36 ಮಹಿಳೆಯರು & ಮಕ್ಕಳ ಕಿಡ್ನಾಪ್​ ಮಾಡಿದ ಗ್ಯಾಂಗ್​! ಒಂದೇ ಸಮುದಾಯವನ್ನು ಟಾರ್ಗೆಟ್​ ಮಾಡಿದ ಕಿಡ್ನಾಪರ್ಸ್​!

kidnap
Published on

ಝಲಾವರ್​: ಪೂರ್ತಿ ದೇಶವೇ ಬೆಚ್ಚಿ ಬೀಳುವಂತಹ ಅಘಾತಕಾರಿ ಘಟನೆಯೊಂದು ರಾಜಸ್ಥಾನದ ಝಲಾವರ್​ ಜಿಲ್ಲೆಯಲ್ಲಿ ನಡೆದಿದೆ. ಒಂದೇ ಸಮುದಾಯಕ್ಕೆ ಸೇರಿರುವ 36 ಮಹಿಳೆಯರು ಮತ್ತು ಮಕ್ಕಳನ್ನು 100 ಜನರ ಗ್ಯಾಂಗ್​ ಒಂದು ಅಪಹರಣ ಮಾಡುವ ಪ್ರಯತ್ನ ಮಾಡಿದೆ.

ರಾಜಸ್ಥಾನದ ಉನ್ಹೆಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬಮನ್ ದೇವ್ರಿಯಾ ಮತ್ತು ಹಜ್ಡಿಯಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಪಹರಣಕಾರರು ಮಧ್ಯಪ್ರದೇಶದ ರತ್ನಂ ಜಿಲ್ಲೆಯ ಅಲೋಟ್ ತಹಸಿಲ್‌ನ ಕಲ್ಸಿಯಾ ಗ್ರಾಮದಿಂದ ಬಂದವರು ಎನ್ನಲಾಗಿದೆ. ಈ ಗ್ಯಾಂಗ್​ ಕೈನಲ್ಲಿ ಕತ್ತಿ ಸೇರಿ ಹಲವಾರು ಶಸ್ತ್ರಾಸ್ತ್ರಗಳನ್ನು ಹಿಡಿದಿದ್ದು ಕಂಜಾರ್ ಸಮುದಾಯಕ್ಕೆ ಸೇರಿದ 36 ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಲು ಮುಂದಾಗಿದ್ದಾರೆ. ಅವರನ್ನೆಲ್ಲ ಟ್ರಕ್​ ಮತ್ತು ಮಿನಿ ಬಸ್​ಗೆ ತುಂಬಿಸಲಾಗಿದೆ. ಸಂತ್ರಸ್ತರನ್ನು ನಂತರ ಮಧ್ಯಪ್ರದೇಶದ ಅಲೋಟ್‌ಗೆ ಕರೆದೊಯ್ಯಲಾಯಿತು.

ಅಷ್ಟರಲ್ಲಿ ಕಾರ್ಯಪ್ರವರ್ತರಾದ ಝಲಾವರ್​ ಜಿಲ್ಲಾ ಪೊಲೀಸರು, ವಾಹನಗಳನ್ನು ಅಡ್ಡಗಟ್ಟಿ ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಿದ್ದಾರೆ. ಅಪಹರಣಕಾರರ ಗ್ಯಾಂಗ್​ನಲ್ಲಿ ಕೇವಲ ಆರು ಮಂದಿ ಮಾತ್ರ ಸಿಕ್ಕಿಬಿದ್ದಿದ್ದಾರೆ. ಅಪಹರಣ ಮಾಡುತ್ತಿರುವ ವಿಡಿಯೋ ಸಿಕ್ಕಿದ್ದು, ಅದರಲ್ಲಿ ಆರೋಪಿಗಳನ್ನು ಗುರುತಿಸಿ, ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಯಾವ ಕಾರಣಕ್ಕಾಗಿ ಅಪಹರಣ ನಡೆಸಲಾಗುತ್ತಿತ್ತು ಎನ್ನುವುದು ತನಿಖೆಯಿಂದ ತಿಳಿದುಬರಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net