

ಆಂಧ್ರಪ್ರದೇಶ: ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮತ್ತು ಸ್ಯಾಂಡಲ್ವುಡ್ ನಟಿ ಶ್ರೀಲೀಲಾ ಮುಖ್ಯಭೂಮಿಕೆಯಲ್ಲಿರುವ ಬಹುನಿರೀಕ್ಷಿತ 'ಗುಂಟೂರು ಕಾರಂ' ಬಿಡುಗಡೆಗೊಂಡು ಸದ್ಯ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಕಾಣುತ್ತಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆಗಳ ನಡುವೆ ಸಿಕ್ಕ ಗಳಿಕೆಯ ಸಂತಸದಲ್ಲಿರುವ ಚಿತ್ರತಂಡ ಇದೀಗ ಮಹೇಶ್ ಬಾಬು ಪುತ್ರಿಯ ಮಾತಿನ ಮೇರೆಗೆ ಅನಾಥ ಮಕ್ಕಳಿಗೆಂದು ವಿಶೇಷ ಶೋ ಏರ್ಪಡಿಸಿತ್ತು.
ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಈ ಚಿತ್ರವನ್ನು ಅನಾಥ ಮಕ್ಕಳಿಗಾಗಿ ತೋರಿಸಬೇಕು ಎಂದು ನಿರ್ಧರಿಸಿದ ಮಹೇಶ್ ಬಾಬು ಅವರ ಪುತ್ರಿ ಸಿತಾರಾ ಘಟ್ಟಮನೇನಿ, ವಿಶೇಷ ಪ್ರದರ್ಶನವನ್ನು ಹೈದರಾಬಾದ್‌ನ ಎ.ಎಂ.ಬಿ ಸಿನಿಮಾಸ್‌ನಲ್ಲಿ ಆಯೋಜಿಸಿದ್ದರು. ಸಿನಿಮಾ ವೀಕ್ಷಿಸಿದ ಮಕ್ಕಳೊಂದಿಗೆ ಸಿತಾರಾ ಕ್ಲಿಕ್ಕಿಸಿಕೊಂಡ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಮಹೇಶ್ ಬಾಬು ಪುತ್ರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಿನ್ಸ್ ಅಭಿಮಾನಿಗಳು, ಚಿತ್ರಕ್ಕೆ ಒಳಿತಾಗಲಿ ಎಂದು ಆಶಿಸಿದ್ದಾರೆ. ಸಿನಿ ಮೂಲಗಳ ಪ್ರಕಾರ, ಚಿತ್ರವು ಇಲ್ಲಿಯವರೆಗೆ ಬಾಕ್ಸ್ ಆಫೀಸ್ನಲ್ಲಿ 200 ಕೋಟಿ ರೂ. ಕಲೆಕ್ಷನ್ ದಾಟಿದ್ದು, ಗಳಿಕೆಯನ್ನು ಮುಂದುವರೆಸಿದೆ. ಚಿತ್ರದಲ್ಲಿ ಮೀನಾಕ್ಷಿ ಚೌಧರಿ, ರಮ್ಯಾ ಕೃಷ್ಣನ್, ಪ್ರಕಾಶ್ ರಾಜ್, ಈಶ್ವರಿ ರಾವ್, ವೆನ್ನೆಲ ಕಿಶೋರ್ ಮುಂತಾದವರ ತಾರಾಗಣವಿದೆ. ಚಿತ್ರಕ್ಕೆ ಥಮನ್ ಅವರ ಸಂಗೀತವಿದೆ,(ಏಜೆನ್ಸೀಸ್).