ಹಿರಿಯರನ್ನು ನೆನೆಯುವ ಮಹಾಲಯ ಅಮಾವಾಸ್ಯೆ

Mahalaya Amavasye
Published on

| ಮಂಡಗದ್ದೆ ಪ್ರಕಾಶಬಾಬು ಕೆ.ಆರ್.

ಹಿಂದೂ ಪಂಚಾಂಗದ ಪ್ರಕಾರ ವರ್ಷದ ಪ್ರತಿ ಮಾಸದಲ್ಲೂ ಎರಡು ಪಕ್ಷಗಳಿವೆ. ಒಂದು ಶುಕ್ಲಪಕ್ಷ, ಇನ್ನೊಂದು ಕೃಷ್ಣಪಕ್ಷ. ಪ್ರತಿ ವರ್ಷ ಭಾದ್ರಪದಮಾಸದಲ್ಲಿ ಬರುವ ಕೃಷ್ಣಪಕ್ಷವನ್ನು ಪಿತೃಪಕ್ಷ ಎನ್ನುವರು. ಪಾಡ್ಯತಿಥಿಯಿಂದ ಅಮಾವಾಸ್ಯೆಯವರೆಗಿನ ಹದಿನೈದು ದಿನಗಳ ಕಾಲ ಚೂಡಾಕರ್ಮ, ಬ್ರಹ್ಮೋಪದೇಶ, ಮದುವೆ, ಗೃಹಪ್ರವೇಶ ಮುಂತಾದ ಶುಭಕಾರ್ಯಗಳನ್ನು ಮಾಡುವುದಿಲ್ಲ. ಈ ದಿನಗಳನ್ನು ಪಿತೃಕಾರ್ಯಕ್ಕಾಗಿಯೇ ಮೀಸಲಾಗಿಟ್ಟಿರುವರು.

ಈ ಅಮಾವಾಸ್ಯೆಯು ಇತರ ಎಲ್ಲ ಅಮಾವಾಸ್ಯೆಗಳಿಗಿಂತ ವಿಶೇಷವಾದದ್ದು. ಆದ್ದರಿಂದ ಇದನ್ನು ಮಹಾಲಯ ಅಮಾವಾಸ್ಯೆ ಎಂದು ಕರೆಯುತ್ತಾರೆ. ಇದು ಪಿತೃಪಕ್ಷದ ಕೊನೆಯ ದಿನ. ಹೀಗಾಗಿ ಇದನ್ನು ಸರ್ವಪಿತೃ ಅಮಾವಾಸ್ಯೆ ಎಂದು ಕುಡ ಕರೆಯುತ್ತಾರೆ. ಅಗಲಿದ ಪಿತೃಗಳನ್ನು ಸ್ಮರಿಸಿ ಈ ದಿನ ತಿಲತರ್ಪಣ, ಜಲತರ್ಪಣ, ಪಿಂಡಪ್ರದಾನ ಮಾಡಲಾಗುತ್ತದೆ. ಈ ದಿವಸ ಮಾಡಿದ ಶ್ರಾದ್ಧಕ್ಕೆ ಪವಿತ್ರವಾದ ಗಯಾಕ್ಷೇತ್ರದಲ್ಲಿ ಶ್ರಾದ್ಧ ಮಾಡಿದಷ್ಟೇ ಫಲ ಮತ್ತು ಮಾನ್ಯತೆ ಇದೆ.

