ಪ್ರಕಾರ 54,680 ಅರ್ಹ ಮತದಾರರಲ್ಲಿ ಕೇವಲ 17,500 ಮತದಾರರು ಚುನಾವಣೆಯಲ್ಲಿ ಭಾಗವಹಿಸಿದ್ದಾರೆ. ಮೇಯರ್ ಚುನಾವಣೆಯ ಗೆಲುವು ಸಂಸತ್ತಿನಲ್ಲಿ ಬಹುಮತವನ್ನು ಹೊಂದಿರುವ ಎಂಡಿಪಿಯ ರಾಜಕೀಯ ಅದೃಷ್ಟವನ್ನು ಪುನರುಜ್ಜೀವನಗೊಳಿಸುವ ನಿರೀಕ್ಷೆಯಿದೆ.
ಸುದ್ದಿಗಾರೊಂದಿಗೆ ಮಾತನಾಡಿದ ಮೇಯರ್ ಆಡಮ್ ಅಜೀಮ್, ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿ ಮತ ಹಾಕಿದವರಿಗೆ ಕೃತಜ್ಞತೆ ಸಲ್ಲಿಸಿದರು. ಅವರು ಎಂಡಿಪಿಯ ನಾಯಕತ್ವ ಮತ್ತು ಪ್ರಚಾರ ತಂಡಗಳಿಗೆ ಧನ್ಯವಾದ ಹೇಳಿದ್ದಾರೆ.
ಐದು ದಿನಗಳ ಚೀನಾ ಪ್ರವಾಸ ಮುಗಿಸಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝ್ಝು, ತಮ್ಮ ರಾಷ್ಟ್ರವನ್ನು ಬೆದರಿಸುವ ಹಕ್ಕು ಯಾವ ದೇಶಕ್ಕೂ ಇಲ್ಲ ಎಂದು ಪರೋಕ್ಷವಾಗಿ ಭಾರತದ ವಿರುದ್ಧ ವಾಗ್ದಾಳಿ ನಡೆಸಿದ್ದರು.