

ಸೊಂಟ ನೋವು ನಿಯಂತ್ರಣಕ್ಕೆ ಉಪಯುಕ್ತವಾದ ಮತ್ತು ವಿಶ್ರಾಂತಿದಾಯಕವಾದ ಯೋಗಾಸನವೆಂದರೆ, ಮಕರಾಸನ. ಸಂಸ್ಕೃತದಲ್ಲಿ ಮಕರ ಎಂದರೆ ಮೊಸಳೆ ಎಂದಾಗಿದೆ. ಈ ಆಸನದ ಭಂಗಿಯು ಮೊಸಳೆ ನೀರಿನಲ್ಲಿ ತೇಲುತ್ತಿರುವ ಭಂಗಿಗೆ ಹೋಲುವುದರಿಂದ ಮಕರಾಸನ ಎಂದು ಹೆಸರಿಡಲಾಗಿದೆ. ಮಕರಾಸನದಲ್ಲಿ ಕಾಲುಗಳು ಹಾಗೂ ಹಿಂಭಾಗದ ಸ್ನಾಯುಗಳು ನೇರವಾಗಿದ್ದು, ದೇಹ ಸಹಜವಾಗಿ ಹಗುರವಾಗುತ್ತದೆ.
ಇದೊಂದು ಪೂರ್ತಿ ವಿಶ್ರಾಂತಿದಾಯಕ ಭಂಗಿಯಾಗಿದೆ. ಈ ಆಸನದಿಂದ ಮುಖ್ಯವಾಗಿ ದೇಹ ಮನಸ್ಸುಗಳಿಗೆ ವಿಶ್ರಾಂತಿಯೂ, ನೆಮ್ಮದಿಯೂ ದೊರೆಯುತ್ತದೆ. ಮನಸ್ಸಿನ ಏಕಾಗ್ರತೆ ಹೆಚ್ಚಿಸಲು ಸುಲಭವಾಗುತ್ತದೆ. ಈ ಆಸನದಿಂದ ಕೆಲಸ ಮಾಡಿ ಆಯಾಸವಾದವರಿಗೆ ಹೊಸ ಹುರುಪು, ಹೊಸ ಚೈತನ್ಯ ಉಂಟಾಗುತ್ತದೆ.
ಪ್ರಯೋಜನಗಳು: ಸ್ಲಿಪ್ ಡಿಸ್ಕ್, ಸ್ಪಾಂಡಿಲೈಟಿಸ್ ಸಯಾಟಿಕಾ ಸಮಸ್ಯೆಯ ನಿಯಂತ್ರಣಕ್ಕೆ ಸಹಾಯವಾಗುತ್ತದೆ. ಎಲ್ಲಾ ಬೆನ್ನು ಮೂಳೆಯ ಸಂಬಂಧಿತ ಸಮಸ್ಯೆಗಳಿಗೆ ಈ ಆಸನ ಪ್ರಯೋಜನಕಾರಿ. ಅಸ್ತಮಾ, ಮೊಣಕಾಲು ನೋವು ಹಾಗೂ ಶ್ವಾಸಕೋಶದ ಸಮಸ್ಯೆ ನಿಯಂತ್ರಣಕ್ಕೆ ಸಹಾಯವಾಗುತ್ತದೆ. ದಣಿದ ದೇಹಕ್ಕೂ, ಮನಸ್ಸಿಗೂ ಬಲು ಬೇಗನೇ ವಿಶ್ರಾಂತಿ ದೊರಕುತ್ತದೆ. ನಿದ್ರಾ ಹೀನತೆಯ ಸಮಸ್ಯೆ ಇರುವವರಿಗೆ ಈ ಆಸನ ಪ್ರಯೋಜನಕಾರಿಯಾಗಿದೆ.
ಅಭ್ಯಾಸ ಕ್ರಮ : ಜಮಖಾನದ ಮೇಲೆ ಕವುಚಿ ಮಲಗಬೇಕು. ಆಮೇಲೆ ಕಾಲುಗಳನ್ನು ಎರಡು ಅಡಿಯಷ್ಟು ವಿಸ್ತರಿಸಬೇಕು. ಕಾಲು ಬೆರಳುಗಳು ಹೊರ ಮುಖವಾಗಿಯೂ ಇದ್ದು ನೆಲಕ್ಕೆ ತಾಗಿರಬೇಕು. ಎರಡು ಕೈಗಳನ್ನು ಕಟ್ಟಿ ಗಲ್ಲವನ್ನು ಕೈಗಳ ಮೇಲಿರಿಸಬೇಕು.ಎಡ ಅಥವಾ ಬಲ ಬದಿಯ ತಲೆ, ಕೆನ್ನೆಯನ್ನು ಕೈಗಳ ಮೇಲಿರಿಸಬಹುದಾಗಿದೆ. ಈ ಸ್ಥಿತಿಯಲ್ಲಿ 3 ರಿಂದ 5 ನಿಮಿಷಗಳ ಕಾಲ ಸಹಜ ಉಸಿರಾಟ ನಡೆಸುತ್ತಿರಬೇಕು. ಹಾಗೂ ಶರೀರವನ್ನು ಪೂರ್ತಿ ಸಡಿಲಗೊಳಿಸಬೇಕು. ಆಸನದಲ್ಲಿ ನಿದ್ರೆ ಮಾಡದೆ, ಎಚ್ಚರದ ಸ್ಥಿತಿಯಲ್ಲಿರಬೇಕು. ಕಣ್ಣು ಮುಚ್ಚಿ ಉಸಿರಿನ ಕಡೆಗೆ ಗಮನ ಹರಿಸಬೇಕು. ನಂತರ ನಿಧಾನವಾಗಿ ಮೇಲೇಳಬೇಕು.
ರಕ್ತದೊತ್ತಡ, ಮಧುಮೇಹ, ಮನಸ್ಸಿನ ಒತ್ತಡ, ಸೊಂಟ ನೋವು ಮತ್ತು ಬೆನ್ನು ನೋವು ಇದ್ದವರು ಈ ಆಸನವನ್ನು ದಿನಕ್ಕೆ 3 ರಿಂದ 4 ಬಾರಿ ಮಾಡಬೇಕು. ಖಾಲಿ ಹೊಟ್ಟೆಯಲ್ಲಿದ್ದ ವೇಳೆ ಅಭ್ಯಾಸ ಮಾಡಬೇಕು. ಗಂಭೀರ ಬೆನ್ನು ನೋವು, ಮೊಣಕಾಲು ಗಾಯವನ್ನು ಹೊಂದಿದ್ದರೆ ಈ ಆಸನ ಅಭ್ಯಾಸ ಮಾಡುವುದು ಬೇಡ. ಕುತ್ತಿಗೆ ನೋವು ಅಥವಾ ಗಾಯದಿಂದ ಬಳಲುತ್ತಿರುವವರು ಈ ಆಸನವನ್ನು ಜಾಗರೂಕತೆಯಿಂದ ಅಭ್ಯಾಸ ಮಾಡಬೇಕು.