

| ರಾಮ ಸುಬ್ರಾಯ ಶೇಟ್
ಕಷ್ಟಕಾರ್ಪಣ್ಯಗಳು ಮಹಾಪುರುಷರನ್ನೇ ಹೆಚ್ಚಾಗಿ ಕಾಡುತ್ತವೆ. ಇದು ಅವರ ಸತ್ವಪರೀಕ್ಷೆಗೂ ಇದ್ದೀತು. ಪುಟವಿಕ್ಕಿ ಕಾಯಿಸಿದಾಗಲೇ ಸುವರ್ಣಕ್ಕೆ ಹೆಚ್ಚು ಹೊಳಪು. ಉದಾಹರಣೆಗೆ ರಾಜಾ ಹರಿಶ್ಚಂದ್ರ, ಪಾಂಡವರು, ನಳದಮಯಂತಿ ಮುಂತಾದವರು. ಅಂತೆಯೇ ತ್ರೇತಾಯುಗದ ಶ್ರೀರಾಮಚಂದ್ರನಿಗೆ ಪರಿಪರಿಯ ಪರೀಕ್ಷೆಗಳೂ, ಸಂಕಟಗಳೂ ಬಂದೊದಗಿದವು. ಹೆಜ್ಜೆಹೆಜ್ಜೆಗೂ ಹೊಸ ಸವಾಲು. ಎಲ್ಲವನ್ನೂ ಜಯಿಸಿ ಆತ ಜಯರಾಮನಾಗಿ ವಿಶ್ವಪ್ರಖ್ಯಾತಿ ಹೊಂದಿದ. ಮಂಥರೆ ಸಲಹೆ ಮೇರೆಗೆ ಕೈಕೆಯಿ ಷರತ್ತಿಗೆ ಶ್ರೀರಾಮ ವನವಾಸಕ್ಕೆ ತೆರಳುವ ದುಸ್ಥಿತಿ ಬಂದೊದಗಿತು. ಶ್ರೀರಾಮನೊಡನೆ ಅವನ ಧರ್ಮಪತ್ನಿ ಜಾನಕಿಯೂ ಹೊರಟಳು, ಆತ್ಮೀಯ ಸಹೋದರ ಲಕ್ಷ್ಮಣನೂ ಹಠ ಹಿಡಿದು ಅಣ್ಣನನ್ನು ಹಿಂಬಾಲಿಸಿದ. ಅಯೋಧ್ಯಾ ನಗರವೇ ರಾಮ ಲಕ್ಷ್ಮಣ ಸೀತೆಯರ ಅಗಲುವಿಕೆಗೆ ಕಣ್ಣೀರು ಸುರಿಸಿತು. ಕಾಡಿಗೆ ಹೋಗಕೂಡದೆಂದು ಪ್ರತಿಯೊಬ್ಬ ಪ್ರಜೆಯ ಒತ್ತಾಯ. ಪಿತೃವಾಕ್ಯಪರಿಪಾಲಕನಾದ ಶ್ರೀರಾಮನು ಪ್ರಜೆಗಳ ವಿನಂತಿಯನ್ನು ನಯವಾಗಿ ತಿರಸ್ಕರಿಸಿದ.
ಮೂವರೂ ರಥವನ್ನೇರಿದ್ದಾರೆ; ಕುದುರೆಗಳೂ ಭಾರವಾದ ಮನಸ್ಸಿನಿಂದ ರಥವನ್ನು ಎಳೆಯುತ್ತಿವೆ; ಅಯೋಧ್ಯೆಯ ಪ್ರಜೆಗಳೂ ಹಿಂಬಾಲಿಸಿ ಬರುತ್ತಿದ್ದಾರೆ. ಮಕ್ಕಳಿಂದ ವೃದ್ಧರವರೆಗೆ! ಚಿಕ್ಕ ಮಕ್ಕಳನ್ನು ಸೊಂಟದಲ್ಲಿ ಕೂರಿಸಿಕೊಂಡು ಬರುತ್ತಿರುವ ಮಾತೆಯರನ್ನು ಕಂಡಾಗ ಶ್ರೀರಾಮನ ಮನಸ್ಸಿಗೆ ತುಂಬ ನೋವಾಯಿತು. ರಥದ ವೇಗಕ್ಕೆ ಹೆಜ್ಜೆ ಹಾಕಲಾಗದ ಕೆಲವು ವೃದ್ಧರ ಪರಿಸ್ಥಿತಿ ಕಂಡು ರಾಮನಿಗೆ ಅಯ್ಯೋ ಎನಿಸಿತು. ಸಾರಥಿಗೆ ರಥವನ್ನು ನಿಲ್ಲಿಸಲು ಸೂಚಿಸಿದ ಮತ್ತು ಸತಿಗೂ ಸಹೋದರನಿಗೂ ಹೇಳಿದ- ‘ಆ ವಯೋವೃದ್ಧರಿಗೆ ವೇಗವಾಗಿ ನಡೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಾವು ನಿಧಾನವಾಗಿ ನಡೆದು ಹೋಗೋಣ’ ಎಂದು ರಥದಿಂದ ಇಳಿದು ಅವರೊಂದಿಗೆ ಹೆಜ್ಜೆ ಹಾಕಿದ. ಇದರಿಂದ ಪ್ರಜೆಗಳ ಮನಸ್ಸು ತುಂಬಿ ಬಂತು. ಇದನ್ನೂ ಓದಿ: 15ನೇ ಶತಮಾನದ ಶ್ರೀರಾಮ-ಸೀತಾ-ಲಕ್ಷ್ಮಣನ ವಿಗ್ರಹಗಳನ್ನು ಹಸ್ತಾಂತರಿಸಿದ ಯುಕೆ; ಯಾವಾಗ ಕಳವಾಗಿದ್ದವು ಗೊತ್ತಾ?
