ಮಹಾರಾಷ್ಟ್ರ ಚುನಾವಣೆಯ ಕುರಿತು ಹೊಸ ಬಾಂಬ್​ ಸಿಡಿಸಿದ ಎನ್​​ಸಿಪಿ ಮುಖ್ಯಸ್ಥ ಶರದ್ ಪವಾರ್! | Sharad Pawar

SharadPawar
Published on

Sharad Pawar: ದೇಶದಲ್ಲಿ ಮತಗಳ್ಳತನದ ಕುರಿತು ತೀವ್ರ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್​ಸಿಪಿ) ಮುಖ್ಯಸ್ಥ ಶರದ್ ಪವಾರ್ ಹೊಸ ಬಾಂಬ್ ಸಿಡಿಸಿದ್ದಾರೆ.

ನಾಗ್ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುನ್ನ ಇಬ್ಬರು ವ್ಯಕ್ತಿಗಳು ತಮ್ಮನ್ನು ಸಂಪರ್ಕಿಸಿ 288 ಸ್ಥಾನಗಳಲ್ಲಿ 160 ಸ್ಥಾನಗಳನ್ನು ಗೆಲ್ಲಿಸಿಕೊಡುವ ಭರವಸೆ ನೀಡಿದ್ದರು ಎಂಬ ಅಚ್ಚರಿಯ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಆ ಇಬ್ಬರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಭೇಟಿ ಮಾಡಿಸಿ, ಸಭೆ ನಡೆಸಲು ಅನುಕೂಲ ಮಾಡಿಕೊಟ್ಟೆ, ರಾಹುಲ್ ಗಾಂಧಿ ಮತ್ತು ತಾವೂ ಇಬ್ಬರೂ ಅಂತಹ ವಿಷಯಗಳಿಗೆ ಹೆಚ್ಚಿಗೆ ಗಮನ ನೀಡದೆ ನಿರ್ಲಕಸ್ಷಿಸಿದೆವು ಎಂದರು.

ಆ ಸಮಯದಲ್ಲಿ ಚುನಾವಣಾ ಆಯೋಗದ ಬಗ್ಗೆ ತಮಗೆ ಯಾವುದೇ ಅನುಮಾನಗಳಿರಲಿಲ್ಲ ಎನ್ನುವುದನ್ನು ಪವಾರ್ ಸ್ಪಷ್ಟಪಡಿಸಿದರು. ಅನ್ಯಾಯದ ಮಾರ್ಗದಿಂದ ಚುನಾವಣೆ ಗೆಲ್ಲುವುದು ನಮ್ಮ ಧ್ಯೇಯವಾಗಿರಲಿಲ್ಲ ಎಂದ ಪವಾರ್​​,  ಜನರ ಮುಂದೆ ಹೋಗಿ ಅವರ ಬೆಂಬಲವನ್ನು ಗಳಿಸುವ ಮಾರ್ಗಗಳನ್ನು ಕಂಡುಕೊಳ್ಳಲು ಆ ಸಮಯದಲ್ಲಿ ನಿರ್ಧರಿಸಿದ್ದನ್ನು ತಿಳಿಸಿದರು.

ಆಯೋಗವನ್ನು ಟೀಕಿಸಿ ರಾಹುಲ್​ ಗಾಂಧಿಯನ್ನು ಶ್ಲಾಘಿಸಿದ ಶರದ್​ ಪವಾರ್​​

ರಾಹುಲ್ ಗಾಂಧಿ ಚುನಾವಣಾ ಅಕ್ರಮಗಳ ಕುರಿತು ಮಾತನಾಡಿದ್ದನ್ನು ಶ್ಲಾಘಿಸಿದ ಶರದ್​ ಪವಾರ್​​, ವಿಪಕ್ಷ ನಾಯಕರಿಂದ ಪ್ರತ್ಯೇಕ ಅಫಿಡವಿಟ್ ಕೋರಿದ್ದಕ್ಕಾಗಿ ಭಾರತೀಯ ಚುನಾವಣಾ ಆಯೋಗವನ್ನು (ಇಸಿಐ) ಟೀಕಿಸಿದರು. ಚುನಾವಣಾ ಆಯೋಗವು ಸ್ವತಂತ್ರ ಸಂಸ್ಥೆಯಾಗಿದ್ದು, ರಾಹುಲ್ ಗಾಂಧಿ ಅವರು ಈಗಾಗಲೇ ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ, ಆದ್ದರಿಂದ ಪ್ರತ್ಯೇಕ ಅಫಿಡವಿಟ್ ಅಗತ್ಯವಿಲ್ಲ ಎಂದು ಹೇಳಿದರು. ರಾಹುಲ್ ಆರೋಪಗಳು ಗಂಭೀರವಾಗಿದ್ದು, ಈ ವಿಷಯದ ಬಗ್ಗೆ ಸಮಗ್ರ ತನಿಖೆ ನಡೆದು ಸತ್ಯ ಹೊರಬರಬೇಕು ಎಂದರು.

ನಮ್ಮ ಆಕ್ಷೇಪಣೆ ಇರುವುದು ಚುನಾವಣಾ ಆಯೋಗದ ಬಗ್ಗೆ, ಆದರೆ ಬಿಜೆಪಿ ನಾಯಕರು ಏಕೆ ಪ್ರತಿಕ್ರಿಯಿಸಬೇಕು? ನಮಗೆ ಉತ್ತರ ಬೇಕಿರುವುದು ಚುನಾವಣಾ ಆಯೋಗದಿಂದಲೇ ಹೊರತು ಬಿಜೆಪಿಯಿಂದಲ್ಲ ಎಂದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net