ನನ್ನ ಶಕ್ತಿಯ ಗುಟ್ಟು S*X ಅಂದ್ರಾ ಮಹುವಾ ಮೊಯಿತ್ರಾ? ವೈರಲ್​ ವಿಡಿಯೋ ಹಿಂದಿನ ಅಸಲಿಯತ್ತು ಇಲ್ಲಿದೆ…

Mahua Moitra
Published on

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ. ಅದರಲ್ಲಿ ಕೆಲವೊಂದು ವಿಡಿಯೋಗಳು ವಿಶೇಷ ಹಾಗೂ ವಿಚಿತ್ರ ಕಾರಣದಿಂದ ದಿಢೀರನೇ ವೈರಲ್​ ಆಗಿ ಬಿಡುತ್ತವೆ. ಆದರೆ, ವೈರಲ್ ಆಗುವ ಕೆಲ ವಿಡಿಯೋಗಳಲ್ಲಿರುವ ವಿಚಾರಗಳು ನಿಜ ಎಂದು ನಂಬಬಾರದು. ಏಕೆಂದರೆ, ವಿಡಿಯೋದಲ್ಲಿರುವ ವ್ಯಕ್ತಿಗಳನ್ನು ಮತ್ತು ಅವರ ಧ್ವನಿಗಳನ್ನು ತಿರುಚಲಾಗುತ್ತದೆ. ಇದರ ಜೊತೆಗೆ ಅಲ್ಲಿನ ವಸ್ತುಗಳನ್ನೂ ಬದಲಾಯಿಸಿ, ಎಡಿಟ್ ಮಾಡುವ ಮೂಲಕ ನಕಲಿ ವಿಡಿಯೋ ಮತ್ತು ಫೋಟೋಗಳವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ತಪ್ಪು ಸಂದೇಶವನ್ನು ರವಾನಿಸುವ ಒಂದು ಜಾಲವಿದೆ.

ಇಂತಹ ವಿಷಯಗಳನ್ನು ನಾವು ಕುರುಡಾಗಿ ನಂಬಿದಾಗ ಮತ್ತು ಅವುಗಳನ್ನು ಸತ್ಯವೆಂದು ಜಾಲತಾಣದಲ್ಲಿ ಶೇರ್​ ಮಾಡಿಕೊಂಡಾಗ ಕೆಲವೊಮ್ಮೆ ಕಾನೂನು ಸಂಕಷ್ಟಕ್ಕೂ ಸಿಲುಕಿಕೊಳ್ಳುತ್ತೇವೆ. ಇನ್ನೂ ಚುನಾವಣೆ ಸಂದರ್ಭದಲ್ಲಿ ವೈರಲ್ ಆಗುವ ವಿಡಿಯೋಗಳಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎಂದು ಹೇಳುವುದು ತುಂಬಾ ಕಷ್ಟ. ತಾಜಾ ಸಂಗತಿ ಏನೆಂದರೆ, ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಿಂದ ಲೋಕಸಭಾ ಚುನಾವಣಾ ಕಣಕ್ಕಿಳಿದಿರುವ ಮಹುವಾ ಮೊಯಿತ್ರಾ ಅವರಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗುತ್ತಿದೆ. ಆದರೆ, ಈ ವಿಡಿಯೋದಲ್ಲಿ ಎಷ್ಟು ಸತ್ಯವಿದೆ ಎಂಬುದನ್ನು ನಾವೀಗ ತಿಳಿಯೋಣ.

Mahuva
ವೈರಲ್​ ವಿಡಿಯೋದಲ್ಲಿ ಏನಿದೆ? ಲೋಕಸಭಾ ಚುನಾವಣಾ ಪ್ರಚಾರದ ಭಾಗವಾಗಿ ತೆರೆದ ವಾಹನದಲ್ಲಿ ಪ್ರಚಾರ ನಡೆಸುತ್ತಿದ್ದ ಟಿಎಂಸಿ ಪಕ್ಷದ ಅಭ್ಯರ್ಥಿ ಮಹುವಾ ಮೊಯಿತ್ರಾ ಅವರನ್ನು ಸ್ಥಳೀಯ ಟಿವಿ ಚಾನೆಲ್​ವೊಂದು ಸಂದರ್ಶನ ಮಾಡಿದೆ. ಈ ವೇಳೆ ನಿಮ್ಮ ಶಕ್ತಿಗೆ ಕಾರಣವೇನು ಎಂದು ವರದಿಗಾರ, ಮಹುವಾ ಮೊಯಿತ್ರಾ ಅವರನ್ನು ಪ್ರಶ್ನಿಸುತ್ತಾರೆ. ಇದಕ್ಕೆ ತಕ್ಷಣ ಉತ್ತರಿಸುವಾಗ ಮೊಯಿತ್ರಾ ಹೇಳುವ ಸೆಕ್ಸ್ ಎಂಬ ಪದವು ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.

ವಿಡಿಯೋ ಅಸಲಿಯತ್ತೇನು? ಮಹುವಾ ಮೊಯಿತ್ರಾ ಮಾತನಾಡಿರುವ ವಿಡಿಯೋ ಕುರಿತು ಸತ್ಯಾಸತ್ಯತೆ ಪರಿಶೀಲನೆ ನಡೆಸಿದಾಗ ಅಸಲಿ ವಿಷಯ ಹೊರಬಿದ್ದಿದೆ. ಆ ವಿಡಿಯೋದಲ್ಲಿ ತಮ್ಮ ಶಕ್ತಿಯ ಗುಟ್ಟು ಮೊಟ್ಟೆ ಎಂದು ಉತ್ತರ ನೀಡಿದ್ದಾರೆ. ಮೊಯಿತ್ರಾ ಅವರು ಎರಡು ಬಾರಿ ಮೊಟ್ಟೆ ಎಂದು ಹೇಳಿದ್ದಾರೆ. ಎಗ್ಸ್ ಅಂತ ಇಂಗ್ಲಿಷ್​ನಲ್ಲಿ ಹೇಳಿದ್ದರಿಂದ ಕೇಳಲು ಅದು ಸ್ವಲ್ಪ ಅಸ್ಪಷ್ಟವಾಗಿದೆ. ನೀವು ಸ್ಲೋ ಮೋಷನ್ ಮೋಡ್‌ನಲ್ಲಿ ವಿಡಿಯೋವನ್ನು ನೋಡಿದರೆ, ಅವಳು ಎಗ್ಸ್​ ಎಂದು ಹೇಳುತ್ತಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಆದರೆ, ಸೆಕ್ಸ್​ ಎಂದು ಹೇಳಿದರು ಎಂದು ವಿಡಿಯೋವನ್ನು ವೈರಲ್​ ಮಾಡಲಾಗಿದೆ. ಇದರರ್ಥ ವೈರಲ್ ವಿಡಿಯೋ ತಪ್ಪುದಾರಿಗೆಳೆಯುತ್ತದೆ. ಈ ವಿಡಿಯೋ ಭಾರಿ ವೈರಲ್ ಆಗುತ್ತಿದ್ದಂತೆ ಮತ್ತು ಮಹುವಾ ಮೊಯಿತ್ರಾ ವಿರುದ್ಧ ತೀವ್ರ ಟೀಕೆಗಳು ಬರುತ್ತಿದ್ದಂತೆ, ಸಂದರ್ಶನ ನಡೆಸಿದ ವರದಿಗಾರ ತನ್ನ ಎಕ್ಸ್​ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಮಹುವಾ ಮೊಯಿತ್ರಾ ಅವರು ಈ ವಿಡಿಯೋದಲ್ಲಿ ಸೆಕ್ಸ್​ ಎಂದು ಹೇಳಲಿಲ್ಲ. ಆದರೆ, ಅವರು ಮೊಟ್ಟೆಗಳು ಎಂದು ಹೇಳಿದರು. ವಿಡಿಯೋವನ್ನು ತಿರುಚಲಾಗಿದೆ ಎಂದಿದ್ದಾರೆ. ಅಲ್ಲಿಗೆ ವಿಡಿಯೋ ಹಿಂದಿನ ಅಸಲಿ ಸತ್ಯ ಬಯಲಾಗಿದೆ.

ಅಂದಹಾಗೆ ಮಹುವಾ ಮೊಯಿತ್ರಾಗೆ ಸಂಬಂಧಿಸಿದ ವಿಡಿಯೋ ಕುರಿತು ಫ್ಯಾಕ್ಟ್​ಚೆಕ್​ ವೆಬ್​ಸೈಟ್​ ಬೂಮ್ ಸತ್ಯಾಸತ್ಯತೆಯನ್ನು ಪರಿಶೀಲಿಸಿದೆ. ಎಗ್ಸ್​ ಎಂಬ ಪದವು ಸೆಕ್ಸ್​ ಎಂದು ಕೇಳಿಸುತ್ತದೆ ಎಂದು ಬೂಮ್​ ತೀರ್ಮಾನಿಸಿದೆ. 12 ಸೆಕೆಂಡ್​ಗಳ ವಿಡಿಯೋದಲ್ಲಿ ‘ನಿಮ್ಮ ಶಕ್ತಿಯ ಗುಟ್ಟೇನು?’ ಎಂದು ವರದಿಗಾರ ಕೇಳಿದಾಗ ‘ಎಗ್ಸ್​, ಎಗ್ಸ್​’ ಎಂದು ಮೊಯಿತ್ರಾ ಎರಡು ಬಾರಿ ಉತ್ತರಿಸಿದ್ದಾರೆ. ಇದನ್ನು ಕೇಳಿ ವರದಿಗಾರ ನಕ್ಕರು. ಅವಳು ಹೇಳಿದ್ದು ನಿಜ. ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಅದರಲ್ಲಿ ಎಗ್ಸ್​ ಬದಲಿಗೆ ಸೆಕ್ಸ್ ಎಂದು ಶೀರ್ಷಿಕೆ ನೀಡಿದ್ದಾರೆ. ಕೆಲವರು ಇದನ್ನು ನಿಜವೆಂದು ನಂಬಿದ್ದರು. ಆದರೆ, ಆದರೆ ವಾಸ್ತವಾಂಶವನ್ನು ಪರಿಶೀಲಿಸಿದಾಗ ಅದು ಸುಳ್ಳು ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net