ಈ ಮ್ಯಾಗ್​ಜೀನ್​ ಬೆಲೆ 12 ಲಕ್ಷ ರೂ...! ಏನಿದೆ ಅಂಥದ್ದು ಇದರಲ್ಲಿ ಅಂತೀರಾ...?

Steve job- forune Mag
Published on

ನವದೆಹಲಿ: ಹಳೆಯ ವಸ್ತುಗಳೆಂದರೆ, ಅದಕ್ಕೊಂದು ಆ್ಯಂಟಿಕ್​ ವ್ಯಾಲ್ಯೂ ಇದ್ದೇ ಇರುತ್ತೆ. ಹಳೆಯದಾದಷ್ಟೂ ಅದಕ್ಕೆ ಬೆಲೆ ಹೆಚ್ಚು. ಆದರೂ, ಫಾರ್ಚೂನ್​ ನಿಯತಕಾಲಿಕೆಯ 1989ರ ಅಕ್ಟೋಬರ್​ಸಂಚಿಕೆ 12 ಲಕ್ಷ ರೂ.ಗೆ ಹರಾಜಾಗಿದೆ ಎಂದರೆ ಅದರಲ್ಲೇನೂ ವಿಶೇಷವಿದೆ ಎಂದೇ ಅರ್ಥ ಅಲ್ಲವೇ?

ಕೇವಲ 30 ವರ್ಷಗಳಷ್ಟು ಹಳೆಯ ಸಂಚಿಕೆ ಅಷ್ಟೊಂದು ಬೆಲೆ ನೀಡಿ ಕೊಂಡುಕೊಳ್ಳಲು ಕಾರಣ ಅದರಲ್ಲಿದ್ದ ಸಹಿ.. ಹೌದು ಆ ಸಹಿ ಆ್ಯಪಲ್​ ಸಹ-ಸಂಸ್ಥಾಪಕ ಸ್ಟೀವ್​ ಜಾಬ್​ನದ್ದು ಎಂಬುದು ಇನ್ನೂ ವಿಶೇಷ.

ಹಾಗಂತಾ ಇಡೀ ಸಂಚಿಕೆ ಮಾರಾಟವಾಗಿಲ್ಲ ಕೇವಲ ಮುಖಪುಟಕ್ಕಷ್ಟೇ ಆ ಬೆಲೆ ನೀಡಲಾಗಿದೆ. ಸ್ಟೀವ್​ ಜಾಬ್​ ನೆಕ್ಟ್​ ಐಎನ್​ಸಿ ಎಂಬ ಕಂಪನಿ ಹುಟ್ಟು ಹಾಕಿದ ಬಳಿಕ ಸಂದರ್ಶನ ನಡೆಸಿ ಪ್ರಕಟಿಸಲಾದ ಮುಖಪುಟವದು. ಅದರ ಮೇಲೆ To Terry ಎಂದು ಬರೆದು ಸ್ಟೀವ್​ ಜಾಬ್​ ಸಹಿ ಹಾಕಿದ್ದಾರೆ.

ಅಷ್ಟಕ್ಕೂ ಟೆರ್ರಿ ಯಾರು ಎಂದರೆ, ಸ್ಟೀವ್​ ಜಾಬ್​ನ ಲಿಮೋಸಿನ್​ನ ಚಾಲಕನಾಗಿದ್ದ. ಆತನ ಕೋರಿಕೆ ಮೇರೆಗೆ ಸ್ಟೀವ್​ ಜಾಬ್​ ಆ ಸಂಚಿಕೆ ಮೇಲೆ ಸಹಿ ಹಾಕಿದ್ದರು. ಜತೆಗೆ ಚಾಲಕನ ಕೋರಿಕೆ ಬಗ್ಗೆ ಲಿಮೋಸಿನ್​ ಕಂಪನಿಗೆ ಜಾಬ್​ ದೂರು ನೀಡಿದ್ದರು ಎಂದು ಕೂಡ ವರದಿಯಾಗಿತ್ತು.

ಸದ್ಯ ಸ್ಟೀವ್​ ಜಾಬ್​ ಸಹಿ ಹಾಗು ಆತನ ಜೀವನದ ಬಗ್ಗೆ ಸಂಬಂಧಿಸಿದ ವಸ್ತುಗಳಿಗೆ ಎಲ್ಲಿಲ್ಲದ ಬೆಲೆ ಇದೆ. ಇತ್ತೀಚೆಗಷ್ಟೇ ಸ್ಟೀವ್​ ಜಾಬ್​ ಸಹಿ ಹಾಕಿದ್ದ ಫ್ಲಾಫಿ ಡಿಸ್ಕ್​ 60 ಲಕ್ಷ ರೂ.ಗಳಿಗೆ ಹರಾಜಾಗಿತ್ತು. ಆತನ ಸಹಿ ಇರುವ ವಸ್ತುಗಳು 35-40 ಲಕ್ಷ ರೂ.ಗಳಿಗೆ ಹರಾಜಾಗುತ್ತೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net