ಋಣಗಳಲ್ಲಿ ಮೂರು ವಿಧ. ದೇವ ಋಣ, ಋಷಿ ಋಣ, ಪಿತೃ ಋಣ. ದೇವ ಋಣ ಮತ್ತು ಋಷಿ ಋಣಗಳನ್ನು ಹೇಗಾದರೂ ಮಾಡಿ ತೀರಿಸಬಹುದು, ಆದರೆ ಮಾತಾ-ಪಿತೃಗಳ ಋಣ ತೀರಿಸಲು ಆಗುವುದಿಲ್ಲ ಎನ್ನುತ್ತದೆ ಶಾಸ್ತ್ರ. ಇಂತಹ ತಂದೆ-ತಾಯಿಯ ಋಣವನ್ನು ತೀರಿಸಲು ಅವರು ನಿಧನರಾದ ನಂತರ ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಮಾಡಬೇಕು. ಹುಟ್ಟಿದಂದಿನಿಂದ ಸಾಯುವವರೆಗೂ ಮಾನವನಿಗೆ ವಿಧಿಸಿರುವ ಒಟ್ಟು ಹದಿನಾರು ಸಂಸ್ಕಾರಗಳಲ್ಲಿ ಶ್ರಾದ್ಧಕರ್ಮವೂ ಒಂದು. ದೇಶದ ವಿವಿಧ ಧರ್ಮ, ಜಾತಿ, ಮತಗಳವರೂ ಅವರವರ ಧರ್ಮಕ್ಕೆ ಅನುಗುಣವಾಗಿ ಶ್ರಾದ್ಧಕರ್ಮವನ್ನು ಆಚರಿಸುವರು. ಶ್ರದ್ಧೆಯಿಂದ ಮಾಡುವ ಪಿತೃಗಳ ಆರಾಧನೆಗೆ ಶ್ರಾದ್ಧ ಎನ್ನುವರು. ಪಿತೃಪಕ್ಷದ ಹದಿನಾಲ್ಕು ದಿನಗಳ ಅವಧಿಯಲ್ಲಿ ಶ್ರಾದ್ಧಕರ್ಮವನ್ನು ಮಾಡದೆ ಇದ್ದಲ್ಲಿ ಮಹಾಲಯ ಅಮಾವಾಸ್ಯೆಯಂದಾದರೂ ಹಿರಿಯರನ್ನು ನೆನೆಯುತ್ತ ಶ್ರಾದ್ಧವನ್ನು ಮಾಡಬೇಕು. ಶ್ರಾದ್ಧ ಮಾಡಲು ಮರೆತವರು ಈ ದಿನ ಶ್ರಾದ್ಧವನ್ನು ಮಾಡಬಹುದು. ಇದನ್ನೂ ಓದಿ: ಜಪಾನಿನ ನೂತನ ಪ್ರಧಾನಿ ಸುಗಾ ಆಯ್ಕೆ ಅಧಿಕೃತ- ಅಭಿನಂದಿಸಿದ್ರು ಭಾರತದ ಪ್ರಧಾನಿ ಮೋದಿ

