ರಂಗಭೂಮಿಗೆ ಮೇಕಪ್ ಸೋಮಣ್ಣನ ಕೊಡುಗೆ ಅನನ್ಯ

artist sanmana
ಸಾಗರದಲ್ಲಿ ಕಲಾವಿದರ ಬಳಗದಿಂದ ರಂಗಭೂಮಿ ಪ್ರಸಾಧನ ಕಲಾವಿದ ಮೇಕಪ್ ಸೋಮಣ್ಣ ಅವರನ್ನು ಸನ್ಮಾನಿಸಲಾಯಿತು. ಮಂಜುನಾಥ್, ಅ.ರಾ.ಶ್ರೀನಿವಾಸ್, ಎಂ.ಪಿ.ಲಕ್ಷ್ಮೀನಾರಾಯಣ, ಚೂಡಾಮಣಿ ರಾಮಚಂದ್ರ ಇತರರಿದ್ದರು.
Published on

ಸಾಗರ: ಮೇಕಪ್ ಸೋಮಣ್ಣ ಎಲ್ಲ ವಯೋಮಾನದವರಿಗೂ ಬಣ್ಣ ಹಚ್ಚುವ ಮೂಲಕ ರಂಗಭೂಮಿಯಲ್ಲಿ ನಿರಂತರ ಸೇವೆ ಸಲ್ಲಿಸುತ್ತ ಬಂದವರು. ಸಾಗರದ ಸಾಂಸ್ಕೃತಿಕ ಚಟುವಟಿಕೆ ನಿರಂತರವಾಗಿ ಮುನ್ನಡೆಯಲು ಹಲವರ ಕೊಡುಗೆ ಇದ್ದು, ಈ ಪೈಕಿ ಸೋಮಣ್ಣ ಅವರ ಹೆಸರು ಮುಂಚೂಣಿಯಲ್ಲಿದೆ ಎಂದು ಹಿರಿಯ ರಂಗ ಕಲಾವಿದ ಜೇಡಿಕುಣಿ ಮಂಜುನಾಥ್ ಹೇಳಿದರು.

ಸಾಗರದಲ್ಲಿ ಶನಿವಾರ ಕಲಾವಿದರ ಬಳಗದಿಂದ ರಂಗಭೂಮಿ ಹಿರಿಯ ಪ್ರಸಾಧನ ಕಲಾವಿದ ಮೇಕಪ್ ಸೋಮಣ್ಣ ಅವರ ಮನೆಯಂಗಳದಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾನಪದ ನೃತ್ಯ ರೂಪಕ, ಭಕ್ತಿ ಪ್ರಧಾನ ಗೀತೆಗಳಿಗೆ ರಾಷ್ಟ್ರ ಮನ್ನಣೆ ದೊರಕುವಂತೆ ಮಾಡಿದ್ದು ಸೋಮಣ್ಣ. ಒಂದು ಕಾಲದಲ್ಲಿ ಜಾನಪದದ ಅನುಸರಣೆಯ ನೃತ್ಯಗಳು ಮೇಳೈಸುತ್ತಿದ್ದವು. ಆಗ ಮೂಲ ಜಾನಪದ ಕಲೆಗಳನ್ನು ಯುವಜನರಿಗೆ ಹೇಳಿಕೊಟ್ಟ ಕೀರ್ತಿ ಸೋಮಣ್ಣ ಅವರಿಗೆ ಸಲ್ಲುತ್ತದೆ. ಅದರಲ್ಲಿಯೂ ಯಲ್ಲಮ್ಮನ ನೃತ್ಯವನ್ನು ಕಲಿಸಿ, ತಾವೇ ಆ ನೃತ್ಯವನ್ನು ಮಾಡಿ ಅದನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ದ ಹೆಗ್ಗಳಿಕೆ ಇವರದು ಎಂದರು.
ರಂಗಕರ್ಮಿ ಎಂ.ಪಿ.ಲಕ್ಷ್ಮೀನಾರಾಯಣ ಮಾತನಾಡಿ, ಸಾಗರ ಸುತ್ತಮುತ್ತ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆದರೂ ಸೋಮಣ್ಣ ಮೇಕಪ್ ಕಾಯಕ ಮಾಡುತ್ತಿದ್ದಾರೆ. ಅವರ ಸರಳ ನಡೆ, ನುಡಿ ಎಲ್ಲರಿಗೂ ಮೆಚ್ಚುಗೆಯಾಗುತ್ತಿತ್ತು. ಉದಯ ಕಲಾವಿದರು ಅಭಿನಯಿಸಿದ ಶ್ರೀರಂಗರ ಅನೇಕ ನಾಟಕಗಳಿಗೆ ಮೇಕಪ್ ಮಾಡಿದ್ದನ್ನು ನೆನಪಿಸಿಕೊಂಡರು.
ಲೇಖಕ ಅ.ರಾ.ಶ್ರೀನಿವಾಸ್ ಮಾತನಾಡಿ, ಐವತ್ತು ವರ್ಷಗಳಿಗೂ ಹೆಚ್ಚು ಕಾಲ ನಟ, ಪ್ರಸಾಧನ ಕಲಾವಿದರಾಗಿ ಕೆಲಸ ಮಾಡಿದ ಸೋಮಣ್ಣ ಅವರನ್ನು ಸರ್ಕಾರ ಗುರುತಿಸುವ ಕೆಲಸ ಮಾಡಬೇಕಾಗಿತ್ತು ಎಂದರು.
ಚಿಂತಕ ಬಿ.ಆರ್.ವಿಜಯವಾಮನ್ ಮಾತನಾಡಿ, ರಜತ ಪರದೆಯ ಮುಂದೆ ಸಾಕಷ್ಟು ಜನ ವಿಜೃಂಭಿಸುತ್ತಾರೆ. ಆದರೆ ತೆರೆಯ ಹಿಂದೆ ಕೆಲಸ ಮಾಡಿದವರು ಹಾಗೇ ಉಳಿದುಬಿಡುತ್ತಾರೆ. ಅವರನ್ನು ಪರಿಚಯಿಸುವ ಸಂಪ್ರದಾಯ ಆರಂಭವಾಗಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಮಹ್ಮದ್ ಖಾಸಿಂ, ಎಂ.ವಿ.ಪ್ರತಿಭಾ, ಶಿವಾನಂದ ಕುಗ್ವೆ, ಚೂಡಾಮಣಿ ರಾಮಚಂದ್ರ, ಮೋಹನಮೂರ್ತಿ, ಡಾ. ಜಯಪ್ರಕಾಶ್ ಮಾವಿನಕುಳಿ, ಡಾ. ವಾ.ಮ.ಗಂಗಾಧರ, ಶಿವಮೂರ್ತಿ, ಪರಶುರಾಮ, ಎಂ.ರಾಘವೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net