ಜಮ್ಮು-ಕಾಶ್ಮೀರದಲ್ಲಿ ಮತ್ತೊಬ್ಬ ಉಗ್ರನನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು|Terrorists

CRPF
Published on

Terrorists: ದಕ್ಷಿಣ ಕಾಶ್ಮೀರದ ಕುಲ್ಗಾಮ್​ನ ಅಖಾಲ್ ಅರಣ್ಯ ಪ್ರದೇಶದಲ್ಲಿ ತಡರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಮತ್ತೊಬ್ಬ ಭಯೋತ್ಪಾದಕನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.

ಭಾರತೀಯ ಸೇನೆ ಚಿನಾರ್ ಕಾರ್ಪ್ಸ್​ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದು, "ರಾತ್ರಿಯಿಡೀ ಎರಡೂ ಕಡೆಯಿಂದ ನಿರಂತರ ಗುಂಡಿನ ಚಕಮಕಿ ನಡೆದಿದೆ. ಸ್ಥಳದಲ್ಲಿ ಇನ್ನೂ ಕಾರ್ಯಾಚರಣೆ ಮುಂದುವರೆದಿದ್ದು, ಓರ್ವ ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿದೆ" ಎಂದು ಮಾಹಿತಿ ನೀಡಿದೆ.

ಕುಲ್ಗಾಮ್‌ನ ಅಖಾಲ್ ಅರಣ್ಯದಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಭಾರತೀಯ ಸೇನೆ, ಸಿಆರ್​ಪಿಫ್ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿವೆ ಎನ್ನಲಾಗಿದೆ. ಭದ್ರತಾ ಪಡೆಗಳು ಉಗ್ರರಿರುವ ಪ್ರದೇಶದ ಬಳಿ ತೆರಳಿ ಶೋಧ ಕಾರ್ಯ ನಡೆಸುವಾಗ ಗುಂಡಿನ ಚಕಮಕಿ ನಡದಿದೆ.

ಭದ್ರತಾ ಪಡೆಯ ಅಧಿಕಾರಿಗಳ ಪ್ರಕಾರ ಇನ್ನೂ 3-4 ಉಗ್ರರ ಗುಂಪು ಈ ಪ್ರದೇಶದಲ್ಲಿದ್ದು,ಸೇನೆ ಸುತ್ತುವರಿದ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿರಬಹುದು ಎಂದು ಶಂಕಿಸಿದ್ದಾರೆ. ಸ್ಥಳಕ್ಕೆ ಇನ್ನು ಹೆಚ್ಚುವರಿ ಭದ್ರತಾ ಪಡೆಗಳು, ವೈಮಾನಿಕ ಕಣ್ಗಾವಲುಗಾಗಿ ಇತರ ಉಪಕರಣಗಳನ್ನು ರವಾನಿಸಲಾಗಿದೆ.

ಶ್ರೀನಗರದ ಹೊರವಲಯದಲ್ಲಿರುವ ಹರ್ವಾನ್‌ನ ದಚಿಗಮ್ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಎನ್‌ಕೌಂಟರ್ ನಂತರ ಹೊಸ ಬೆಳವಣಿಗೆ ಸಂಭವಿಸಿದೆ. ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಲಷ್ಕರ್-ಎ-ತೊಯ್ಬಾದ ಮೂವರು ಪಾಕಿಸ್ತಾನಿ ಉಗ್ರರು ಸಾವನ್ನಪ್ಪಿದ್ದಾರೆ. ಹತ್ಯೆಯಾದ ಮೂವರಲ್ಲಿ ದಾಳಿಯ ಮಾಸ್ಟರ್ ಮೈಂಡ್ ಎಂದು ಹೇಳಲಾಗುವ ಸುಲೇಮಾನ್ ಶಾ ಕೂಡ ಸೇರಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net