

Maharaja: ಕಳೆದ ವರ್ಷ ಜೂನ್ 14ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ತಮಿಳು ನಟ ವಿಜಯ್ ಸೇತುಪತಿ ಅಭಿನಯದ ‘ಮಹಾರಾಜ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಕಾಣುವುದರ ಜತೆಗೆ ಭಾರತೀಯ ಸಿನಿ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಹಾಗೂ ಪ್ರಶಂಸೆ ಗಿಟ್ಟಿಸಿಕೊಂಡಿತು. ಪ್ರಸ್ತುತ ಒಟಿಟಿ ಪ್ಲಾಟ್ಫಾರ್ಮ್ ಆದ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್ಗೆ ಲಭ್ಯವಿರುವ ವಿಜಯ್ ಸೇತುಪತಿ ಚಿತ್ರಕ್ಕೆ ಭಾರತೀಯರು ಮಾತ್ರವಲ್ಲದೇ ಚೀನಾದ ಚಿತ್ರರಸಿಕರು ಕೂಡ ತಲೆಬಾಗಿದ್ದಾರೆ.
ಸೇತುಪತಿ ಅಭಿನಯದ 50ನೇ ಚಿತ್ರ ಇದಾಗಿದ್ದು, ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷೆಗೆ ತಕ್ಕಂತೆ ಆದಾಯ ಗಳಿಸಿತು. ತನ್ನ ಪಾತ್ರವರ್ಗ ಹಾಗೂ ಕಥಾಹಂದರಿಂದಲೇ ನೋಡುಗರ ಮನಗೆದ್ದ ಮಹಾರಾಜ, ಒಟಿಟಿಯಲ್ಲಿ ದಾಖಲೆ ಮಟ್ಟಕ್ಕೆ ವೀಕ್ಷಣೆ ಪಡೆದಿದ್ದು, ಚಿತ್ರತಂಡದ ಗೆಲುವಿಗೆ ಹೊಸ ಮುನ್ನುಡಿ ಬರೆಯಿತು. ವಿಜಯ್ ಸೇತುಪತಿ ಅಭಿನಯಕ್ಕೆ ಫಿದಾ ಆಗಿರುವ ಪ್ರೇಕ್ಷಕರು, ಯಾವ ಪಾತ್ರ ಕೊಟ್ಟರು ಅದಕ್ಕೆ ಜೀವ ತುಂಬುವ ನಟರಲ್ಲಿ ನೀವು ಒಬ್ಬರು, ಇಂತಹ ಒಳ್ಳೊಳ್ಳೆ ಪಾತ್ರಗಳು ನಿಮಗೇ ಸಿಗಲಿ ಎಂದು ಆಶಿಸಿದ್ದಾರೆ. ಭಾರತೀಯ ಸಿನಿಪ್ರಿಯರ ಮೆಚ್ಚುಗೆ ಪಡೆದಿದ್ದ ಮಹಾರಾಜ ಈಗ ಚೀನಾದಲ್ಲಿ ಬಿಡುಗಡೆಯಾಗಿ, ಅಲ್ಲಿನ ಪ್ರೇಕ್ಷಕರ ಕಣ್ಣಂಚಲ್ಲಿ ನೀರು ತರಿಸಿರುವುದು ವಿಶೇಷ.
ನಿಥಿಲನ್ ಸಾಮಿನಾಥನ್ ನಿರ್ದೇಶನದ ಈ ಚಿತ್ರ ಕಳೆದ ವರ್ಷ ನವೆಂಬರ್‌ನಲ್ಲಿ ಚೀನಾದಲ್ಲಿ ಬಿಡುಗಡೆಯಾಯಿತು. ಅಂದಿನಿಂದ ಇಂದಿನವರೆಗೂ ಚೀನಾದ ಸಿನಿ ಅಭಿಮಾನಿಗಳಿಂದ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಮಹಾರಾಜ ಚಿತ್ರ ನೋಡಿ ಚೀನಿಗರು ಕಂಬನಿ ಮಿಡಿದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಒಂದಷ್ಟು ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡುತ್ತಿರುವುದೇ ಚಿತ್ರದ ಗೆಲುವಿಗೆ ಜ್ವಲಂತ ಸಾಕ್ಷಿಯಾಗಿದೆ.
ಪೂರ್ವ ಲಡಾಖ್‌ನಲ್ಲಿರುವ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ಉದ್ದಕ್ಕೂ ಎರಡೂ ದೇಶಗಳು ಗಸ್ತು ತಿರುಗುವಿಕೆ ಮತ್ತು ಸೈನ್ಯವನ್ನು ಹೊರಹಾಕುವ ಬಗ್ಗೆ ಒಪ್ಪಂದಕ್ಕೆ ಬಂದ ನಂತರದಲ್ಲಿ ಚೀನಾದಲ್ಲಿ ಪ್ರದರ್ಶನಗೊಂಡ ಮೊದಲ ಭಾರತೀಯ ಚಲನಚಿತ್ರ ಎಂಬ ಹೆಗ್ಗಳಿಕೆಗೆ 'ಮಹಾರಾಜ' ಪಾತ್ರವಾಗಿದೆ. ಚೀನಾದಲ್ಲಿ ತೆರೆಕಂಡ ತಮಿಳು ಚಿತ್ರ ಅಲ್ಲಿನ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿರುವುದು ಸದ್ಯ ಭಾರತೀಯ ಚಿತ್ರೋದ್ಯಮಕ್ಕೆ ಹೊಸ ಆಯಾಮ ತಂದುಕೊಟ್ಟಿದೆ,(ಏಜೆನ್ಸೀಸ್).