ಬೆಂಬಲ ದರದಲ್ಲಿ ಖರೀದಿ ಮಾಡಲು ಕಾನೂನು ರೂಪಿಸಲಿ

ಬೆಂಬಲ ದರದಲ್ಲಿ ಖರೀದಿ ಮಾಡಲು ಕಾನೂನು ರೂಪಿಸಲಿ
Published on

ನಂಜನಗೂಡು: ಕೇಂದ್ರ ಸರ್ಕಾರ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕವಾಗಿ ಬೆಂಬಲ ಬೆಲೆ ಘೋಷಿಸಿದ್ದು, ನಿಗದಿತ ಬೆಂಬಲ ಬೆಲೆಗೆ ರೈತರ ಉತ್ಪನ್ನಗಳನ್ನು ಖರೀದಿಸುವಂತೆ ಕಾನೂನು ರಚನೆ ಮಾಡಬೇಕು ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ವಿದ್ಯಾಸಾಗರ್ ಆಗ್ರಹಿಸಿದರು.

ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದಲ್ಲಿ ಭಾನುವಾರ ರೈತಸಂಘದ ಗ್ರಾಮಘಟಕ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಭತ್ತಕ್ಕೆ 3,800 ರೂ. ಬೆಂಬಲ ಬೆಲೆ ಘೋಷಿಸಿದೆ, ಆದರೆ ದಲ್ಲಾಳಿಗಳು ರೈತರಿಂದ ಕ್ವಿಂಟಾಲ್ ಭತ್ತವನ್ನು 2,500 ರೂಪಾಯಿಗೆ ಖರೀದಿಸುತ್ತಿದ್ದಾರೆ. ಸರ್ಕಾರ ಘೋಷಿಸಿದ ಬೆಂಬಲ ಬೆಲೆಯಂತೆಯೇ ರೈತರಿಂದ ಫಸಲು ಖರೀದಿಸುವಂತೆ ಕಾನೂನು ರಚನೆಯಾಗಬೇಕು ಎಂದು ಒತ್ತಾಯಿಸಿದರು.

ರೈತಸಂಘ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿದ್ದು, ಅಂಡುವಿನಹಳ್ಳಿ-ದೇಬೂರು ಕೆರೆಗೆ ಸೇರಿದ 27 ಎಕರೆ ಪ್ರದೇಶವನ್ನು ನಗರದ ಪ್ರಭಾವಿ ವ್ಯಕ್ತಿಯೊಬ್ಬರು ಲಪಟಾಯಿಸುವ ಸಂಚು ರೂಪಿಸಿದ್ದು, ರೈತಸಂಘ ಹೋರಾಟ ನಡೆಸಿ ಕೆರೆಗೆ ಸೇರಿದ 27ಎಕರೆ ಜಮೀನನ್ನು ಉಳಿಸಿದೆ. ಜಮೀನು ಲಪಟಾಯಿಸಿದ್ದ ಪ್ರಭಾವಿ ವ್ಯಕ್ತಿ ಹೋರಾಟಗಾರರ ಮೇಲೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾನೆ. ಇಂತಹ ಎಷ್ಟು ಕೇಸುಗಳು ಹಾಕಿದರೂ ರೈತ ಸಂಘ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದರು.

ರೈತ ಸಂಘದ ಹೋರಾಟದ ಫಲವಾಗಿ ಬೆಳೆಲೆ-ಶಿರಮಳ್ಳಿ ಭಾಗದ ರೈತರ 150 ಎಕರೆ ಜಮೀನಿಗೆ ನೀರು ಹರಿದಿದೆ. ಹೋರಾಟದ ಫಲವಾಗಿ ಗೋಮಾಳ ಜಾಗ ಪ್ರಬಲರ ಕಪಿಮುಷ್ಟಿಯಿಂದ ತಪ್ಪಿದೆ. ಕೆರೆಗಳ ಹೂಳು ತೆಗೆದು ಕಬಿನಿ, ಬಲದಂಡೆ, ಹುಲ್ಲಹಳ್ಳಿ, ರಾಂಪುರ ನಾಲೆಗಳ ಮೂಲಕ ನೀರಾವರಿ ಇಲಾಖೆ ನೀರು ತುಂಬಿಸಬೇಕು ಎಂದರು.

ಗ್ರಾಮದ ನೂರಾರು ರೈತರು ರೈತ ಸಂಘಕ್ಕೆ ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಸತೀಶ್ ರಾವ್, ಮುಖಂಡ ಮಂಜು ಕಿರಣ್, ಹಿಮ್ಮಾವು ರಘು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net