

Plaster Of Paris: ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿಗಳ ವಿಸರ್ಜನೆ ಕುರಿತು ಮಹಾರಾಷ್ಟ್ರ ಸರ್ಕಾರ ಶುಕ್ರವಾರ (ಆ.02) ಆದೇಶ ಹೊರಡಿಸಿದ್ದು, 6 ಅಡಿಗಿಂತ ಕಡಿಮೆ ಎತ್ತರದ ಗಣಪತಿ ಮೂರ್ತಿಗಳನ್ನು ಕೃತಕ ಕೊಳ, ಬಾವಿಗಳಲ್ಲಿ ವಿಸರ್ಜಿಸಬೇಕು ಎಂದು ತಿಳಿಸಿದೆ.
ಪಿಒಪಿ ವಸ್ತುಗಳನ್ನು ಪರಿಸರ ಸ್ನೇಹಿ ರೂಪದಲ್ಲಿ ಮರುಬಳಕೆ ಮಾಡುವುದು, ಅದರ ತ್ವರಿತ ಕರಗುವಿಕೆಯನ್ನು ಹೇಗೆ ಮಾಡೋದು? ಎಂದು ಸೂಚಿಸಲು 8 ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಲು ಪರಿಸರ ಇಲಾಖೆಗೆ ಆದೇಶಿಸಿದೆ.
ಈ ಸಮಿತಿಯು ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿದ್ದು, ರಾಸಾಯನಿಕ ತಂತ್ರಜ್ಞಾನ ಸಂಸ್ಥೆ ಮತ್ತು IIT (ಮುಂಬೈ), ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯ (ಪುಣೆ), ರಾಜೀವ್ ಗಾಂಧಿ ವಿಜ್ಞಾನ ಮತ್ತು ತಂತ್ರಜ್ಞಾನ ಮಿಷನ್, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಪುಣೆ) ಪ್ರಾದೇಶಿಕ ಅಧಿಕಾರಿ ಮತ್ತು ಎಂಪಿಸಿಬಿ ಯ ಜಂಟಿ ನಿರ್ದೇಶಕ ಸದಸ್ಯರನ್ನು ಒಳಗೊಂಡಿರುತ್ತದೆ.
ಮಾರ್ಗಸೂಚಿಗಳ ಪ್ರಕಾರ, ಸ್ಥಳಿಯ ಸಂಸ್ಥೆಗಳು ಕುಶಲಕರ್ಮಿಗಳು ತಯಾರಿಸಿದ ಮತ್ತು ಮಾರಾಟ ಮಾಡುವ ಪಿಒಪಿ ವಿಗ್ರಹಗಳ ನಿಖರವಾದ ಸಂಖ್ಯೆಯ ವಿವರಗಳನ್ನು ನಿರ್ವಹಿಸುತ್ತದೆ. ಪ್ರತಿಯೊಂದು ವಿಗ್ರಹಗಳು ಪಿಒಪಿಗಳಿಂದಲೇ ಮಾಡಲ್ಪಟ್ಟಿದೆಯೇ ಎಂದು ಸೂಚಿಸಲು ಕೆಂಪು ಚುಕ್ಕೆಯನ್ನು ಗುರುತಿಸಲಾಗುತ್ತದೆ. ಮಾರಾಟಗಾರರು ಖರೀದಿದಾರರು ಈ ವಿಗ್ರಹಗಳನ್ನು ಹೇಗೆ ವಿಸರ್ಜಿಸಬೇಕು ಎಂದು ಕರಪತ್ರವನ್ನು ನೀಡಬೇಕು ಎಂದು ತಿಳಿಸಿದ್ದಾರೆ.
ಸಣ್ಣ ವಿಗ್ರಹಗಳಿಗೆ, ಸ್ಥಳೀಯ ಸಂಸ್ಥೆಗಳು ಕೃತಕ ಕೊಳಗಳ ಸೌಲಭ್ಯ ಒದಗಿಸುತ್ತಿದ್ದು, 6 ಅಡಿಗಿಂತ ಎತ್ತರದ ವಿಗ್ರಹಗಳಿಗೆ ಕೃತಕ ಕೊಳಗಳ ಸೌಲಭ್ಯ ಇಲ್ಲದಿದ್ದರೆ ಜಲಮೂಲಗಳನ್ನು ಗೊತ್ತುಪಡಿಸಲಾಗುತ್ತದೆ. ಅಲ್ಲಿಯೇ ವಿಸರ್ಜನೆ ಮಾಡಬೇಕು. ಅಲ್ಲಿಂದ ಸ್ಥಳೀಯ ಸಂಸ್ಥೆಗಳು ಆ ವಿಗ್ರಹಗಳನ್ನು ಮರುದಿನ ಸಂಗ್ರಹಿಸಲಾಗುತ್ತದೆ. ಎಂದು ಮಾರ್ಗಸೂಚಿಗಳಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್)