ಖಾಸಗಿ ಶಾಲೆಗಳ ಅನಿಯಂತ್ರಿತ ಶುಲ್ಕ ಹೆಚ್ಚಳಕ್ಕೆ ದೆಹಲಿ ಸರ್ಕಾರದ ಮೂಗುದಾರ; ಏನು ಹೇಳುತ್ತೆ ಹೊಸ ಮಸೂದೆ? | Delhi Government

Delhi Government
Published on

Delhi Government: ದೆಹಲಿ ವಿಧಾನಸಭೆ ಶುಕ್ರವಾರ(ಆಗಸ್ಟ್ 8) ದೆಹಲಿ ಶಾಲಾ ಶಿಕ್ಷಣ (ಶುಲ್ಕ ನಿಗದಿ ಮತ್ತು ನಿಯಂತ್ರಣದಲ್ಲಿ ಪಾರದರ್ಶಕತೆ) ಮಸೂದೆ 2025 ಅನ್ನು ಅಂಗೀಕರಿಸಿದ್ದು, ರಾಜ್ಯದ ಖಾಸಗಿ ಶಾಲೆಗಳು ಬೋಧನಾ ಶುಲ್ಕವನ್ನು ಹೆಚ್ಚಿಸುವ ಮೊದಲು ಸರ್ಕಾರದ ಅನುಮೋದನೆಯನ್ನು ಪಡೆಯುವುದು ಕಡ್ಡಾಯಗೊಳಿಸಿದೆ.

ಈ ವಿಷಯವಾಗಿ ಮಾತನಾಡಿರುವ ದೆಹಲಿ ಶಿಕ್ಷಣ ಸಚಿವ ಆಶಿಶ್ ಸೂದ್, ಸರ್ಕಾರದ ಅನುಮತಿಯಿಲ್ಲದೆ ಯಾವುದೇ ಶಾಲೆಯು ಶುಲ್ಕವನ್ನು ಹೆಚ್ಚಿಸಲು ಸಾಧ್ಯವಿಲ್ಲ, ಹೊಸ ಮಸೂದೆಯು ದೆಹಲಿಯ ಪೋಷಕರಿಗೆ ಅನಿಯಂತ್ರಿತ ಶುಲ್ಕ ಹೆಚ್ಚಳದ ಬಗೆಗಿನ ಕಳವಳಗಳನ್ನು ದೂರಮಾಡಲಾಗುವುದು ಎಂಬ ಭರವಸೆ ನೀಡಿದರು. ಈ ಕಾಯ್ದೆಯನ್ನು ಜಾರಿಗೊಳಿಸುವುದರಿಂದ ನಮ್ಮ ಶಿಕ್ಷಣ ವ್ಯವಸ್ಥೆ ನ್ಯಾಯಯುತತೆಯ ಕಡೆಗೆ ಬಲವಾದ ಹೆಜ್ಜೆ ಇಡಲಿದೆ ಎಂದರು.

ಈ ಹಿಂದೆ, ಸರ್ಕಾರದಿಂದ ಹಂಚಿಕೆಯಾದ ಭೂಮಿಯಲ್ಲಿರುವ ಸುಮಾರು 350 ಶಾಲೆಗಳು ಮಾತ್ರ ಶುಲ್ಕ ಪರಿಷ್ಕರಣೆಗೆ ಸರ್ಕಾರದ ಅನುಮತಿ ಪಡೆಯಬೇಕಾಗಿತ್ತು. ಆದರೆ ಹೊಸ ಮಸೂದೆಯು ಈ ನಿಯಮಗಳನ್ನು ನಗರದ ಎಲ್ಲಾ 1,443 ಖಾಸಗಿ ಅನುದಾನರಹಿತ ಶಾಲೆಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿದುಬಂದಿದೆ.

ಸೀಮಿತ ವ್ಯಾಪ್ತಿಯೊಂದಿಗೆ 1973 ರ ಕಾನೂನು ಬದಲಾವಣೆ

ಈ ಮಸೂದೆಯು 1973 ರ ದೆಹಲಿ ಶಾಲಾ ಶಿಕ್ಷಣ ಕಾಯ್ದೆ ಮತ್ತು ನಿಯಮಗಳ ಅಡಿಯಲ್ಲಿರುವ ನಿಬಂಧನೆಗಳನ್ನು ಬದಲಾಯಿಸುತ್ತದೆ. ನ್ಯಾಯಾಲಯದ ಆದೇಶಗಳಿಂದ ರೂಪುಗೊಂಡ ಹಳೆಯ ನಿಯಮಗಳು, ಕೇವಲ ಒಂದು ಸಣ್ಣ ಗುಂಪಿನ ಸಂಸ್ಥೆಗಳನ್ನು ಮಾತ್ರ ಒಳಗೊಂಡಿದ್ದು, ಬಹುಪಾಲು ಸಂಸ್ಥೆಗಳು ಮೇಲ್ವಿಚಾರಣೆಯಿಲ್ಲದೆ ಶುಲ್ಕವನ್ನು ಹೆಚ್ಚಿಸಲು ಮುಕ್ತವಾಗಿದ್ದವು ಎಂದು ತಿಳಿದುಬಂದಿದೆ.

ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ, ಹಲವಾರು ಶಾಲೆಗಳು ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿ ಶುಲ್ಕವನ್ನು ಹೆಚ್ಚಿಸಿದ್ದವು ಎಂದು ವರದಿಯಾಗಿದೆ.

ಪೋಷಕರಿಗೆ ನಿರಾಳತೆ ತಂದ ಸರ್ಕಾರದ ನಿರ್ಧಾರ

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಈ ಮಸೂದೆಯೂ ದೆಹಲಿಯ ಪೋಷಕರ 52 ವರ್ಷಗಳ ಸುಧೀರ್ಘ ಕಾಯುವಿಕೆಯನ್ನು ಕೊನೆಗೊಳಿಸಿದೆ ಎಂದು ಕರೆದಿದ್ದದಾರೆ. ಈ ಹಿಂದೆ ಆಮ್ ಆದ್ಮಿ ಸರ್ಕಾರವು ಕೆಲವು ಖಾಸಗಿ ಶಾಲೆಗಳಿಗೆ ಒಲವು ತೋರುತ್ತಿತ್ತು ಮತ್ತು ನ್ಯಾಯಾಲಯದ ಆದೇಶಗಳನ್ನು ನಿಯಮಗಳನ್ನು ದುರ್ಬಲಗೊಳಿಸುತ್ತಿತ್ತು ಎಂದು ಆರೋಪಿಸಿದರು.

ಮುಂದಿನ ಹಂತವೇನು?

ಈ ಮಸೂದೆಯು ಸದ್ಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರ ಒಪ್ಪಿಗೆಗಾಗಿ ಕಳುಹಿಸಲಾಗಿದ್ದು, ಅನುಮೋದನೆ ದೊರೆತರೆ, ದೆಹಲಿಯಾದ್ಯಂತ ಇದು ಜಾರಿಗೆ ಬರಲಿದೆ. ಎಲ್ಲ ಖಾಸಗಿ ಶಾಲಾ ಶುಲ್ಕ ಹೆಚ್ಚಳಕ್ಕೆ ಸರ್ಕಾರದ ಪೂರ್ವಾನುಮತಿ ಅಗತ್ಯವಿರುತ್ತದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net