

Gambhir Mocks: ಇಲ್ಲಿನ ಸಿಡ್ನಿ ಕ್ರೀಡಾಂಗಣದಲ್ಲಿ ನಡೆದ ಭಾರತ (Team India) ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಅಂತಿಮ ಕದನದಲ್ಲಿ ಆತಿಥೇಯ ಆಸ್ಟ್ರೇಲಿಯಾ ಪಡೆ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಟಿಕೆಟ್ ಖಾತ್ರಿ ಪಡಿಸಿಕೊಂಡಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 3-1 ಅಂತರದಲ್ಲಿ ವಶಪಡಿಸಿಕೊಂಡಿದೆ. ಆಸೀಸ್ ವಿರುದ್ಧ ಗೆಲುವು ಸಾಧಿಸುವಲ್ಲಿ ಟೀಮ್ ಇಂಡಿಯಾ ಕಡೆಗೂ ವಿಫಲವಾಗಿದ್ದು, ಕ್ರಿಕೆಟ್ ಪ್ರಿಯರಲ್ಲಿ ತೀವ್ರ ಬೇಸರ ಮೂಡಿಸಿದೆ.
ಇನ್ನು ಐದನೇ ಪಂದ್ಯದಲ್ಲಿ ಆಸೀಸ್ ಪಡೆಯ ಯುವ ಬ್ಯಾಟರ್ ಸ್ಯಾಮ್ ಕೊನ್ಸ್ಟಾಸ್ ಮತ್ತು ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ನಡುವಿನ ಮಾತಿನ ಚಕಮಕಿ ಕುರಿತು ಆಸ್ಟ್ರೇಲಿಯಾ ತಂಡದ ಹೆಡ್ ಕೋಚ್ ಆ್ಯಂಡ್ರ್ಯೂ ಮೆಕ್ಡೊನಾಲ್ಡ್ ಕಿಡಿಕಾರಿದ್ದರು. ಬುಮ್ರಾ ಮಾಡಿದ್ದು ತಪ್ಪು, ಅವರು ನಮ್ಮ ಬ್ಯಾಟರ್ಗೆ ಮೈದಾನದಲ್ಲೇ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದರು. ಇದಕ್ಕೆ ತಮ್ಮ ಶೈಲಿಯಲ್ಲೇ ಖಡಕ್ ತಿರುಗೇಟು ನೀಡಿರುವ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್, ಇಲ್ಲಿ ನೀವು ಅಂದುಕೊಂಡಂತೆ ಮೃದುವಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ.
"ಕ್ರಿಕೆಟ್ ಬಲಿಷ್ಠ ಯುವಕರು ಆಡುವ ಒಂದು ಟಫ್ ಸ್ಫೋರ್ಟ್. ಅಷ್ಟೊಂದು ಮೃದು ಸ್ವಭಾವದಲ್ಲಿ ಇರಲು ಆಗಲ್ಲ. ಇಲ್ಲಿ ಸ್ಯಾಮ್ಗೆ ಭಯ ಹುಟ್ಟಿಸುವಂಥದ್ದೇನೂ ಇರಲಿಲ್ಲ ಎಂದು ನಾನು ಭಾವಿಸುತ್ತೇನೆ. ಸ್ಟ್ರೈಕ್ನಲ್ಲಿದ್ದ ಉಸ್ಮಾನ್ ಖವಾಜಾ ಅನಗತ್ಯವಾಗಿ ಸಮಯ ತೆಗೆದುಕೊಳ್ಳುತ್ತಿದ್ದಾಗ ಜಸ್ಪ್ರೀತ್ ಬುಮ್ರಾ ಬೌಲಿಂಗ್ನಲ್ಲಿದ್ದರು. ಈ ವೇಳೆ ಸುಖಾಸುಮ್ಮನೆ ಯಾವ ವಿಚಾರ ಇಲ್ಲದಿದ್ದರೂ ಬುಮ್ರಾ ಬಳಿ ಹೋಗಿದ್ದು ಕೊನ್ಸ್ಟಾಸ್ ತಪ್ಪು. ಜಸ್ಪ್ರೀತ್ ಬುಮ್ರಾ ಜತೆಗೆ ಮಾತಿಗಿಳಿಯುವ ಅವಶ್ಯಕತೆಯೇ ಇರಲಿಲ್ಲ ಮತ್ತು ಅಲ್ಲಿ ಅವರಿಬ್ಬರ ನಡುವೆ ಯಾವುದೇ ಮಾತಗೂ ಜಾಗವಿರಲಿಲ್ಲ. ಮಧ್ಯೆ ಪ್ರವೇಶಿಸುವುದು ಅಂಪೈರ್ನ ಕೆಲಸವಾಗಿತ್ತು. ಹೀಗಿರುವಾಗ ಆತನಿಗೆ ಅಲ್ಲಿ ಏನು ಕೆಲಸ" ಎಂದು ಗಂಭೀರ್ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ,(ಏಜೆನ್ಸೀಸ್).