

ನವದೆಹಲಿ: 87 ವರ್ಷದ ವೃದ್ಧೆಯೊಬ್ಬರ ಮೇಲೆ ಹದಿಹರೆಯದ ಹುಡುಗನೊಬ್ಬ ದಾಳಿ ಮಾಡಿದ್ದು, ಆಕ್ರಮಣಕಾರನನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದಾಳೆ. ಆದರೆ ಕೊನೆಗೆ ಆತನಿಗೆ ತಿಂಡಿ ಬಾಕ್ಸ್ಅನ್ನೂ ನೀಡಿದ್ದಾಳೆ! ಈ ವಿಚಿತ್ರ ಘಟನೆ, ಅಮೆರಿಕದ ಮೇನ್ ಎಂಬಲ್ಲಿ ನಡೆದಿದೆ.
ಮಾರ್ಜರಿ ಪಾರ್ಕಿನ್ಸ್ ಎನ್ನುವವರು ಜುಲೈ 26ರಂದು ಬೆಳಿಗ್ಗೆ 2 ಗಂಟೆಗೆ ಎಚ್ಚರಗೊಂಡಿದ್ದು, ಈ ಸಂದರ್ಭ ಆಕೆಯ ಹಾಸಿಗೆ ಮೇಕೆ ಯುವಕನೊಬ್ಬ ನಿಂತಿರುವುದನ್ನು ನೋಡಿದ್ದಾರೆ. ಅವನು ತನ್ನ ಶರ್ಟ್ ಮತ್ತು ಪ್ಯಾಂಟ್ ಅನ್ನು ಬಿಚ್ಚಿ ನಿಂತಿದ್ದು, "ನಾನು ನಿನ್ನನ್ನು ಕತ್ತರಿಸಲಿದ್ದೇನೆ" ಎಂದು ಹೇಳಿದ್ದ.
ಆಗ ಮಹಿಳೆ ಆತನನ್ನು ಒದ್ದು ದೂರಕ್ಕೆ ತಳ್ಳಿದ್ದಾಳೆ. ನಂತರ ಆಕೆ ತನ್ನ ಬೂಟುಗಳನ್ನು ಹಾಕಿ ಮತ್ತೆ ಹೋರಾಡಿ ಆ ಹದಿಹರೆಯದ ಯುವಕನನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದಾರೆ.
ನಂತರ ಅವರು ಅಡುಗೆಮನೆಗೆ ಹೋಗಿ ಆಯುಧವನ್ನು ಎತ್ತಿಕೊಳ್ಳಲು ಮುಂದಾಗಿದ್ದು ಆಗ ದಾಳಿಕೋರ ಅವಳರ ಕೆನ್ನೆ ಮತ್ತು ಹಣೆಗೆ ಹೊಡೆದಿದ್ದಾನೆ. ಜತೆಗೆ ತಾನು, ಸಂಪೂರ್ಣವಾಗಿ ಹಸಿದಿರುವುದಾಗಿ ಮಹಿಳೆಗೆ ತಿಳಿಸಿದ್ದಾನೆ,
ಆಗ ಆ ವೃದ್ಧ ಮಹಿಳೆ, ಅವನಿಗೆ ಪೀನಟ್ ಬಟರ್, ಹನಿ ಬಿಸ್ಕೆಟ್, ಎರಡು ಪ್ರೋಟೀನ್ ಪಾನೀಯಗಳು ಮತ್ತು ಎರಡು ಟ್ಯಾಂಗರಿನ್ಗಳ ಪೆಟ್ಟಿಗೆಯನ್ನು ನೀಡಿದ್ದಾರೆ. ಪಾರ್ಕಿನ್ಸ್, ತನ್ನ ಫೋನ್ನಲ್ಲಿ ಅಮೆರಿಕದ ತುರ್ತು ಸಂಖ್ಯೆ 911ಗೆ ಕರೆ ಮಾಡಿ ಪೊಲೀಸರೊಂದಿಗೆ ಮಾತನಾಡುತ್ತಿದ್ದಾಗ ದಾಳಿಕೋರ ತನ್ನ ಪ್ಯಾಂಟ್ ಸಂಗ್ರಹಿಸಿ ಹೊರಟು ಹೋಗಿದ್ದಾನೆ. ಆತ ಚಾಕು, ಶರ್ಟ್, ಬೂಟುಗಳು ಮತ್ತು ಆಲ್ಕೋಹಾಲ್ ಹೊಂದಿದ್ದ ನೀರಿನ ಬಾಟಲಿಯನ್ನು ಬಿಟ್ಟು ಹೋಗಿದ್ದಾನೆ ಎನ್ನಲಾಗಿದೆ.
