

ನವದೆಹಲಿ: ಪತ್ರ ಚಳವಳಿ ನಂತರದಲ್ಲಿ, ಕಾಂಗ್ರೆಸ್ ಸಂಘಟನೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಪತ್ರದ ಮುಖಾಂತರ ರಾಹುಲ್ ಗಾಂಧಿ ನಾಯಕತ್ವ ಪ್ರಶ್ನಿಸಿದ್ದ 23 ಮುಖಂಡರ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಗುಲಾಂ ನಬೀ ಆಜಾದ್ರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಡಲಾಗಿದೆ. ಹರ್ಯಾಣ ಉಸ್ತುವಾರಿಯಾಗಿದ್ದ ಆಜಾದ್ ಬದಲಿಗೆ ವಿವೇಕ್ ಬನ್ಸಾಲ್ಗೆ ಜವಾಬ್ದಾರಿ ವಹಿಸಲಾಗಿದೆ. ಆದರೆ, ಕಾರ್ಯಕಾರಿ ಸಮಿತಿಯಲ್ಲಿ ಆಜಾದ್ರನ್ನು ಉಳಿಸಿಕೊಳ್ಳಲು ತೀರ್ವನಿಸಲಾಗಿದೆ.
ರಾಹುಲ್ ಗಾಂಧಿ ಆಪ್ತವರ್ಗದಲ್ಲಿ ಗುರುತಿಸಿಕೊಂಡಿರುವ ಅನೇಕರಿಗೆ ಪಕ್ಷದಲ್ಲಿ ಪ್ರಮುಖ ಹುದ್ದೆಗಳನ್ನು ನೀಡಲಾಗಿದ್ದು, ಹಿಂದೊಮ್ಮೆ ಕಾಂಗ್ರೆಸ್ ವಿರುದ್ಧ ಬಂಡೆದ್ದು ಪಿ.ಎ. ಸಂಗ್ಮಾ ಜತೆಗೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಕಟ್ಟಿ ನಂತರ ಕಳೆದ ಲೋಕಸಭೆ ಚುನಾವಣೆ ವೇಳೆ ಪಕ್ಷಕ್ಕೆ ವಾಪಸಾಗಿದ್ದ ತಾರೀಖ್ ಅನ್ವರ್ಗೆ ಡಬಲ್ ಹುದ್ದೆಯ ಉಡುಗೊರೆ ನೀಡಲಾಗಿದೆ. ಕೇಂದ್ರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನ ಪಡೆದಿರುವ ಅನ್ವರ್ರನ್ನು ಕೇರಳ ಮತ್ತು ಲಕ್ಷದ್ವೀಪಕ್ಕೆ ಸಂಬಂಧಿಸಿದಂತೆ ಪ್ರಧಾನ ಕಾರ್ಯದರ್ಶಿಯನ್ನಾಗಿಯೂ ನೇಮಕ ಮಾಡಲಾಗಿದೆ.
ಹರ್ಯಾಣದಲ್ಲಿ ಕಳೆದ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರೂ, ರಾಹುಲ್ ಆಪ್ತರಾಗಿದ್ದ ಮತ್ತು ಸಂವಹನ ವಿಭಾಗದ ಮುಖ್ಯಸ್ಥರಾಗಿದ್ದ ರಣದೀಪ್ ಸಿಂಗ್ ಸುರ್ಜೆವಾಲಾರನ್ನು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯನ್ನಾಗಿ ನೇಮಿಸಿರುವ ಜತೆಗೆ ಸೋನಿಯಾ ಗಾಂಧಿಯವರಿಗೆ ಸಲಹೆ ನೀಡುವ 6 ಸದಸ್ಯರ ಸಮಿತಿ ಸದಸ್ಯರನ್ನಾಗಿಯೂ ಮಾಡಲಾಗಿದೆ.
23 ಮಂದಿಯ ತಂಡದಲ್ಲಿ ಗುರುತಿಸಿಕೊಂಡವರಲ್ಲಿ ಮತ್ತೋರ್ವ ಪ್ರಮುಖ ನಾಯಕ ಮುಕುಲ್ ವಾಸ್ನಿಕ್ ಡಿಮೋಷನ್ನಿಂದ ಪಾರಾಗಿದ್ದಾರೆ. ಅವರನ್ನು ಮಧ್ಯಪ್ರದೇಶ ಉಸ್ತುವಾರಿಯನ್ನಾಗಿ ನೇಮಿಸಿರುವ ಜತೆಗೆ ಕಾರ್ಯಕಾರಿ ಸಮಿತಿ ಸದಸ್ಯತ್ವವನ್ನೂ ಮುಂದುವರಿಸಲಾಗಿದೆ. ಅಜಯ್ ಮಾಕೇನ್ ರಾಜಸ್ತಾನ ಉಸ್ತುವಾರಿ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ನನ್ನ ಕ್ಯಾಸಿನೊ ಇರೋದು ನಿಜ, ಆದರೆ ಅದು ಅಕ್ರಮವಲ್ಲ, ಸಕ್ರಮ’ ಎಂದ ಜಮೀರ್
ರಾಹುಲ್ ನಾಯಕತ್ವದ ಬಗ್ಗೆ ಉತ್ತರ ಪ್ರದೇಶ ಕಾಂಗ್ರೆಸ್ ಮುಖಂಡ ಜಿತಿನ್ ಪ್ರಸಾದ್ ಟೀಕೆಗಳನ್ನು ಮಾಡಿದ್ದರೂ, ಅವರ ಸ್ಥಾನಮಾನಗಳಿಗೆ ಯಾವುದೇ ಚ್ಯುತಿ ಬಂದಿಲ್ಲ. ಪಶ್ಚಿಮ ಬಂಗಾಳ, ಅಂಡಮಾನ್ ನಿಕೋಬಾರ್ ಉಸ್ತುವಾರಿಯನ್ನಾಗಿ ನೇಮಿಸುವ ಜತೆಗೆ ಕಾರ್ಯಕಾರಿ ಸಮಿತಿಯಲ್ಲೂ ಅವರು ಸ್ಥಾನ ಉಳಿಸಿಕೊಂಡಿದ್ದಾರೆ.
