ಪವಾರ್​ ಬಾಂಬ್​ಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಕಿಡಿ | Devendra Fadnavis

Sharad pawar fadnavis
Published on

Devendra Fadnavis: ಮಹಾರಾಷ್ಟ್ರ ಚುನಾವಣೆಯ ಕುರಿತು ಅನುಮಾನದ ಮಾತುಗಳನ್ನಾಡಿರುವ ಎನ್​ಸಿಪಿ ಹಿರಿಯ ನಾಯಕ ಶರದ್​ ಪವಾರ್ ಹೇಳಿಕೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತೀರುಗೇಟು ನೀಡಿದ್ದು, ವಿರೋಧ ಪಕ್ಷಗಳು ಸುಳ್ಳು ಹೇಳಿ ಓಡಿಹೋಗುವ ಅಭ್ಯಾಸ ರೂಡಿಸಿಕೊಂಡಿವೆ ಎಂದರು.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಇವಿಎಂಗಳ ಬಗ್ಗೆ ಆಗಾಗ್ಗೆ ಅನುಮಾನಗಳನ್ನು ವ್ಯಕ್ತಪಡಿಸುತ್ತಾರೆ, ಈ ವಿಷಯವಾಗಿ ಹಿರಿಯ ನಾಯಕ ಶರದ್ ಪವಾರ್ ಇವಿಎಂಗಳನ್ನು ದೂಷಿಸುವುದು ತಪ್ಪು ಎಂಬ ಸ್ಪಷ್ಟ ನಿಲುವನ್ನು ಈ ಹಿಂದೆ ತೆಗೆದುಕೊಂಡಿದ್ದರು ಎಂದರು.

ಇತ್ತೀಚೆಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ನಂತರ ವರಸೆ ಬದಲಿಸಿರುವ ಪವಾರ್ ಇದ್ದಕ್ಕಿದ್ದಂತೆ ಮತದಾನ ಪ್ರಕ್ರಿಯೆಯಲ್ಲಿನ ಬದಲಾವಣೆಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ, ಇದು ರಾಹುಲ್​​ ಸಭೆಯ ಫಲಿತಾಂಶವಾಗಿದೆ ಎಂದು ಫಡ್ನವೀಸ್ ವ್ಯಂಗ್ಯವಾಡಿದರು.

ವಿರೋಧ ಪಕ್ಷಗಳು ಎಷ್ಟೇ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡಿದರು ಜನ ಇದನ್ನು ನಂಬುವುದಿಲ್ಲ, ಭಾರತದಲ್ಲಿ ಚುನಾವಣೆಗಳು ಪಾರದರ್ಶಕವಾಗಿ ನಡೆಯುವಂತೆ ಬೇರೆ ಎಲ್ಲಿಯೂ ನಡೆಯಲು ಸಾಧ್ಯವಿಲ್ಲ ಎಂದರು.

ಇವಿಎಂಗಳು ಮತ್ತು ಚುನಾವಣಾ ಆಯೋಗದ ಮೇಲೆ ಆರೋಪ ಮಾಡುವವರು ಸಾರ್ವಜನಿಕವಾಗಿ ಮಾತನಾಡುತ್ತಾರೆ ಆದರೆ ಅಫಿಡವಿಟ್ ನೀಡಲು ಸಿದ್ಧರಿಲ್ಲ. ನಾವು ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದೇವೆ ಎಂದು ಹೇಳುತ್ತಾರೆ. ನ್ಯಾಯಾಲಯಗಳು ಇಂದಲ್ಲ ನಾಳೆ ಅವರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬಹುದು ಎಂಬ ಭಯ ಅವರಿಗೆ ಇರುವುದರಿಂದಲೇ ಪ್ರತಿದಿನ ಸುಳ್ಳು ಹೇಳಿ ಓಡಿಹೋಗುತ್ತಾರೆ ಎಂದು ಟೀಕಿಸಿದರು.

ಶರದ್​ ಪವಾರ್​ ಹೇಳಿದ್ದೇನು?

2024 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುನ್ನ ದೆಹಲಿಯಲ್ಲಿ ಇಬ್ಬರು ವ್ಯಕ್ತಿಗಳು ತಮ್ಮನ್ನು ಭೇಟಿಯಾಗಿ 288 ಸ್ಥಾನಗಳಲ್ಲಿ 160 ಸ್ಥಾನಗಳನ್ನು ಗೆಲ್ಲಲು ಕಾಂಗ್ರೆಸ್ ಮೈತ್ರಿಕೂಟಕ್ಕೆ ಸಹಾಯ ಮಾಡುವುದಾಗಿ ಆಫರ್ ನೀಡಿದ್ದರು ಎಂದು ಪವಾರ್ ಶನಿವಾರ(ಆಗಸ್ಟ್ 9) ಬೆಳಿಗ್ಗೆ  ಹೇಳಿಕೊಂಡಿದ್ದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net