ಜಪಾನಿನ ನೂತನ ಪ್ರಧಾನಿ ಸುಗಾ ಆಯ್ಕೆ ಅಧಿಕೃತ- ಅಭಿನಂದಿಸಿದ್ರು ಭಾರತದ ಪ್ರಧಾನಿ ಮೋದಿ

suga elected as pm of japan
Published on

ಟೋಕಿಯೋ: ಜಪಾನಿನ ನೂತನ ಪ್ರಧಾನಮಂತ್ರಿಯಾಗಿ ಯೋಷಿಹಿಡೆ ಬುಧವಾರ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಪ್ರಧಾನಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವರು ಜಪಾನ್ ಸಂಸತ್ತಿನ ಕೆಳಮನೆಯ 462 ಮಾನ್ಯ ಮತಗಳ ಪೈಕಿ 314 ಮತಗಳನ್ನಿ ಪಡೆದು ಸುಲಭ ಗೆಲುವು ದಾಖಲಿಸಿದ್ದಾರೆ.

ಫಲಿತಾಂಶ ಘೋಷಿಸಿದ ಸಂಸತ್ತಿನ ಕೆಳಮನೆಯ ಸ್ಪೀಕರ್​ ತಡಮೋರಿ ಒಷಿಮಾ, ಫಲಿತಾಂಶವನ್ನು ಆಧರಿಸಿ ಹೇಳುವುದಾದರೆ ಯೋಷಿಹಿಡೆ ಸುಗಾ ಪ್ರಧಾನ ಮಂತ್ರಿ ಎಂದು ನಮ್ಮ ಸದನ ತೀರ್ಮಾನಿಸಿದೆ ಎಂದು ಪ್ರಕಟಿಸಿದರು. ಈ ಪ್ರಕಟಣೆ ಹೊರಬಿದ್ದ ಕೂಡಲೇ ಸುಗಾ ಅವರು ತಲೆಬಾಗಿ ಸದಸ್ಯರೆಲ್ಲರಿಗೂ ನಮಸ್ಕರಿಸಿದರು. ಇಂದೇ ಅವರು ಸಚಿವ ಸಂಪುಟವನ್ನು ರಚಿಸಲಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಶಿಂಜೋ ಅಬೆ ಅವರ ಸಂಪುಟದಲ್ಲಿದ್ದ ಬಹುತೇಕರು ಸುಗಾ ಅವರ ಸಂಪುಟದಲ್ಲೂ ಮುಂದುವರಿಯುವ ನಿರೀಕ್ಷೆ ಇದೆ. ಅಲ್ಲದೆ ಅಬೆ ಅವಧಿಯ ಎಲ್ಲ ನೀತಿ, ಯೋಜನೆಗಳನ್ನೂ ಸುಗಾ ಸರ್ಕಾರ ಮುಂದುವರಿಸಲಿದೆ.

ಸುಗಾ ಅವರ ಆಯ್ಕೆ ಅಧಿಕೃತವಾಗಿ ಘೋಷಣೆಯಾಗುತ್ತಿದ್ದಂತೆ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ.  ಆರಂಭದಲ್ಲಿ ಜಪಾನೀ ಭಾಷೆಯಲ್ಲಿ ಒಂದು ಟ್ವೀಟ್ ಮಾಡಿದ ಅವರು, ಬಳಿಕ ಆಂಗ್ಲಭಾಷೆಯಲ್ಲೂ ಒಂದು ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net