ಮಾನವಲೋಕದ ಒಂದು ವರ್ಷದ ಅವಧಿಯು ಪಿತೃಲೋಕದ ಒಂದು ದಿನಕ್ಕೆ ಸಮ ಎಂದು ಶಾಸ್ತ್ರ ಹೇಳುತ್ತದೆ. ಇದರ ಪ್ರಕಾರ ಈ ಲೋಕದಲ್ಲಿ ನಾವು 365 ದಿನಗಳಿಗೆ ಒಮ್ಮೆ ಶ್ರಾದ್ಧವನ್ನು ಆಚರಿಸಿದರೆ ಅದು ಪಿತೃಲೋಕದಲ್ಲಿರುವ ಪಿತೃಗಳಿಗೆ ಪ್ರತಿದಿನವೂ ಆಹಾರ ಒದಗಿಸಿದಂತೆ. ದೈವಾರಾಧನೆಯನ್ನು ಮರೆತರೂ ಶ್ರಾದ್ಧಕಾರ್ಯವನ್ನು ಮಾತ್ರ ಮರೆಯಬಾರದು ಎನ್ನುತ್ತದೆ ಶಾಸ್ತ್ರ. ಪಿತೃಗಳು ಸ್ಥೂಲಶರೀರಿಗಳಾಗಿ ನಮ್ಮ ಕಣ್ಣ ಮುಂದೆ ಇಲ್ಲದಿದ್ದರೂ ಅವರು ಸೂಕ್ಷ್ಮ ಶರೀರದಿಂದ ಇದ್ದುಕೊಂಡೇ ಪರೋಕ್ಷವಾಗಿ ನಾವು ಮಾಡುವ ಶ್ರಾದ್ಧಕರ್ಮವನ್ನು ವೀಕ್ಷಿಸುತ್ತಾರೆ. ಪಿತೃಪಕ್ಷದಲ್ಲಿ ಮಾಡುವ ಪಿತೃಕಾರ್ಯವು ಮಾತಾ-ಪಿತೃಗಳಿಗಲ್ಲದೆ ಅಜ್ಜ-ಅಜ್ಜಿ, ಮುತ್ತಜ್ಜ-ಮುತ್ತಜ್ಜಿಯರಿಗೆ ಹಾಗೂ ರಕ್ತಸಂಬಂಧ ಇರುವ ಎಲ್ಲರಿಗೂ ಸೇರುತ್ತದೆ. ಇದರಿಂದ ಪರಲೋಕದಲ್ಲಿರುವ ಪಿತೃಗಳಿಗೆ ಸದ್ಗತಿಯಾಗಿ, ಕುಟುಂಬವರ್ಗದವರಿಗೆ ಸುಖ, ಶಾಂತಿ, ನೆಮ್ಮದಿ ಸಿಗಲಿ ಎಂದು ಅವರು ಆಶೀರ್ವಾದ ಮಾಡುವರು. ಅವರ ಆಶೀರ್ವಾದದಿಂದ ವಿವಾಹ, ಸಂತಾನ, ಸುಖ ಹಾಗೂ ಧನಲಾಭಗಳು ಉಂಟಾಗುತ್ತವೆ. ಹಿರಿಯರಿಗಷ್ಟೇ ಅಲ್ಲದೆ ಮನೆಯಲ್ಲಿ ಸಾಕಿದ ಹಸು, ಆಡು, ನಾಯಿ, ಗಿಡ-ಮರಗಳ ನೆನಪಿನಲ್ಲಿಯೂ ತರ್ಪಣವನ್ನು ನೀಡಬಹುದು. ಜಾತಕದಲ್ಲಿ ಪಿತೃದೋಷ, ಪಿತೃಶಾಪ ಎಂಬುದು ಬರುವುದು. ಈ ದೋಷಗಳೆಂದರೆ ಸಂತಾನಭಾಗ್ಯಕ್ಕೆ, ಮಾಂಗಲ್ಯಭಾಗ್ಯಕ್ಕೆ, ಮನೆಯ ಏಳಿಗೆಗೆ ತೊಂದರೆ ಉಂಟಾಗುವುದು. ಆಗ ಜಾತಕವನ್ನು ತೋರಿಸಿ ದೋಷವನ್ನು ಕಂಡುಹಿಡಿದು ಪರಿಹಾರ ಮಾಡಿಕೊಂಡರೆ ದೋಷದಿಂದ ಮುಕ್ತರಾಗಬಹುದು. ಹೀಗಾಗಿ ಮಹಾಲಯ ಅಮಾವಾಸ್ಯೆಯಾದ ಇಂದು (ಸಂಜೆ 04.51ರ ಒಳಗೆ) ಶ್ರದ್ಧಾ-ಭಕ್ತಿಯಿಂದ ಪಿತೃಕಾರ್ಯವನ್ನು ಆಚರಿಸುವುದು ಉತ್ತಮ. ಶ್ರಾದ್ಧದಲ್ಲಿ ಶ್ರದ್ಧೆ ಮುಖ್ಯವೇ ಹೊರತು ಆಡಂಬರ, ತೋರಿಕೆ ಅಥವಾ ಪ್ರಚಾರವಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net