ಗೃಹ ಸಚಿವ ಅಮಿತ್​ ಷಾ ತಲೆ ಕತ್ತರಿಸಿ ಪ್ರದರ್ಶನಕ್ಕಿಡಿ; ನಾಲಿಗೆ ಹರಿಬಿಟ್ಟ ಟಿಎಂಸಿ ಸಂಸದೆ ಮೊಯಿತ್ರಾ | Mahua Moitra Statement

Mahua Moitra Statement, Amit Sha
Published on

Mahua Moitra Statement: ಭಾರತದ ಗಡಿಗಳನ್ನು ರಕ್ಷಿಸಲು ಸಾಧ್ಯವಾಗದಿದ್ದರೆ, ನುಸುಳುಕೋರರು ತಡೆಯಲು ಆಗದಿದ್ದರೆ, ನೈತಿಕ ಹೊಣೆಯಿಂದ ಅಮಿತ್ ಷಾ ತಮ್ಮ ತಲೆಯನ್ನು ಕತ್ತರಿಸಿ, ಅದನ್ನು ಪ್ರದರ್ಶನಕ್ಕಾಗಿ ಮೇಜಿನ ಮೇಲೆ ಇಡಬೇಕು ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿವಾದಾತ್ಮಕ ಹೇಳಿಕೆ ನೀಡಿದ್ದು, ರಾಜಕೀಯ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೇಳೆ, ಭಾರತದ ಭೂಪ್ರದೇಶಕ್ಕೆ ಅಕ್ರಮ ಬಾಂಗ್ಲಾದೇಶಿ ವಲಸಿಗರ ನುಸುಳುವಿಕೆಯ ಬಗೆಗಿನ ಪ್ರಶ್ನೆಗೆ ಉತ್ತರಿಸುತ್ತಾ ಈ ಹೇಳಿಕೆ ನೀಡಿದ್ದಾರೆ. ಪದೇ ಪದೇ ಪ್ರಧಾನಿ ಮೊದಿ, ಗೃಹ ಸಚಿವ ಷಾ, ಅಕ್ರಮ ನುಸುಳುಕೋರರ ಬಗ್ಗೆ ಮಾತನಾಡುತ್ತಾರೆ, ಆದರೆ ಭಾರತದ ಗಡಿಯನ್ನು ಐದು ಪಡೆಗಳು ರಕ್ಷಿಸುತ್ತವೆ ಮತ್ತು ಅದು ನೇರವಾಗಿ ಗೃಹ ಸಚಿವಾಲಯದ ಅಡಿಯಲ್ಲಿ ಬರುತ್ತವೆ ಎಂದರು

ಪ್ರಧಾನಿ ಮೋದಿಯವರ ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಉಲ್ಲೇಖಿಸಿದ ಸಂಸದೆ, ಕೆಂಪು ಕೋಟೆಯಲ್ಲಿ ನಿಂತು ಪ್ರಧಾನಿ ನುಸುಳುಕೋರರು ಜನಸಂಖ್ಯಾ ಬದಲಾವಣೆಗಳನ್ನು ಉಂಟುಮಾಡುತ್ತಿದ್ದಾರೆ ಎಂದು ಹೇಳಿದರು. ಅವರು ಅದನ್ನು ಹೇಳುತ್ತಿರುವಾಗಲೂ, ಗೃಹ ಸಚಿವರು ಮುಂದಿನ ಸಾಲಿನಲ್ಲಿ ನಿಂತು, ನಗುತ್ತಾ ಮತ್ತು ಚಪ್ಪಾಳೆ ತಟ್ಟುತ್ತಿದ್ದರು ಎಂದು ವ್ಯಂಗ್ಯವಾಡಿದರು.

ಸಂಸದೆ ಮೋಯಿತ್ರಾ ಹೇಳಿಕೆಯ ಕುರಿತು ಸ್ಥಳೀಯ ನಿವಾಸಿ ಸಂದೀಪ್ ಮಜುಂದಾರ್ ಕೃಷ್ಣನಗರದ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಿಜೆಪಿ ಖಂಡನೆ

ತಾಲಿಬಾನಿ ಮನಸ್ಥಿತಿ: ಶೆಹಜಾದ್ ಪೂನವಾಲಾ

ಅಮಿತ್ ಷಾ ಅವರ ಶಿರಚ್ಛೇದದ ಕುರಿತು ಮಹುವಾ ಮೊಯಿತ್ರಾ ಅವರ ಐಸಿಸ್ ಶೈಲಿಯ 'ಸರ್ ತಾನ್ ಸೆ ಜುದಾ' ಕಾಮೆಂಟ್ ಸ್ಪಷ್ಟ ಮಾದರಿಯನ್ನು ತೋರಿಸುತ್ತದೆ. ನಫ್ರತ್ ಕೆ ಭಾಯಿಜಾನ್ ಮುಹಬ್ಬತ್ ಕಿ ದುಕಾನ್ ಅಲ್ಲ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಟ್ವೀಟ್ ಮಾಡಿದ್ದಾರೆ. ಇದು ಯಾವ ರೀತಿಯ ಮನಸ್ಥಿತಿ? ಜಿಹಾದಿ ಭಯೋತ್ಪಾದಕರು ಹೀಗೆ ಯೋಚಿಸುತ್ತಾರೆ. ಒಳನುಸುಳುಕೋರರನ್ನು ತೆಗೆದುಹಾಕುವ ವಿಷಯಕ್ಕೆ ಬಂದಾಗ ತೃಣಮೂಲ ಕಾಂಗ್ರೆಸ್ ನಾಯಕರು ರಕ್ತಪಾತದ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದ್ದಾರೆ.

ಟಿಎಂಸಿಯ ಸಮರ್ಥ ಮಾರ್ಗದರ್ಶನ: ಪ್ರದೀಪ್ ಭಂಡಾರಿ

ಈ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ನಾಯಕ ಪ್ರದೀಪ್ ಭಂಡಾರಿ, ಅಸಹ್ಯಕರ, ನಾಚಿಕೆಗೇಡಿನ ಸಂಗತಿ, ಮಹುವಾ ಮೊಯಿತ್ರಾ ಅವರ ಆ ಮಾತುಗಳು ರಾಜಕೀಯ ಮೀರಿದ ದ್ವೇಷಪೂರಿತ ಭಾಷಣದಂತಿದೆ, ಮಮತಾ ಬ್ಯಾನರ್ಜಿಯವರ ಟಿಎಂಸಿಯ ಸಮರ್ಥ ಮಾರ್ಗದರ್ಶನದಲ್ಲಿ ಸಂಸದೆ ಈ ಮಟ್ಟಕ್ಕೆ ಇಳಿದಿದ್ದಾರೆ ಎಂದು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net