ಮಾಘ ಪೂರ್ಣಿಮಾ ಹಿನ್ನೆಲೆ ತ್ರಿವೇಣಿ ಸಂಗಮದಲ್ಲಿ ಭಕ್ತ ಸಾಗರ! ಮಹಾಕುಂಭದಲ್ಲಿ ಬಿಗಿ ಭದ್ರತೆ, ವಾಹನಗಳಿಗಿಲ್ಲ ಪ್ರವೇಶ | Magh Purnima

ವಿಜಯವಾಣಿ (2)
Published on

Magh Purnima: ಇಂದು (ಫೆ.12) ಮಹಾಕುಂಭ ಮೇಳದಲ್ಲಿ ಮಾಘ ಪೂರ್ಣಿಮಾ ಹಿನ್ನೆಲೆ 2 ಕೋಟಿಗೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಈಗಾಗಲೇ ತ್ರಿವೇಣಿ ಸಂಗಮದತ್ತ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಹಾಜರಾಗಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ.

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಹರಿದುಬರುತ್ತಿರುವ ಭಕ್ತರ ಸಂಖ್ಯೆ ಇಂದಿಗೂ ಕಡಿಮೆಯಾಗಿಲ್ಲ. ಮೌನಿ ಅಮಾವಾಸ್ಯೆಯ ಬಳಿಕವೂ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಭಕ್ತಾಧಿಗಳು ತ್ರಿವೇಣಿ ಸಂಗಮಕ್ಕೆ ಭೇಟಿ ನೀಡುತ್ತಿದ್ದಾರೆ. ಮೌನಿ ಅಮಾವಾಸ್ಯೆಯ ವೇಳೆ ಸಂಗಮಕ್ಕೆ ಕೋಟ್ಯಂತರ ಭಕ್ತರು ಹರಿದುಬಂದ ಹಿನ್ನೆಲೆ ಕಾಲ್ತುಳಿತ ಉಂಟಾಗಿ ಸುಮಾರು 40ಕ್ಕೂ ಅಧಿಕ ಮಂದಿ ಸಾವನ್ನಪ್ಪಿದರೆ, 100ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದರು. ಹೀಗಾಗಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರವಹಿಸಿರುವ ಯುಪಿ ಸರ್ಕಾರ, ಸ್ಥಳದಲ್ಲಿ ಬಿಗಿ ಭದ್ರತೆಯನ್ನು ಒದಗಿಸಿದೆ.

ಮಾಘ ಪೂರ್ಣಿಮಾ ಸ್ನಾನ ನಾಲ್ಕನೇ ಅಮೃತ ಸ್ನಾನವಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದು ಖಚಿತವಾಗಿದೆ. ಈ ಹಿನ್ನೆಲೆ ಸಿಎಂ ಯೋಗಿ ಆದಿತ್ಯನಾಥ್​ ಸರ್ಕಾರ, ಸ್ಥಳದ ಆಡಳಿತ ಮಂಡಳಿಗೆ ಹಲವು ನಿರ್ದೇಶನಗಳನ್ನು ನೀಡಿದೆ. ತ್ರಿವೇಣಿ ಸಂಗಮದ ಘಾಟ್​ ಬಳಿ ಹೆಚ್ಚುವರಿ ಪೊಲೀಸ್​ ಅಧಿಕಾರಿಗಳು ಆಗಮಿಸಿದ್ದು, ಯಾವುದೇ ಅಹಿತಕರ ಘಟನೆಗಳನ್ನು ನಡೆಯದಂತೆ ಕಟ್ಟೆಚ್ಚರ ವಹಿಸಿದ್ದಾರೆ.

ಭದ್ರತೆ ಬಗ್ಗೆ ಮಾತನಾಡಿದ ಅಧಿಕಾರಿ ವಿವೇಕ್ ಚತುರ್ವೇದಿ, "ಈ ಬಾರಿ ಪೂರ್ಣಿಮಾ ಸ್ನಾನಕ್ಕೆ ನಿರೀಕ್ಷೆಗೂ ಮೀರಿ ಜನ ಸೇರುವ ಸಾಧ್ಯತೆಗಳಿವೆ. ಹೀಗಾಗಿ ಎಲ್ಲಾ ರೀತಿಯಲ್ಲಿಯೂ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಇಂದು ಇಡೀ ದಿನ ಮಾಘ ಪೂರ್ಣಿಮಾ ಸ್ನಾನ ನಡೆಯಲಿದೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net