More

    ನೋಬಾಲ್​ ಆಗಿದ್ರೂ ಔಟ್​ ನೀಡಿದ್ರು ಅಂತ ವಿರಾಟ್​ ಕೊಹ್ಲಿ ಆಕ್ರೋಶ: ಆದ್ರೆ ಐಸಿಸಿ ನಿಯಮ ಹೇಳುವುದೇನು?

    ಕೋಲ್ಕತ್ತ: ನಿನ್ನೆ (ಏಪ್ರಿಲ್​ 21) ಕೋಲ್ಕತ್ತ ನೈಟ್​ ರೈಡರ್ಸ್ (ಕೆಕೆಆರ್​) ವಿರುದ್ಧ ನಡೆದ ಪಂದ್ಯದಲ್ಲಿ ತನ್ನ ವಿವಾದಿತ ಔಟ್​ ಅನ್ನು ಪ್ರಶ್ನಿಸಿ, ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡದ ಸ್ಟಾರ್​ ಬ್ಯಾಟ್ಸ್​ಮನ್ ವಿರಾಟ್​ ಕೊಹ್ಲಿ ಅವರು ಮೈದಾನದಲ್ಲೇ ಅಂಪೈರ್​ಗಳ ಜತೆ ವಾಗ್ವಾದಕ್ಕೆ ಇಳಿದ ಪ್ರಸಂಗ ಜರುಗಿತು.

    ಆರ್​ಸಿಬಿ ಇನ್ನಿಂಗ್ಸ್​ನ ಮೂರನೇ ಓವರ್​ನಲ್ಲಿ ಕೊಹ್ಲಿ ಅವರು ಹರ್ಷಿತ್​ ರಾಣಾ ಎಸೆದ ಫುಲ್​ಟಾಸ್​ ಬಾಲ್​ ಅನ್ನು ಬಲವಾಗಿ ಹೊಡೆಯಲು ಹೋಗಿ ಕ್ಯಾಚಿತ್ತರು. ಈ ವೇಳೆ ಕೆಕೆಆರ್​ ತಂಡ ಕುಣಿದು ಕುಪ್ಪಳಿಸಿತು. ಆದರೆ, ಕೊಹ್ಲಿ ಮಾತ್ರ ತಕ್ಷಣ ರಿವ್ಯೂ ಪಡೆದರು. ಚೆಂಡು ಸೊಂಟದ ಮೇಲಿತ್ತು ಹೀಗಾಗಿ ಅದು ನೋಬಾಲ್​ ಎಂಬುದು ಕೊಹ್ಲಿ ಅವರ ವಾದವಾಗಿತ್ತು. ಆದರೆ, ಚೆಂಡು ಕೆಳಮುಖವಾಗಿದ್ದರಿಂದ ಥರ್ಡ್​ ಅಂಪೈರ್​ ಮೈಕೆಲ್ ಗಾಫ್ ಅದು ಸರಿಯಾದ ಎಸೆತ ನಿರ್ಧರಿಸಿದರು.

    ರಿವ್ಯೂನಲ್ಲಿ ಔಟ್​ ಎಂದು ತೀರ್ಮಾನ ಬಂದಿದ್ದರಿಂದ ಕೊಹ್ಲಿ ಬೇಸರಗೊಂಡರು. ಈ ವೇಳೆ ನಾಯಕ ಫಾಫ್​ ಡುಪ್ಲಿಸಿಸ್​ ಸೇರಿದಂತೆ ಕೊಹ್ಲಿ ಅಂಪೈರ್​ಗಳ ಜತೆ ವಾಗ್ವಾದಕ್ಕೆ ಇಳಿದರು. ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊಹ್ಲಿ ಅವರು ಡಗೌಟ್​ಗೆ ಮರಳುವಾಗ ಅವರ ಮುಖದಲ್ಲಿ ಕೋಪ ಎದ್ದು ಕಾಣುತ್ತಿತ್ತು. ಔಟ್​ ಎಂಬ ಅಂಪೈರ್​ ತೀರ್ಮಾನ ನಿಜಕ್ಕೂ ಒಪ್ಪುವಂಥದ್ದಲ್ಲ ಎಂಬ ಭಾವನೆ ಕೊಹ್ಲಿ ಅವರಲ್ಲಿತ್ತು.

    ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ (ಐಸಿಸಿ)ಯ 41.7.1 ಕಾನೂನಿನ ಪ್ರಕಾರ, ಕ್ರೀಸ್‌ನಲ್ಲಿ ನೇರವಾಗಿ ನಿಂತಿರುವ ಸ್ಟ್ರೈಕರ್‌ನ ಸೊಂಟದ ಎತ್ತರದಲ್ಲಿ ಪಿಚ್ ಮಾಡದೆಯೇ ಹಾದುಹೋಗುವ ಎಸೆತವನ್ನು ನೋಬಾಲ್​ ಎಂದು ಪರಿಗಣಿಸಬೇಕು. ಬೌಲರ್​ ಇಂಥಾ ಎಸೆತವನ್ನು ಎಸೆದಾಗ ಅಂಪೈರ್​ ಕೂಡಲೇ ನೋಬಾಲ್​ ಎಂದು ನಿರ್ಣಯಿಸಬೇಕು.