ದಾಳಿಯ ನಂತರ ಸ್ವಲ್ಪ ಜಗತ್ತಿನಾದ್ಯಂತ ಪ್ರಸಿದ್ಧರಾದ ವೃದ್ಧ ಪಾರ್ಕಿನ್ಸ್, ತಾನು 42 ವರ್ಷಗಳಿಂದ ವಾಸಿಸುತ್ತಿದ್ದ ಮನೆಯಲ್ಲಿ ಇನ್ನೂ ಸುರಕ್ಷಿತ ಎಂದು ಭಾವಿಸಿದ್ದಾರೆ. ಆದರೆ ಹೆಚ್ಚಾಗುತ್ತಿರುವ ಅಪರಾಧ ಪ್ರಕರಣಗಳ ಬಗ್ಗೆ ಚಿಂತೆ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅಪರಾಧ ಪ್ರಕರಣ ಹೆಚ್ಚಿದ್ದು ಅಪರಾಧಿಗಳು ಜೈಲಿಗೆ ಹೋಗಲೂ ಹೆದರುವುದಿಲ್ಲ ಎಂದು ಅವರು ಹೇಳಿದರು.
“ನಮ್ಮ ಕಾನೂನು ಇದೀಗ ಸೋಲುತ್ತಿದೆ ಎಂದು ನಾನು ಭಾವಿಸುತ್ತೇನೆ. ಜನರು ಇನ್ನು ಮುಂದೆ ಯಾವುದಕ್ಕೂ ಹೆದರುವುದಿಲ್ಲ. ಅವರು ಇಷ್ಟಪಟ್ಟಂತೆ ಮಾಡಬಹುದು ಎಂದು ಅವರು ಭಾವಿಸುತ್ತಾರೆ” ಎಂದು ವೃದ್ಧೆ ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದರ ಜತೆ ಮಾತನಾಡಿದ ಪೊಲೀಸರು, ದಾಳಿಕೋರನನ್ನು ಶೀಘ್ರವೇ ಪತ್ತೆಹಚ್ಚಿ ಆತನ ಮೇಲೆ ಕಳ್ಳತನ, ಕ್ರಿಮಿನಲ್ ಬೆದರಿಕೆ, ಹಲ್ಲೆ ಮತ್ತು ಅಪ್ರಾಪ್ತ ವಯಸ್ಕನಾಗಿ ಮದ್ಯ ಸೇವಿಸಿದ ಆರೋಪ ಹೊರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಆತನ ಅಪ್ರಾಪ್ತ ವಯಸ್ಸಿನ ಕಾರಣ ಅಧಿಕಾರಿಗಳು ಗುರುತನ್ನು ಬಿಡುಗಡೆ ಮಾಡಲಿಲ್ಲ. ದಾಳಿಕೋರ ಯುವಕ ಸಂತ್ರಸ್ತೆ ವೃದ್ಧೆಯಿಂದ ಕೆಲವೇ ಬ್ಲಾಕ್ಗಳಷ್ಟು ದೂರವಿದ್ದ ಎಂದು ಅವರು ಹೇಳಿದರು.(ಏಜೆನ್ಸೀಸ್)