

ನವದೆಹಲಿ: ಸಿರಪ್ ಒಂದರಿಂದ ಮಕ್ಕಳ ಸಾವಿಗೆ ಕಾರಣವಾಗಿದೆ ಎಂಬ ಆರೋಪ ಎದುರಿಸುತ್ತಿರುವ ಭಾರತದ ಈ ಔಷಧ ಕಂಪನಿ ಮತ್ತೆ ಮತ್ತೆ ತಪ್ಪೆಸಗುತ್ತಿದ್ದು, ಇದರ ಬಹಳಷ್ಟು ಮದ್ದು ಕಳಪೆ ಆಗಿದೆ ಎಂದೂ ಹೇಳಲಾಗುತ್ತಿದೆ. ಮಾತ್ರವಲ್ಲ, ಈ ಕುರಿತು ಈಗಾಗಲೇ ಕೆಲವು ರಾಜ್ಯಗಳಲ್ಲಿ ಎಚ್ಚರಿಕೆಯನ್ನು ನೀಡಲಾಗಿದೆ.
ಮೇಡನ್ ಫಾರ್ಮಾಸ್ಯೂಟಿಕಲ್ಸ್ ಕಂಪನಿಯ ಸಿರಪ್ ಕುಡಿದು ಗೇಂಬಿಯಾದಲ್ಲಿ 66 ಮಕ್ಕಳು ಸಾವಿಗೀಡಾಗಿದ್ದ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯೇ ಎಚ್ಚರಿಕೆ ನೀಡಿತ್ತು. ಇದೀಗ ಈ ಕಂಪನಿ ಇಂಥ ತಪ್ಪುಗಳನ್ನು ಈ ಹಿಂದೆಯೂ ಮಾಡಿದ್ದು, ಭಾರತದಲ್ಲೇ ಕೆಲವು ರಾಜ್ಯಗಳಲ್ಲಿ ಕಳಪೆ ಮದ್ದುಗಳನ್ನು ವಿತರಿಸಿದ್ದು ಈಗ ಬೆಳಕಿಗೆ ಬಂದಿದೆ.
ಮೇಡನ್ ಫಾರ್ಮಾಸ್ಯೂಟಿಕಲ್ಸ್ ಕಂಪನಿಯನ್ನು ವಿಯೆಟ್ನಾಂ 2011ರಲ್ಲೇ ನಿಷೇಧಿಸಿತ್ತು. ಭಾರತದಲ್ಲೂ ಈ ಕಂಪನಿ ಕಳಪೆ ಮದ್ದುಗಳನ್ನು ವಿತರಿಸಿದೆ ಎಂಬುದನ್ನು ಸಾರ್ವಜನಿಕ ಆರೋಗ್ಯ ಕಾರ್ಯಕರ್ತ ದಿನೇಶ್ ಠಾಕೂರ್ ಹೇಳಿದ್ದಾರೆ. ಕೇರಳ, ಗುಜರಾತ್, ಬಿಹಾರಗಳಲ್ಲಿ ಈ ಕಂಪನಿ ಕಳಪೆ ಔಷಧ ನೀಡಿದ್ದು, ಅಧ್ಯಯನದಿಂದ ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ.
ಮತ್ತೊಂದೆಡೆ, ಮೇಡನ್ ಕಂಪನಿ 1990ರ ನವೆಂಬರ್ನಲ್ಲಿ ಕಾರ್ಯಾರಂಭಿಸಿದ್ದು, ಇದುವರೆಗೆ ಇದರ ಸಿರಪ್ ಬರೀ ಗೇಂಬಿಯಾಗಷ್ಟೇ ರಫ್ತು ಮಾಡಲಾಗಿತ್ತು ಎಂದು ಭಾರತ ಸರ್ಕಾರ ತಿಳಿಸಿದೆ.