ಸೋನಿಯಾ ಪುತ್ರಿ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶ ಪ್ರಧಾನ ಉಸ್ತುವಾರಿಯಾಗಿ ಮುಂದುವರಿಯಲಿದ್ದಾರೆ. ಹಾಗೇ, ರಾಹುಲ್ ಆಪ್ತ ಮಾಣಿಕಂ ಠಾಗೋರ್ಗೆ ತೆಲಂಗಾಣದ ಹೊಸ ಉಸ್ತುವಾರಿಯಾಗಿ ಜವಾಬ್ದಾರಿ ವಹಿಸಲಾಗಿದೆ.
ದಿಗ್ವಿಜಯಂ ಸಿಂಗ್, ರಾಜೀವ್ ಶುಕ್ಲಾ, ಮಾಣಿಕಂ ಠಾಗೋರ್, ಪ್ರಮೋದ್ ತಿವಾರಿ, ಜೈರಾಂ ರಮೇಶ್, ಎಚ್.ಕೆ. ಪಾಟಿಲ್, ಸಲ್ಮಾನ್ ಖುರ್ಷಿದ್, ಪವನ್ ಕುಮಾರ್ ಬನ್ಸಾಲ್, ದಿನೇಶ್ ಗುಂಡೂರಾವ್, ಮನೀಶ್ ಚತ್ರಥ್, ಕುಲ್ದೀಪ್ ನಾಗ್ರಾ ಕಾರ್ಯಕಾರಿ ಸಮಿತಿ ಸದಸ್ಯತ್ವ ಪಡೆದುಕೊಂಡ ಹೊಸಬರಾಗಿದ್ದಾರೆ. ಇದನ್ನೂ ಓದಿ: ಅಗಸ್ಟಾವೆಸ್ಟ್ಲ್ಯಾಂಡ್ ಕೇಸ್ – ಮಾಜಿ ರಕ್ಷಣಾ ಕಾರ್ಯದರ್ಶಿ ವಿಚಾರಣೆಗೆ ಅನುಮತಿ ಕೋರಿದ ಸಿಬಿಐ
ಹಿಂದೆ ಕಾರ್ಯಕಾರಿ ಸಮಿತಿಯಲ್ಲಿದ್ದ ವೀರಪ್ಪ ಮೊಯಿಲಿಯವರನ್ನು ಕೈಬಿಡಲಾಗಿದೆ. ಅವರಿಗೆ ಯಾವುದೇ ಹೊಸ ಜವಾಬ್ದಾರಿ ನೀಡಲಾಗಿಲ್ಲ. ಪತ್ರ ಬರೆದಿದ್ದ 23 ಮಂದಿಯಲ್ಲಿ ಅವರೂ ಒಬ್ಬರಾಗಿದ್ದರು. ಅಂಬಿಕಾ ಸೋನಿ, ಮೋತಿಲಾಲ್ ವೋಹ್ರಾ, ಮಲ್ಲಿಕಾರ್ಜುನ ಖರ್ಗೆ ಪ್ರಧಾನ ಕಾರ್ಯದರ್ಶಿ ಹುದ್ದೆಗಳಿಂದ ಕೈಬಿಡಲಾಗಿದೆ. ಆದರೆ, ಸೋನಿಯಾ ಗಾಂಧಿಯವರ 6 ಮಂದಿ ಸಲಹಾ ಸಮಿತಿಯಲ್ಲಿ ಅಂಬಿಕಾ ಸೋನಿಗೂ ಸ್ಥಾನ ನೀಡಲಾಗಿದೆ. ಅಹ್ಮದ್ ಪಟೇಲ್, ಕೆ.ಸಿ. ವೇಣುಗೋಪಾಲ್, ಮುಕುಲ್ ವಾಸ್ನಿಕ್, ಎ.ಕೆ. ಆಂಟನಿ, ರಣದೀಪ್ ಸಿಂಗ್ ಸುರ್ಜೆವಾಲಾ ಈ ಸಮಿತಿಯ ಇತರೆ ಐವರು ಸದಸ್ಯರಾಗಿದ್ದಾರೆ.