ಇಂಗಿತಜ್ಞನಾದ ಶ್ರೀರಾಮ ತನಗಾಗಿ ಇನ್ನೊಬ್ಬರು ಕಷ್ಟಪಡುವುದನ್ನು ಎಂದಿಗೂ ಸಹಿಸುತ್ತಿರಲಿಲ್ಲ. ಇಂತಹ ಔದಾರ್ಯವಿರುವವರು ಅತ್ಯಂತ ವಿರಳ. ಇಂತಹ ಸಜ್ಜನಿಕೆ, ಆದರ್ಶ ವ್ಯಕ್ತಿತ್ವ, ಗುರು-ಹಿರಿಯರನ್ನು ಗೌರವಿಸುವ ಗುಣ ರಾಜಾರಾಮನಲ್ಲಿ ಇರುವುದರಿಂದ ಆತ ವಿಶ್ವಪ್ರಸಿದ್ಧಿ ಪಡೆದಿದ್ದಾನೆ. ಪ್ರಭುವು ಪ್ರಜೆಗಳ ಸೇವೆಗಾಗಿ ಎಂಬುದನ್ನು ನಿರೂಪಿಸಿದ್ದಾನೆ. ಪ್ರತಿಯೊಬ್ಬರ ಮನದಲ್ಲಿ ಮನೆ ಮಾಡಿದ್ದಾನೆ; ಇದು ವಿಶ್ವದ ಎಲ್ಲರಿಗೂ ಮಾರ್ಗದರ್ಶನವಾಗಬೇಕು. ಇಂಥ ಮಹಾಮಹಿಮರ ಬದುಕಿನ ಆದರ್ಶ, ಮೌಲ್ಯಗಳು ನಮ್ಮ ಬದುಕಿನ ಮಂತ್ರವಾಗಬೇಕು. ಶ್ರೀರಾಮಚಂದ್ರ, ಶ್ರೀಕೃಷ್ಣನ ಬದುಕಿನ ಹಾದಿಯಲ್ಲಿ ಇಂಥ ಜೀವನಾದರ್ಶಗಳು ಹೇರಳ.
ಇತರರ ಕಷ್ಟಗಳಿಗೆ ಹೇಗೆ ಸ್ಪಂದಿಸಬೇಕು, ಸಂಬಂಧಗಳ ಮಹತ್ವ, ನಿರ್ವಹಿಸಬೇಕಾದ ಕರ್ತವ್ಯ, ಸಮಸ್ಯೆಗಳು ಬಂದಾಗ ಮುನ್ನುಗ್ಗಬೇಕಾದ ಪರಿ, ಎಲ್ಲರೊಡನೆ ಸಹಬಾಳ್ವೆಯಿಂದ ಬದುಕುವ ಕಲೆ, ಪರರ ಹಿತದಲ್ಲೇ ನಮ್ಮ ಸಂತೋಷವನ್ನು ಕಾಣುವ ಸಾರ್ಥಕತೆ, ಗುರು-ಹಿರಿಯರಿಗೆ ತೋರಬೇಕಾದ ಗೌರವ, ವಿನಯ, ತಾಳ್ಮೆಯನ್ನು ಭೂಷಣವಾಗಿಸಿಕೊಂಡ ವ್ಯಕ್ತಿತ್ವ-ಹೀಗೆ ಜೀವನಧರ್ಮದ ದರ್ಶನವೇ ಮಹಾಪುರುಷರ ಬದುಕಿನಿಂದ ಆಗುತ್ತದೆ. ಆದರೆ, ಅದನ್ನು ನಾವು ಅಳವಡಿಸಿಕೊಳ್ಳದಿದ್ದರೆ ಏನು ಪ್ರಯೋಜನ? ಮಹಾಪುರುಷರ ಜೀವನಹಾದಿಯಲ್ಲಿ ಸಾಗುತ್ತ ನಮ್ಮ ಬದುಕನ್ನು ಸಾರ್ಥಕವಾಗಿಸಿಕೊಳ್ಳೋಣ.
(ಲೇಖಕರು ಗಮಕ ವ್ಯಾಖ್ಯಾನಕಾರರು)