    ಚೆಂಡು ತನ್ನ ಬ್ಯಾಟ್‌ನೊಂದಿಗೆ ಸಂಪರ್ಕಕ್ಕೆ ಬಂದಾಗ ಅದು ತನ್ನ ಸೊಂಟದ ಮೇಲಿತ್ತು ಎಂದು ಕೊಹ್ಲಿ ವಾದಿಸಿದರು. ಆದರೆ, ಚೆಂಡು ಕೆಳಮುಖವಾಗಿರುವುದನ್ನು ರಿವ್ಯೂ ತೋರಿಸಿತು. ಕೊಹ್ಲಿ ಅವರು ಸಾಮಾನ್ಯ ಬ್ಯಾಟಿಂಗ್ ಸ್ಥಾನದಲ್ಲಿ ನಿಂತಿದ್ದರೆ ಚೆಂಡು ಸೊಂಟದ ಕೆಳಗೆ ಬರುತ್ತಿತ್ತು ಎಂಬುದು ಥರ್ಡ್​ ಅಂಪೈರ್​ ವಾದವಾಗಿತ್ತು. ಅಲ್ಲದೆ, ಬ್ಯಾಟ್​ ಮಾಡುವಾಗ ಕೊಹ್ಲಿ ಕ್ರೀಸ್​ನಿಂದ ಹೊರಗೆ ನಿಂತಿದ್ದರಿಂದ ಅಂಪೈರ್​ ತೀರ್ಪು ಬೌಲರ್ ಪರವಾಗಿ ಬಂದಿತು.​ ಅಂತಿಮವಾಗಿ ಅಂಪೈರ್​ ಸರಿಯಾದ ಎಸೆತ ಎಂದು ತೀರ್ಮಾನಿಸಿದ ಬಳಿಕ ಕೊಹ್ಲಿ ಡಗೌಟ್​ಗೆ ಮರಳಿದರು.

    ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ (ಏಪ್ರಿಲ್​ 21) ಈಡನ್ ಗಾರ್ಡ್​ನ್ಸ್​ನಲ್ಲಿ ನಡೆದ ಐಪಿಎಲ್ 2024ರ 36 ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್‌ ರೈಡರ್ಸ್‌, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವನ್ನು 1 ರನ್‌ಗಳಿಂದ ಸೋಲಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2024ರಲ್ಲಿ ಸೋಲಿನ ಕೂಪದಿಂದ ಎದ್ದುಬರಲು ಮತ್ತೊಮ್ಮೆ ವಿಫಲವಾಗಿದೆ. ಪ್ಲೇ ಆಫ್ ಹಂತ ತಲುಪುವ ಕನಸು ಬಹುತೇಕ ಅಂತ್ಯಗೊಂಡಂತಾಗಿದೆ. ಆಡಿದ 8 ಪಂದ್ಯಗಳಲ್ಲಿ 7 ಸೋಲು ಮತ್ತು 1 ಗೆಲುವು ಸಾಧಿಸಿದ್ದು, ಕೇವಲ 2 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲೇ ಮುಂದುವರೆದಿದೆ.

    ಆರ್​ಸಿಬಿ ತಂಡದ ವಿಲ್ ಜಾಕ್ಸ್ ಹಾಗೂ ರಜತ್ ಪಾಟಿದಾರ್ ಅರ್ಧಶತಕದ ಕೊಡುಗೆ, ಸ್ಪಿನ್ ಬೌಲರ್​ ಕರಣ್‌ ಶರ್ಮಾ ಮಿಂಚಿನ ಬ್ಯಾಟಿಂಗ್ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಕೇವಲ ಒಂದು ರನ್ ಅಂತರದಿಂದ ವಿರೋಚಿತ ಸೋಲು ಅನುಭವಿಸಿದೆ. ಕೆಕೆಆರ್​ ನೀಡಿದ 223 ರನ್ ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ 20 ಓವರ್​ಗಳಲ್ಲಿ 221 ರನ್ ಗಳಿಸಿ ಆಲೌಟಾಯಿತು. (ಏಜೆನ್ಸೀಸ್​)

    ನಾ ಕೊಟ್ಟ ಬ್ಯಾಟ್​ ಮುರಿದುಬಿಟ್ಟಾ? ರಿಂಕು ಸಿಂಗ್​ ವಿರುದ್ಧ ಕೊಹ್ಲಿ ಗರಂ, ಆಣೆ ಮಾಡ್ತೀನಿ ಅಂದ್ರು ಒಪ್ಪದ ವಿರಾಟ್​

    ಹಾರ್ದಿಕ್​ ಪಾಂಡ್ಯಗೆ ನಾಯಕತ್ವ ಸಿಗಲು ರೋಹಿತ್​ ಶರ್ಮ ಕಾರಣ! ರಾಬಿನ್​ ಉತ್ತಪ್ಪ ಸ್ಪೋಟಕ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts