ಕೇದಾರನಾಥ ಯಾತ್ರಾ ಮಾರ್ಗದಲ್ಲಿ ಭೀಕರ ಭೂ ಕುಸಿತ; ಅನೇಕರು ಸಮಾಧಿಯಾದ ಶಂಕೆ

kedarnath rescue
Published on

ಗೌರಿಕುಂಡ: ಉತ್ತರಾಖಂಡ್​ನ ಗೌರಿಕಂಡದ ಬಳಿ ಭೀಕರ ಭೂಕುಸಿತ ಉಂಟಾಗಿದ್ದು ಅನೇಕರು ಸಮಾಧಿ ಆಗಿರಬಹುದು ಎಂಬ ಶಂಕೆ ಉಂಟಾಗಿದೆ. ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.

ಉತ್ತರಾಖಂಡ್​ನ ರುದ್ರಪ್ರಯಾಗ್ ಜಿಲ್ಲೆಯ ಕೇದಾರನಾಥ ಯಾತ್ರಾ ಮಾರ್ಗದಲ್ಲಿ ಗೌರಿಕಂಡದ ಬಳಿ ಪ್ರಮುಖ ಭೂಕುಸಿತದಿಂದಾಗಿ ಅನೇಕ ಅಂಗಡಿಗಳು ನಾಶವಾಗಿದ್ದು, ಭಗ್ನಾವಶೇಷಗಳ ಅಡಿಯಲ್ಲಿ ಅನೇಕರು ಸಮಾಧಿಯಾಗಿರಬಹುದು ಎಂದು ಜನರು ಭಯಭೀತರಾಗಿದ್ದಾರೆ. ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ ( SDRF )ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.

ರುದ್ರಪ್ರಯಾಗ್ ವಿಪತ್ತು ನಿರ್ವಹಣೆಯ ಅಧಿಕಾರಿಯೊಬ್ಬರ ಪ್ರಕಾರ, 10ರಿಂದ 12 ಜನರು ಭೂಕುಸಿತದಲ್ಲಿ ಸಮಾಧಿಯಾಗಿರುವ ಅಥವಾ ಸಿಲುಕಿಕೊಂಡಿರುವ ಸಾಧ್ಯತೆ ಇದೆ. ಕಳೆದ ರಾತ್ರಿ ಗೌರಿಕುಂಡ ಪೋಸ್ಟ್ ಸೇತುವೆಯ ಬಳಿ ಭಾರಿ ಮಳೆ ಸುರಿದಿದ್ದು ನಂತರ ಭೂಕುಸಿತ ಉಂಟಾಗಿದೆ. ಇದರಿಂದಾಗಿ ಮೂರು ಅಂಗಡಿಗಳು ಹಾನಿಗೊಳಗಾದವು ಎಂದು ವರದಿಯಾಗಿದೆ. ರುದ್ರಪ್ರಯಾಗ್​ನ ಎಸ್​ಪಿ, ಡಾ. ವಿಶಾಖಾ ಈ ಕುರಿತಾಗಿ ಮಾತನಾಡಿದ್ದು,“ ಈ ಕಾರ್ಯಾಚರಣೆಯಲ್ಲಿ ಕಾಣೆಯಾದ ಜನರನ್ನು ಹುಡುಕಲಾಗುವುದು” ಎಂದಿದ್ದಾರೆ.

“ಭಾರೀ ಮಳೆಯಿಂದಾಗಿ ಕುಸಿದ ಬಂಡೆಗಳು ಮೂರು ಅಂಗಡಿಗಳ ಮೇಲೆ ಪರಿಣಾಮ ಬೀರಿವೆ ಎಂಬ ಮಾಹಿತಿ ನಮಗೆ ಸಿಕ್ಕಿದ್ದು ಹುಡುಕಾಟ ಕಾರ್ಯಾಚರಣೆಯನ್ನು ತಕ್ಷಣ ಪ್ರಾರಂಭಿಸಲಾಯಿತು. ಸುಮಾರು 10-12 ಜನರು ಅಲ್ಲಿದ್ದರು ಆದರೆ ಇಲ್ಲಿಯವರೆಗೆ ಅವರು ಪತ್ತೆಯಾಗಿಲ್ಲ ಎನ್ನಲಾಗಿದೆ” ಎಂದು ವಿಪತ್ತು ನಿರ್ವಹಣಾ ಅಧಿಕಾರಿ ದಲಿಪ್ ಸಿಂಗ್ ರಾಜ್ವಾರ್ ಎಎನ್ಐಗೆ ತಿಳಿಸಿದರು.

ಕಾಣೆಯಾದವರನ್ನು ವಿನೋದ್ ( 26 ), ಮುಲಾಯಮ್ ( 25 ), ಆಶು ( 23 ), ಪ್ರಿಯಾನ್ಶು ಚಮೋಲಾ ( 18 ), ರಣ್​ಬೀರ್ ಸಿಂಗ್ ( 28 ), ಅಮರಿಟಾ ಬೋಹ್ರಾ, ಅವರ ಪತ್ನಿ, ರಾಧಿಕಾ ಬೋಹ್ರಾ ಮತ್ತು ಪಿಂಕಿ ಬೋಹ್ರಾ, ಮತ್ತು ಪುತ್ರರಾದ ಪ್ರಿಥ್ವಿ ಬೋಹ್ರಾ ( 7 ), ಜಾಟಿಲ್ ( 6 ) ಮತ್ತು ವಾಕಿಲ್ ( 3 ) ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾನ್ಸೂನ್, ಮಳೆ ಸಂಬಂಧಿತ ಘಟನೆಗಳ ಭಯದಿಂದ ಕೇದಾರ್​ನಾಥ್​ ದೇಗುಲಕ್ಕೆ ಬರುವ ಯಾತ್ರಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net